ಸನ್ಮಾರ್ಗ ವಾರ್ತೆ
ಬೆಂಗಳೂರು, ಎಪ್ರಿಲ್ 21- ದೇಶದಲ್ಲಿ ಸೋಮವಾರ ಸಂಜೆ 5ರಿಂದ ಮಂಗಳವಾರ ಬೆಳಿಗ್ಗೆ ೮ ರ ನಡುವೆ 954 ಹೊಸ ಕೊರೋನಾ ಪ್ರಕರಣಗಳು ವರದಿಯಾಗಿವೆ. ಹಾಗೆಯೇ ಈ ನಡುವೆ ಸೋಂಕಿಗೆ 31 ಮಂದಿ ಬಲಿಯಾಗಿದ್ದಾರೆ. ಹೀಗೆ ಒಟ್ಟು ಸೋಂಕಿತರ ಸಂಖ್ಯೆ 18,609ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವಾಲಯದ ವೆಬ್ಸೈಟ್ ತಿಳಿಸಿದೆ. ಈ ಪೈಕಿ 3251 ಮಂದಿ ಗುಣಮುಖರಾಗಿದ್ದಾರೆ. 590 ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 232 ಮಂದಿ ಸಾವಿಗೀಡಾಗಿದ್ದಾರೆ.
ಕರ್ನಾಟಕದಲ್ಲಿ 408 ಸೋಂಕು ಪ್ರಕರಣಗಳು ದಾಖಲಾಗಿದ್ದು 16 ಮಂದಿ ಮೃತಪಟ್ಟಿದ್ದಾರೆ. ವಿಜಯಪುರ ಒಂದರಲ್ಲಿಯೇ ಹನ್ನೊಂದು ಜನರಲ್ಲಿ ಸೋಂಕು ದೃಢಪಟ್ಟಿದೆ. ಈವರೆಗೆ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ಅಂದರೆ 89 ಪ್ರಕರಣಗಳು ದಾಖಲಾಗಿದ್ದು ಮೈಸೂರಿನಲ್ಲಿ 84, ಬೆಳಗಾವಿಯಲ್ಲಿ 42, ವಿಜಯಪುರದಲ್ಲಿ 32, ಕಲಬುರ್ಗಿಯಲ್ಲಿ 27 ಪ್ರಕರಣಗಳು ವರದಿಯಾಗಿವೆ.
ಇದೇ ವೇಳೆ ಮುಂಬೈ, ಪುಣೆ, ಇಂದೋರ್, ಜೈಪುರ, ಕೊಲ್ಕತ್ತಾ ಮತ್ತು ಪಶ್ಚಿಮ ಬಂಗಾಳದ ಇತರ ಕೆಲವು ಪ್ರದೇಶಗಳಲ್ಲಿ ಕೊರೋನಾ ಸೋಂಕಿನ ಪರಿಸ್ಥಿತಿ ಗಂಭೀರವಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.
ಇಡೀ ದಕ್ಷಿಣ ಭಾರತದಲ್ಲಿ ಕೊರೋನಾ ಸೋಂಕು ವೇಗವಾಗಿ ಹರಡುವ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿರುವುದು ಕೂಡ ಆತಂಕಕಾರಿ ಬೆಳವಣಿಗೆಯಾಗಿದೆ. ರಾಜ್ಯದಲ್ಲಿ ಕಳೆದ ಒಂಬತ್ತೂವರೆ ದಿನಗಳಲ್ಲಿ ಸೋಂಕು ಪ್ರಕರಣಗಳು ದುಪ್ಪಟ್ಟಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ತಿಳಿಸಿದ್ದಾರೆ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












