ಡಾ। ಉಮರ್ ಖಾಲಿದ್ ಸಹಿತ ವಿದ್ಯಾರ್ಥಿಗಳ ಮೇಲೆ ಯುಎಪಿಎ ಹೇರಿರುವ ದೆಹಲಿ ಪೊಲೀಸರ ನಡೆ ಖಂಡನೀಯ: ಡಾ। S Q R ಇಲ್ಯಾಸ್

0
711

ಸನ್ಮಾರ್ಗ ವಾರ್ತೆ

ನವದೆಹಲಿ, ಏಪ್ರಿಲ್ 23: ಉತ್ತರ ದೆಹಲಿಯಲ್ಲಿ ನಡೆದ ಮತೀಯ ಗಲಬೆಗೆ ಕುಮ್ಮಕ್ಕು ನೀಡಿದ್ದಾರೆ ಎಂಬ ಆರೋಪದಡಿ ಜೆ ಎನ್ ಯು ಹಳೆವಿದ್ಯಾರ್ಥಿ ಡಾ। ಉಮರ್ ಖಾಲಿದ್, ಜಾಮಿಯಾ ವಿದ್ಯಾರ್ಥಿ ಮೀರಾನ್ ಹೈದರ್ ಮತ್ತು ಸಫೂರಾ ಝಾರ್ಗರ್ ಅವರ ವಿರುದ್ಧ ಯುಎಪಿಎ ಹೇರಿರುವುದನ್ನು ತೀವ್ರವಾಗಿ ಖಂಡಿಸಿರುವ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಡಾ। S Q R ಇಲ್ಯಾಸ್, ಇದು ನಾಗರಿಕ ಸ್ವಾತಂತ್ರ್ಯದ ಹರಣ ಹಾಗೂ ಬಿನ್ನಮತೀಯರನ್ನು ಗುರಿಯಾಗಿಸುವ ತಂತ್ರ ಎಂದು ಟೀಕಿಸಿದ್ದಾರೆ.

ಮಿಥ್ಯ ಆರೋಪ ಹೊರಿಸಿ ನಿರಪರಾಧಿಗಳಾದ ವಿದ್ಯಾರ್ಥಿ ಯುವ ಕಾರ್ಯಕರ್ತರ ಮೇಲೆ ಕರಾಳ ಕಾನೂನನ್ನು ಹೇರಿದ ದೆಹಲಿ ಪೊಲಿಸರ ನಡೆ ಅಪಾಯಕಾರಿ. ಕೋಮು ವಿಷ ಬೀಜ ಬಿತ್ತಿ ಹಿಂಸೆಗೆ ಪ್ರಚೋದಿಸುತ್ತಿರುವ ಧಾರಾಳ ಸಾಕ್ಷ್ಯಾಧಾರಗಳು ಮಾದ್ಯಮ, ಸಾಮಾಜಿಕ ಜಾಲತಾಣಗಳಲ್ಲಿ ಇದ್ದರೂ ಕಾನೂನಿನ ಕಠಿಣ ಶಿಕ್ಷೆಗೆ ಅರ್ಹರಾದ ಈ ಸಮಾಜ ಘಾತುಕ ಶಕ್ತಿಗಳು ರಾಜಕೀಯ ಪ್ರಾಬಲ್ಯದಿಂದ ನಿರಾಳವಾಗಿರುವುದು ಮತ್ತು ನಿರಪರಾಧಿ ಯುವ ಸಮೂಹವನ್ನು ಗುರಿಯಾಗಿಸಿ ಕ್ರಮ ಕೈಗೊಳ್ಳುವುದು ಆತಂಕಕಾರಿ ಎಂದು ಅವರು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವಾಲಯದ ನಿಯಂತ್ರಣದಲ್ಲಿರುವ ರಾಜಧಾನಿ ದೆಹಲಿ ಪೊಲೀಸರು ಕಾನೂನಿನ ಎಲ್ಲಾ ಮೇರೆಯನ್ನು ಮೀರಿ ದೆಹಲಿಯನ್ನು ಪೊಲೀಸ್ ರಾಜ್ಯವಾಗಿ ಬದಲಾಯಿಸಿದ್ದಾರೆ ಹಾಗೂ ನೈಜ ಅಪರಾದಿಗಳನ್ನು ರಕ್ಷಿಸಲು ಒಟ್ಟು ಪ್ರಕರಣವನ್ನು ತಪ್ಪಾಗಿ ನಿರೂಪಿಸುವ ಶ್ರಮ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ.

ದೇಶದ ಎಲ್ಲಾ ಶಾಂತಿಪ್ರಿಯ ನಾಗರಿಕರು, ರಾಜಕೀಯ ಪಕ್ಷಗಳು, ನ್ಯಾಯಾಂಗ ವ್ಯವಸ್ಥೆ ಹಾಗೂ ಮಾಧ್ಯಮಗಳು ಅನೀತಿ ಅನ್ಯಾಯ, ದಬ್ಬಾಳಿಕೆಯ ವಿರುದ್ದ ಒಗ್ಗಟ್ಚಾಗಿ ನಿಲ್ಲಬೇಕು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ರಕ್ಷಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