ಸನ್ಮಾರ್ಗ ವಾರ್ತೆ
ರಾಂಚಿ, ಮಾ. 25: ಸರಕಾರಿ ಆಸ್ಪತ್ರೆಯ ಕೊರೊನಾ ಐಸೊಲೇಶನ್ ವಾರ್ಡಿನಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿದ್ದ ವೈದ್ಯ ದಂಪತಿಗಳು ರಾಜೀನಾಮೆ ನೀಡಿದ್ದಾರೆ. ಝಾರ್ಕಂಡ್ ವೆಸ್ಟ್ ಸಿಂಗ್ಬು ಜಿಲ್ಲೆಯಲ್ಲಿ ಐಸೊಲೇಶನ್ ವಾರ್ಡಿನಲ್ಲಿ ಕರ್ತವ್ಯ ನಿಗದಿಗೊಳಿಸಿದೊಡನೆ ವೈದ್ಯ ದಂಪತಿ ರಾಜೀನಾಮೆಯನ್ನು ಸಂಬಂಧಪಟ್ಟವರಿಗೆ ವಾಟ್ಸ್ ಅಪ್ ಮತ್ತು ಇಮೇಲ್ ಮೂಲಕ ಕಳುಹಿಸಿದ್ದಾರೆ. ವೈದ್ಯರಾದ ಅಲೋಕ್ ಟರ್ಕಿ, ಪತ್ನಿ ಸೌಮ್ಯ ತುರ್ತು ಅಗತ್ಯವೇಳೆ ರಾಜೀನಾಮೆ ಸಲ್ಲಿಸಿದ್ದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಆರೋಗ್ಯ ಕಾರ್ಯದರ್ಶಿ ಡಾ. ನಿತಿನ್ ಮದನ್ ಕುಲ್ಕರ್ಣಿ ತಿಳಿಸಿದ್ದಾರೆ.
ಆರೋಗ್ಯ ಕಾರ್ಯದರ್ಶಿಯವರ ನಿರ್ದೇಶನದ ಪ್ರಕಾರ ಡಾ. ಅಲೋಕ್ ಟರ್ಕಿಕಿಗೆ 24 ಗಂಟೆಗಳ ಅಂತಿಮ ಎಚ್ಚರಿಕೆ ನೀಡಲಾಗಿದೆ. ಅವರು ಕರ್ತವ್ಯಕ್ಕೆ ಹಾಜರಾಗದಿದ್ದರೆ ಅವರ ವಿರುದ್ಧ ಎಪಿಡಿಕ್ ಡೀಸಿಸ್ ಆಕ್ಟ್ ಪ್ರಕಾರ ಕೇಸು ನೋಂದಾಯಿಸಲಾಗುವುದು ಎಂದು ಸದರ್ ಆಸ್ಪತ್ರೆಯ ಸಿವಿಲ್ ಸರ್ಜನ್ ಡಾ. ಮಂಜು ದುಬೆ ಹೇಳಿದರು. ಧುಂಕ ಮೆಡಿಕಲ್ ಕಾಲೇಜಿಗೆ ರಾಜೀನಾಮೆ ನೀಡಿ ಅಲೋಕ್ ಇತ್ತೀಚೆಗೆ ಸದರ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದರು. ಶನಿವಾರದಿಂದ ಅವರಿಗೆ ಐಸೊಲೇಶನ್ ಕರ್ತವ್ಯ ನಿಗದಿಗೊಳಿಸಲಾಗಿತ್ತು. ಪತ್ನಿ ಸೌಮ್ಯರ ಆರೋಗ್ಯ ಸಮಸ್ಯೆ ಯನ್ನು ತೋರಿಸಿ ಅವರು ರಾಜೀನಾಮೆ ನೀಡಿದ್ದರು. ಐಸೊಲೇಶನ್ ವಾರ್ಡಿನಲ್ಲಿ ಕಿಟ್ ಇಲ್ಲದೆ ಒಂದು ದಿವಸ ಇಡೀ ಕೆಲಸ ಮಾಡಿದೆ. ಅಗತ್ಯ ಮದ್ದುಗಳು, ರೋಗಿ ಉಪಚರಿಸುವವರಿಗೆ ರೋಗ ಅಂಟದಂತೆ ಸುರಕ್ಷೆ ಸೌಕರ್ಯಗಳೋ ಆಸ್ಪತ್ರೆಯಲ್ಲಿಲ್ಲ ಎಂದು ಅವರು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ತಡೆಯುವುದಕ್ಕೆ ಆರೋಗ್ಯ ಕಾರ್ಯಕರ್ತರು ರಜೆಯಿಲ್ಲದೆ ಕೆಲಸ ಮಾಡುತ್ತಿರಬೇಕು. ವಿಶೇಷ ಪರಿಸ್ಥಿತಿಯಲ್ಲಿ ಪಿಎಸ್ಸಿ ಲೀಸ್ಟ್ ನಲ್ಲಿರುವ ವೈದ್ಯರು ಮತ್ತು ಹೆಲ್ತ್ ಇನ್ಸ್ ಪೆಕ್ಟರ್ ಗಳನ್ನು ತುರ್ತಾಗಿ ನೇಮಕಗೊಳಿಸುವಂತೆ ಆರೋಗ್ಯ ಸಚಿವಾಲಯ ಆದೇಶ ನೀಡಿತ್ತು .












