ಸನ್ಮಾರ್ಗ ವಾರ್ತೆ
ದಿನೇಶ್ ಕುಮಾರ್ ಎಸ್.ಸಿ.
ಪ್ರತಿಬಾರಿ ಫೋನ್ ಮಾಡಿದಾಗಲೂ ಅವರು ಹಲೋ ಅಂತನೂ ಹೇಳ್ತಾ ಇರಲಿಲ್ಲ. ಊಟ ಆಯ್ತಾ, ತಿಂಡಿ ಆಯ್ತಾ ಇತ್ಯಾದಿ ಕಥೆಗಳೂ ಇರ್ತಾ ಇರಲಿಲ್ಲ. ನೇರವಾಗಿ ವಿಷಯ ಪ್ರಸ್ತಾಪ. ಅದೇನು ಆತ್ಮೀಯತೆ ಬೆಳೆದಿತ್ತೋ, ಒಮ್ಮೊಮ್ಮೆ ಜಗಳ ಆಡುವುದಕ್ಕಾಗಿಯೇ ಫೋನ್ ಮಾಡ್ತಾ ಇದ್ರು. ಇಬ್ಬರಲ್ಲೊಬ್ಬರು ಕನ್ವಿನ್ಸ್ ಆಗಲೇಬೇಕು. ಮೊನ್ನೆ ಏ.21ಕ್ಕೆ ಮಾತನಾಡಿದ್ದೇ ಕೊನೆ. ಹದಿನಾರು ನಿಮಿಷ ಮಾತು. ನಮ್ಮ ಚಳವಳಿಗಳ ಸಂಗಾತಿಗಳಲ್ಲಿ ಅವರಷ್ಟು ಆಶಾವಾದಿ ಇನ್ನೊಬ್ಬರನ್ನು ನಾನು ನೋಡೇ ಇಲ್ಲ. ನಮ್ಮ ಧ್ವನಿ ಅವರ ಕನಸಿನ ಒಂದು ಮೆಟ್ಟಿಲು ಅಷ್ಟೆ, ದೊಡ್ಡ ದೊಡ್ಡ ಕನಸು ಕಂಡಿದ್ದರು ಅವರು.
ಪ್ರಾಮಾಣಿಕವಾಗಿ ಹೇಳಬೇಕೆಂದರೆ ಸಂಘ ಪರಿವಾರದಿಂದ ಸಿಡಿದು ಬಂದ ಅವರನ್ನು ಅಷ್ಟು ಸುಲಭವಾಗಿ ನಾವ್ಯಾರೂ ಒಪ್ಪಲಿಲ್ಲ. ನಾನಂತೂ ತುಂಬ ತಡ ಮಾಡಿದೆ. ಚರ್ಚ್ ದಾಳಿ ಸಂದರ್ಭದಲ್ಲಿ ಅವರು ಯಾವುದೋ ಚಾನಲ್ ಗೆ ನೀಡಿದ್ದ ಹೇಳಿಕೆಯ ಪ್ರತಿಶಬ್ದಗಳು ನನ್ನ ತಲೆಯಲ್ಲಿ ಅಚ್ಚಾಗಿ ಕುಳಿತಿದ್ದರಿಂದ ಅವರನ್ನು ಹೇಗೆ ನಂಬುವುದು ಎಂಬ ಗೊಂದಲವಿತ್ತು. ಆದರೆ ಅವರು ಪದೇಪದೇ ನಮ್ಮ ಅನುಮಾನಗಳನ್ನು ಸುಳ್ಳು ಮಾಡುತ್ತಲೇ ಇದ್ದರು. ನಿಧಾನವಾಗಿ ನಮ್ಮನ್ನೆಲ್ಲ ಆವರಿಸಿಕೊಳ್ಳುತ್ತ ಬಂದರು.
