ಮತೋನ್ಮತ್ತ ಸಂಘಗಳ ಹಿನ್ನೆಲೆಯಿಂದಲೇ ಬಂದ ವ್ಯಕ್ತಿ ಒಂದು ಕೋಳಿಯ ಜೀವಕ್ಕೂ ಮರುಗುವಷ್ಟು ಬದಲಾದರೆಂದರೆ… : ಮಹೇಂದ್ರ ಎಂಬ ಅಂಗುಲಿಮಾಲ

0
1985

ಸನ್ಮಾರ್ಗ ವಾರ್ತೆ

ಮಹೇಂದ್ರ ಕುಮಾರ್ ಸ್ಮರಣೆ

ಯೋಗೇಶ್ ಮಾಸ್ಟರ್

ಯಾವ ಶಕ್ತಿಗಳು ರಾಷ್ಟ್ರ, ಸಂಸ್ಕೃತಿ, ಧರ್ಮ ಎಂದು ದೇಶದ ಏಕತೆ ಮತ್ತು ಸೌಹಾರ್ದತೆಯ ಮೇಲೆ ದಾಳಿ ಮಾಡುತ್ತಿದ್ದವೋ, ಅದೇ ಶಕ್ತಿಗಳ ಭಾಗವಾಗಿದ್ದ ತನ್ನ ಈ ಶಕ್ತಿ ವಿಧ್ವಂಸಕವಾಗಕೂಡದು ಮತ್ತು ರಚನಾತ್ಮಕವಾಗಬೇಕು ಎಂಬ ಜ್ಞಾನೋದಯ ಪಡೆದುಕೊಂಡ ವ್ಯಕ್ತಿ ಮಹೇಂದ್ರ ಕುಮಾರ್. ಆ ಜ್ಞಾನೋದಯವನ್ನು ಮತ್ತು ತನ್ನದಂತೆಯೇ ಇತರರದೂ ಜೀವ ಎಂದು ಪ್ರಜ್ಞೆ ಪಡೆದುಕೊಂಡ ವ್ಯಕ್ತಿ ಆ ಪ್ರಜ್ಞೆಯನ್ನು ತನ್ನ ಸಹಜೀವಿಗಳಿಗೆ ಹಂಚಿಕೊಳ್ಳುತ್ತಾ ಶಕ್ತಿಯು ನಕಾರಾತ್ಮಕವಾಗುವ ಬದಲು ರಚನಾತ್ಮಕವಾಗಿ ಸಮಾಜದಲ್ಲಿ ಬಳಕೆಯಾಗಬೇಕು ಎಂದು ಬಯಸುತ್ತಾ, ಕೆಲಸ ಮಾಡುತ್ತಿದ್ದರು. ಇಂತಹ ಪ್ರಜ್ಞಾವಂತ ಜೀವಿ ಇಷ್ಟುಬೇಗ ಬದುಕಿನಿಂದ ವಿಮುಖವಾಗಿದ್ದು ನಿಜಕ್ಕೂ ಜನಪರ ಹೋರಾಟಕ್ಕೆ ಆದ ಅನ್ಯಾಯವೇ.

ಬಜರಂಗದಳದ ತಂಡದಿಂದ ತನ್ನ ಅರಿವಿನಿಂದ ಹೊರಗೆ ಬಂದ ಈ ಅಂಗುಲಿಮಾಲ ಶರಣಾಗಿದ್ದು ಮನುಷ್ಯ ಪ್ರೀತಿಗೆ. ಇಂಥಾ ಸಮಯದಲ್ಲಿ ನಮಗೆ ಪೂರಕ ಶಕ್ತಿಯಾಗುವಂತೆ ಇದ್ದ ಮಹೇಂದ್ರ ಕುಮಾರ್ ಇನ್ನಿಲ್ಲ ಎಂಬುದನ್ನು ಅರಿಗಿಸಿಕೊಳ್ಳಲು ಕಷ್ಟವಾದರೂ ನಿಜ. ಮಹೇಂದ್ರ ಕುಮಾರ್ ಇನ್ನಿಲ್ಲ ಎಂಬ ಆಘಾತಕರ ಸುದ್ಧಿಯನ್ನು ನಾನು ನಂಬಲಾಗದೇ ಅವರಿವರಿಗೆ ಫೋನ್ ಮಾಡಿ ನಿಜವೆಂದು ಹೇಳಿದರು. ಆದರೆ ನಂಬಲು ಈಗಲೂ ಸಿದ್ಧನಿಲ್ಲ.

