ಅನಿವಾಸಿಗಳನ್ನು ಊರಿಗೆ ಕರೆತರಲಾಗದು ಎಂದ ಕೇಂದ್ರ ಸರಕಾರ: ವಿವರಣೆ ಕೇಳಿದ ಹೈ ಕೋರ್ಟ್

0
888

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಎ. 21: ಅನಿವಾಸಿಗಳನ್ನು ಊರಿಗೆ ಕರೆತರಲು ಸಾಧ್ಯವಿಲ್ಲ ಎಂದು ಕೇಂದ್ರ ಸರಕಾರ ಹೈಕೋರ್ಟಿಗೆ ತಿಳಿಸಿದೆ. ಅವರನ್ನು ಊರಿಗೆ ತಂದರೆ ಈಗಿನ ಲಾಕ್‍ಡೌನ್‍ನ ಉದ್ದೇಶ ವಿಫಲವಾಗುತ್ತದೆ ಎಂದು ಸರಕಾರ ಕೋರ್ಟಿಗೆ ತಿಳಿಸಿದೆ. ಅನಿವಾಸಿಗಳನ್ನು ಕರೆತರಲು ಆಗ್ರಹಿಸಿ ಕೆಎಂಸಿಸಿ ಸಲ್ಲಿಸಿದ ಅರ್ಜಿಯಲ್ಲಿ ಕೇಂದ್ರ ಸರಕಾರ ತನ್ನ ನಿಲುವನ್ನು ತಿಳಿಸಿದೆ.

ಹಾಗಿದ್ದರೆ ವಿದೇಶದಲ್ಲಿರುವ ಭಾರತೀಯರಿಗೆ ಏನೆಲ್ಲ ಸಹಾಯ ಕೊಡಬಹುದು ಎಂದು ಕೇಂದ್ರ ತಿಳಿಸುವಂತೆ ಕೋರ್ಟು ಸೂಚಿಸಿದೆ. ಇದಕ್ಕೆ ಸಂಬಂಧಿಸಿದಂತೆ 23ಕ್ಕೆ ವಿವರವಾದ ಹೇಳಿಕೆ ನೀಡುವುದಾಗಿ ಸರಕಾರ ತಿಳಿಸಿತು. ಪ್ರಕರಣ 24ನೇ ತಾರೀಕಿಗೆ ಮುಂದೂಡಲಾಗಿದೆ.

ಲೇಬರ್ ಕ್ಯಾಂಪ್‍ಗಳಲ್ಲಿ ಸಿಕ್ಕಿಬಿದ್ದವರಿಗೆ ತುರ್ತು ಚಿಕಿತ್ಸೆ, ಉಪಚಾರ ಲಭ್ಯಗೊಳಿಸಲಿಕ್ಕಾಗಿ ಪ್ರಯಾಣ ನಿಷೇಧದಲ್ಲಿ ಸಡಿಲಿಕೆ ಮಾಡಬೇಕು ಎಂದು ಕೆಎಂಸಿಸಿ ದುಬೈ ಅಧ್ಯಕ್ಷ ಇಬ್ರಾಹೀಂ ಎಳೇಟ್ಟಲ್‍ರು ವಕೀಲ ಹಾರಿಸ್ ಬೀರನ್, ಅಡ್ವೊಕೇಟ್ ಮುಹಮ್ಮದ್ ಶಾಫಿ ಮೂಲಕ ರಿಟ್ ಅರ್ಜಿ ಸಲ್ಲಿಸಿದ್ದರು. ಚಾರ್ಟೆಡ್ ವಿಮಾನಗಳಲ್ಲಿ ಭಾರತೀಯರನ್ನು ಊರಿಗೆ ಕರೆತರಲು ವಿಮಾನ ಸರ್ವಿಸ್ ಆರಂಭಿಸುವುದಾಗಿ ಪ್ಲೈ ದುಬೈ, ಎಮಿರೇಟ್ಸ್ ಕಂಪೆನಿಗಳು ತಿಳಿಸಿದರೂ ಸರಕಾರ ಅನುಮತಿ ನೀಡಿಲ್ಲ. ಭಾರತಕ್ಕೆ ಕರೆತರಲು ಸಿದ್ಧರಾಗಿರುವ ವಿಮಾನ ಕಂಪೆನಿಗಳ ಮೂಲಕ ಸಿಕ್ಕಿಬಿದ್ದಿರುವ ಎಲ್ಲ ಭಾರತೀಯರನ್ನು ಊರಿಗೆ ತಲುಪಿಸಲು ವಿದೇಶ ಸಚಿವಾಲಯ, ವಿಮಾನಯಾನ ಸಚಿವಾಲಯಕ್ಕೆ ಆದೇಶಿಸಬೇಕೆಂದು ಅರ್ಜಿಯಲ್ಲಿ ಆಗ್ರಹಿಸಲಾಗಿದೆ.

ಮರಳಿ ಬಂದವರನ್ನು ವಿಶ್ವ ಆರೋಗ್ಯ ಸಂಘಟನೆಯ ಮಾರ್ಗದರ್ಶನದಂತೆ ಕೊರೊಂಟೈನ್ ಮಾಡಿ ವೈದ್ಯಕೀಯ ಸಹಾಯ ಲಭ್ಯಗೊಳಿಸಬೇಕು. ಯುಎಇಯಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಊರಿಗೆ ಕರೆತರಲು ನೆರವಾಗುವಂತೆ ವಿದೇಶ ಸಚಿವರು, ಭಾರತದ ರಾಯಭಾರಿ, ಕೇರಳ ಮುಖ್ಯಮಂತ್ರಿಗೆ ಕೆಎಂಸಿಸಿ ಪತ್ರ ಬರೆದಿತ್ತು.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.