ಭಾರತಕ್ಕೆ ಒಂದೇ ಭಾಷೆಯಿರಬೇಕು, ಅದು ಹಿಂದಿ ಆಗಿರಬೇಕು ಎಂದು ಅಮಿತ್ ಶಾ ಹೇಳಿಕೆ ನೀಡಿದಾಗ ಕರ್ನಾಟಕ ರಕ್ಷಣಾ ವೇದಿಕೆಯಿಂದ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡಿದ್ದೆವು. ನೀವು ಬರಬೇಕು ಅಂತ ಅವರನ್ನು ಕರೆದಿದ್ದೆ. ಮರುಮಾತಾಡದೆ ಒಪ್ಪಿಕೊಂಡು ಬಂದಿದ್ದರು. ನಾನು ಒಂಚೂರು ಒರಟಾಗಿ ಮಾತಾಡೋದು ಕಣ್ರೀ, ನಿಮ್ಮವರಿಗೆ ಏನನ್ನಿಸುತ್ತೋ ಏನೋ ಅಂದಿದ್ದರು. ನೀವು ನಿಮಗೆ ಅನಿಸಿದ್ದನ್ನು ಹೇಳಲು ಸ್ವತಂತ್ರರು ಬನ್ನಿ ಸರ್ ಎಂದಿದ್ದೆ. ಅವತ್ತು ನಿಕೇತ್ ರಾಜ್ ಮೌರ್ಯ ಅವರನ್ನು ಜತೆಗೆ ಕರೆದುಕೊಂಡು ಬಂದಿದ್ದರು. In fact ನಿಕೇತ್ ಅವರೇ ಅವತ್ತು ಮಹೇಂದ್ರ ಕುಮಾರ್ ಅವರಿಗಿಂತ ಚೆನ್ನಾಗಿ ಮಾತಾಡಿದ್ದರು. ಕಳುಹಿಸಿಕೊಡುವಾಗ ದಿನೇಶ್, ನಾರಾಯಣಗೌಡರಿಗೆ ಈ ನಾಡಿನಲ್ಲಿ ದೊಡ್ಡ ಶಕ್ತಿ ಇದೆ ಕಣ್ರೀ. ಬಹುಶಃ ಅವರಿಗೂ ಅದು ಗೊತ್ತಿಲ್ಲವೇನೋ? ಮತ್ತೆ ಮತ್ತೆ ಸೇರ್ತಾ ಇರೋಣ. ಕರ್ನಾಟಕದ ಭವಿಷ್ಯವನ್ನು ನಾವೇ ರೂಪಿಸಬೇಕಾದವರು ಎಂದಿದ್ದರು.
ಅವರದು ಯಾವಾಗಲೂ ಒಂಥರಾ ಅಧಿಕಾರಯುತ ಮಾತುಗಳು. ಮೇಲ್ನೋಟಕ್ಕೆ ಅದು ಗರ್ವ, ಅಹಂಕಾರ ಅನಿಸಿಬಿಡಬಹುದು. ಅವರ ಜತೆ ಹೆಚ್ಚು ಮಾತಾಡುತ್ತ ಹೋದಂತೆ ಆ ಗತ್ತು, ಗೈರತ್ತೆಲ್ಲ ಅಹಂಕಾರವಲ್ಲ, ಅವರ ಆತ್ಮವಿಶ್ವಾಸ ಅನ್ನೋದು ಅರ್ಥವಾಗಿಹೋಗಿತ್ತು. ಅಮೂಲ್ಯ ಘಟನೆಯಾದಾಗ ನೀವೇ ಅಲ್ವೇನ್ರೀ ಆ ಹುಡುಗಿ ಬಗ್ಗೆ ಮೊದಲು ಬರೆದವರು, ನೀವೆಲ್ಲ ತಪ್ಪು ಮಾಡ್ತಾ ಇದ್ದೀರಿ ಕಣ್ರೀ, ನಾನು ಈ ಅಪಾಯ ಮೊದಲೇ ಗ್ರಹಿಸಿದ್ದೆ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದರು. ನಾನು ಏನೊಂದೂ ಮಾತನಾಡದೆ ಗದರಿದ್ದನ್ನು ಕೇಳಿಸಿಕೊಂಡಿದ್ದೆ. ಪಾದರಾಯನಪುರ ಘಟನೆಯಾದಾಗ ನನಗೆ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿತ್ತು. ನೀವು ಆತುರ ಮಾಡಿದಿರಿ ಅಂತ ನಾನು ಜಗಳವಾಡಿದ್ದೆ. ನೀವು ಸರಿಯಾಗಿ ಬರೀತಾ ಇದ್ದೀರಿ ಅಂತ ನನ್ನನ್ನು ಸಮಾಧಾನಪಡಿಸಿದ್ದರು.