ಯುವಶಕ್ತಿಯನ್ನು ಜೀವಪರವಾದ ಮತ್ತು ಸಮಾಜಮುಖಿಯಾದ ದಾರಿಯಲ್ಲಿ ನಡೆಸುತ್ತಾ ಮನುಷ್ಯಪ್ರೇಮದ ಗುರಿಗೆ ಒಯ್ಯಲು ಸಾಂಘಿಕವಾಗಿ ಶ್ರಮಿಸುತ್ತಿದ್ದ ಮಹೆಂದ್ರಕುಮಾರ್ ಗೆ ಬಹಳ ಸಂಕಟದಿಂದ ಅಂತಿಮ ವಿದಾಯಗಳನ್ನು ಹೇಳುತ್ತಿದ್ದೇನೆ.

ಮಹೇಂದ್ರ ಕುಮಾರ್ ನನಗೆ ಇತ್ತೀಚೆಗೆ ತಿಮ್ಮಿಯ ಬಗ್ಗೆ ಮಾಡಿದ್ದ ಕರೆ ಕೊನೆಯದಾಗಬಹುದೆಂದು ನಾನು ಹೇಗೆ ಕಲ್ಪಿಸಿಕೊಳ್ಳಲು ಸಾಧ್ಯ?
ತಿಮ್ಮಿಯ (ಮನೆಯ ಸಾಕು ಕೋಳಿ) ಮೇಲಿನ ನಮ್ಮ ಪ್ರೀತಿಯನ್ನು ಮತ್ತು ನಮ್ಮ ಕುಟುಂಬದಲ್ಲಿ ಅದು ಪಡೆದುಕೊಂಡಿರುವ ಸ್ಥಾನವನ್ನು ಅದು ಬಂದ ಪ್ರಾರಂಭದ ದಿನಗಳಲ್ಲೇ ಗಮನಿಸಿದ್ದ ಮಹೇಂದ್ರ ಕುಮಾರ್ “ಒಬ್ಬರು ಒಂದು ಪ್ರಾಣಿಯನ್ನು ತಮ್ಮ ಪ್ರೀತಿಯ ಜೀವ ಎಂದು ಮನೆಯಲ್ಲಿ ಸಾಕುತ್ತಿರುವಾಗ, ಮುದ್ದಿಸುತ್ತಿರುವಾಗ ಅದನ್ನು ಕೊಯ್ಯುವ ತಿನ್ನುವ ಬಗ್ಗೆಯೇ ನಾವು ಪೋಸ್ಟ್ ಮಾಡುತ್ತಿದ್ದರೆ ಅದೆಷ್ಟು ಕ್ರೂರ. ಅದನ್ನು ಮುದ್ದಿನ ಪ್ರಾಣಿ ಮತ್ತು ಮನೆಯ ಸದಸ್ಯರನ್ನಾಗಿ ಮಾಡಿಕೊಂಡಿರುವ ಮನಸ್ಸಿಗೆ ಅದೆಷ್ಟು ನೋವಾಗುವುದಿಲ್ಲ! ಇದು ತಮಾಷೆ ಅಲ್ಲ ಮೇಷ್ಟೇ. ತಮಾಷೆಗೆ ನಿಮ್ಮ ಮನೆ ಸದಸ್ಯನ ಕುಯ್ದುಕೊಂಡು ತಿಂತೀನಿ ಅಂತ ಹೇಳ್ತಾರಾ? ಇವರಿಗೇನು ಇಷ್ಟು ಮಾತ್ರ ಗೊತ್ತಾಗುವುದಿಲ್ಲವಾ? ಅವರ ಪ್ರೀತಿಯ ಮತ್ತು ಮನೆಯ ಸದಸ್ಯರಲ್ಲಿ ಒಂದಾಗಿರುವ ಜೀವವನ್ನು ಕೊಲ್ಲುವ, ಮಸಾಲೆ ಅರೆಯುವ, ತಿನ್ನುವ ಮಾತಾಡಿದರೆ ನಿಮ್ಮ ಮನಸಿಗೆ ಅದೆಷ್ಟು ನೋವಾಗುವುದಿಲ್ಲ?” ಎಂದು ನನಗೆ ಫೋನ್ ಮಾಡಿಯೇ ಮಾತಾಡಿದ್ದರು.