ಮಹೇಂದ್ರ ಕುಮಾರ್ ಅವರ ಆತ್ಮವಿಶ್ವಾಸವೇ ಅವರು ಎಲ್ಲರ ಜತೆ ಅಷ್ಟು ಸುಲಭವಾಗಿ ಕನೆಕ್ಟ್ ಆಗಲು ಕಾರಣವಾಗಿರಬಹುದು. ಎಲ್ಲರನ್ನೂ ಅವರು ಸುಲಭವಾಗಿ ರೀಚ್ ಆಗ್ತಾ ಇದ್ರು. ಹೀಗಾಗಿಯೇ ಕಡಿಮೆ ಅವಧಿಯಲ್ಲಿ ನಮ್ಮ ಧ್ಚನಿಯನ್ನು ಕಟ್ಟಲು ಅವರಿಂದ ಸಾಧ್ಯವಾಗಿತ್ತು. ಅವರ ನೆಟ್ ವರ್ಕ್ ನಿಜಕ್ಕೂ ದೊಡ್ಡದಾಗಿತ್ತು. ಯಾವುದೋ ಒಂದು ವಿಷಯ ಕುರಿತು, ನೋಡ್ರೀ ದಿನೇಶ್, ಇದು ಹಿಂಗೇ ಆಗುತ್ತೆ ಎಂದಿದ್ದರು. ನಾನು ನಂಬಿರಲಿಲ್ಲ, ಆಮೇಲೆ ಅವರು ಹೇಳಿದಂತೆಯೇ ಆಗಿತ್ತು. ಮತ್ತೆ ಫೋನ್ ಮಾಡಿ ನಾನು ಹೇಳಿರಲಿಲ್ಲವೇನ್ರೀ ಇದು ಹಿಂಗೇ ಆಗುತ್ತೆ ಅಂತ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು.
ಗೌರಿ ಲಂಕೇಶರ ಸಾವಿನ ನಂತರ ಹಠಾತ್ ಶೂನ್ಯವನ್ನು ಸೃಷ್ಟಿಸಿದ ಸಾವು ಇದು. ಮಹೇಂದ್ರ ಕುಮಾರ್ ಬರೀ ಭಾಷಣಕಾರರಷ್ಟೇ ಆಗಿರಲಿಲ್ಲ. ಅತ್ಯುತ್ತಮ ಸಂಘಟಕರೂ ಆಗಿದ್ದರು. ಪ್ರಗತಿಪರ ಚಳವಳಿಗೆ ಅವರು ಬಯಸದೇ ಬಂದ ಭಾಗ್ಯ. ತಮ್ಮ ಹಳೆಯ ಪರಿವಾರದ ನೂರಾರು ಹುಡುಗರನ್ನು ಅಲ್ಲಿಂದ ಹೊರತರುವಲ್ಲಿ ಅವರು ಯಶಸ್ವಿಯಾಗಿದ್ದರು. ಬದಲಾಗಿ ಬಂದ ಅವರನ್ನು ಮುಸಲ್ಮಾನ ಹುಡುಗರೂ ಹಚ್ಚಿಕೊಂಡಿದ್ದರು. ಅವರ ವಿಡಿಯೋಗಳು ಲಕ್ಷಾಂತರ ಜನರನ್ನು ತಲುಪುತ್ತಿದ್ದವು. ಅವರ ಸಾವಿರಾರು ಅಭಿಮಾನಿಗಳಿಗೆ, ಒಡನಾಡಿಗಳಿಗೆ ಅನಾಥಪ್ರಜ್ಞೆಯನ್ನು ಉಳಿಸಿಹೋಗಿದ್ದಾರೆ.
ಮೋಸ ಮಾಡಿಬಿಟ್ಟಿರಿ ಮಹೇಂದ್ರ ಕುಮಾರ್ ಸರ್. ಹೀಗೆ ಅರ್ಧ ದಾರಿಯಲ್ಲಿ ಕೈಬಿಟ್ಟು ಹೋಗಬಾರದಿತ್ತು. ನೀವು ಉಳಿಸಿಹೋದ ಖಾಲಿಜಾಗವನ್ನು ಯಾರೂ ತುಂಬಲಾರರು.
(ಲೇಖಕರು ಸಾಮಾಜಿಕ ಹೋರಾಟಗಾರರೂ ಚಳವಳಿ ನಿರತರೂ ಆಗಿದ್ದಾರೆ.)
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