ಇದೇ ನನಗೆ ಅವರು ಮಾಡಿದ್ದ ಕೊನೆಯ ಕರೆ.

ಜೀವಕ್ಕೆ ಮತ್ತು ಜೀವನಕ್ಕೆ ಬೆಲೆಯಿಲ್ಲದಂತೆ ವರ್ತಿಸುವ, ಪ್ರೀತಿ ಪ್ರೇಮವನ್ನು ಲವ್ ಜಿಹಾದ್ ಎಂದು ದಾಳಿ ಮಾಡುವ ಮತೋನ್ಮತ್ತ ಸಂಘಗಳ ಹಿನ್ನೆಲೆಯಿಂದಲೇ ಬಂದ ವ್ಯಕ್ತಿ ಒಂದು ಕೋಳಿಯ ಜೀವಕ್ಕೂ ಮರುಗುವಷ್ಟು, ಅದರೊಂದಿಗೆ ಸಂಬಂಧಹೊಂದಿರುವವರ ಪ್ರೀತಿಯನ್ನು ಆದರಿಸುವಷ್ಟು ಕಾಳಜಿಯನ್ನು ತೋರುತ್ತಿದ್ದರೆಂದರೆ, ಅವರು ತಮ್ಮ ಜೊತೆಗೆ ಇದ್ದ ಯುವಕರಲ್ಲಿ ಇನ್ನೆಷ್ಟರ ಮಟ್ಟಿಗೆ ಜೀವಪರ ಸಂವೇದನೆಯನ್ನು ಪ್ರೇರೇಪಿಸುತ್ತಿದ್ದರು ಎಂದು ಆಲೋಚಿಸುತ್ತಿದ್ದೆ.

ಮತ್ತೆ ಸಿಗೋಣ ಎಂದು ಕೊಟ್ಟ ಮಾತನ್ನು ಮುರಿದಿದ್ದು ಅಕ್ಷಮ್ಯ ಮತ್ತು ಸಂಕಟ.

ವಿದಾಯ ಹೇಳುವ ಮನಸ್ಸಿಲ್ಲ ಮಹೇಂದ್ರ. ನೀವು ನನ್ನ ಭರವಸೆಗಳನ್ನು ಈಡೇರಿಸದೇ, ನೀವು ಕಂಡ ಸಮಸಮಾಜದ ಕನಸನ್ನು ಸಂಘಾಂತರವಾಗಿ ಬರುವ ಮನಸುಗಳಿಗೆ ಧಾರೆಯೆರೆಯದೇ ಮತ್ತು ಈ ಯುವಸಮಾಜಕ್ಕಾಗಿ ಕೊಟ್ಟ ಹಲವು ಮಾತುಗಳನ್ನು ಪೂರೈಸದೇ ಹೋಗುವುದನ್ನು ಹೇಗೆ ಭರಿಸಲಿ?

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.