ಸನ್ಮಾರ್ಗ ವಾರ್ತೆ
ಸುಧಾ ಮೆನನ್
ಪ್ರೀತಿಯ ಅರ್ನಬ್ ಗೋಸ್ವಾಮಿ
ಭಾರತದ ಅತಿ ದೊಡ್ಡ ಹೇಡಿ ಎಂದು ನೀವು ಕರೆದ ಮಹಿಳೆಯ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? ಇಲ್ಲದಿದ್ದರೆ ಇತಿಹಾಸದತ್ತ ಒಮ್ಮೆ ತಿರುಗಿ ನೋಡಿ. ಈ ದೇಶಕ್ಕೆ ಅವರು ಮಾಡಿರುವ ತಪ್ಪು ಏನು ಎಂಬುದನ್ನು ನೀವು ಮತ್ತೊಮ್ಮೆ ಮರುಪರಿಶೀಲನೆಗೆ ಒಡ್ಡಿ.
1991 ಮೇ 21ರಂದು ಅಂದಿನ ರಾಷ್ಟ್ರಪತಿ ಆರ್ ವೆಂಕಟರಾಮನ್ ಅವರು ಏರ್ಪಾಟು ಮಾಡಿದ ವಿಮಾನದಲ್ಲಿ ಅರ್ಧರಾತ್ರಿ ಸೋನಿಯಾ ಗಾಂಧಿ ತನ್ನ ಮಗಳು ಪ್ರಿಯಾಂಕಾರೊಂದಿಗೆ ಶ್ರೀಪೆರಂಬದೂರುಗೆ ಪ್ರಯಾಣ ಬೆಳೆಸಿದರು. ಕಟ್ಟಕಡೆಯದಾಗಿ ತನ್ನ ಪತಿ ರಾಜೀವ್ ಗಾಂಧಿಯನ್ನು ಕಣ್ಣಾರೆ ಕಾಣುವುದು ಅದರ ಉದ್ದೇಶವಾಗಿತ್ತು. ಆದರೆ ಮುಂಜಾನೆ 4:30 ಕ್ಕೆ ಅವರು ಮದ್ರಾಸಿಗೆ ತಲುಪಿದಾಗ ಅವರಿಗೆ ನೋಡಲು ಅಲ್ಲಿ ಏನೂ ಉಳಿದಿರಲಿಲ್ಲ, ಏನೂ. ಬಾಂಬ್ ನಿಂದ ಛಿದ್ರವಾಗಿ ಚದುರಿಹೋದ ತನ್ನ ಗಂಡನ ದೇಹಭಾಗಗಳನ್ನು ತುಂಬಿಸಿದ್ದ ಒಂದು ಪೆಟ್ಟಿಗೆಯ ಹೊರತು. ಜೊತೆಗೆ ರಾಜೀವ್ ಗಾಂಧಿಯವರ ಭದ್ರತಾ ಅಧಿಕಾರಿ ಪ್ರದೀಪ್ ಗುಪ್ತ ಅವರ ದೇಹ ಭಾಗಗಳನ್ನು ಕೂಡ ಒಂದು ಪೆಟ್ಟಿಗೆಯಲ್ಲಿ ತುಂಬಿಸಿಡಲಾಗಿತ್ತು.
ಮರಳಿ ವಿಮಾನದಲ್ಲಿ ಹಿಂತಿರುಗುವಾಗ ಒಂದು ಕೈಯಲ್ಲಿ ಕಣ್ಣೀರನ್ನು ಒರೆಸುತ್ತಾ ಇನ್ನೊಂದು ಕೈಯಲ್ಲಿ ಹೂವಿನ ಎಸಳುಗಳನ್ನು ದಾರದಲ್ಲಿ ಜೋಡಿಸಿ ಒಂದು ಹೂಮಾಲೆಯನ್ನು ತಯಾರಿಸಿ ತನ್ನ ಪತಿಯ ದೇಹಭಾಗಗಳಿರುವ ಪೆಟ್ಟಿಗೆಯ ಮೇಲೆ ಇರಿಸಿದರು. ತನ್ನ ತಂದೆಯನ್ನು ತುಂಬಿಸಿದ್ದ ಪೆಟ್ಟಿಗೆಯ ಮೇಲೆ ಕೈಯಿಟ್ಟು ಮಗಳು ಎದೆ ಬಿರಿದು ಅಳುತ್ತಿರುವಾಗ ಪಕ್ಕದಲ್ಲೇ ಇದ್ದ ಪ್ರದೀಪ್ ಗುಪ್ತ ಅವರ ಜಡ ಶರೀರದ ಪೆಟ್ಟಿಗೆಯನ್ನು ತನ್ನ ಬಾಹುಗಳಲ್ಲಿ ಬಂಧಿಸಿ ಅದಕ್ಕೂ ಸೋನಿಯಾ ಹೂಮಾಲೆಯನ್ನು ಹಾಕಿದ್ದರು.
ಸೋನಿಯಾ ಗಾಂಧಿ ಎಂದು ಕೂಡ ಹೀಗೆಯೇ. ಅದ್ಭುತ ಸಹಾನುಭೂತಿ ಮತ್ತು ಪ್ರತಿ ಟೀಕೆಗಳಿಗೂ ಪ್ರಬುದ್ಧ ಪ್ರತಿಕ್ರಿಯೆ ಅವರನ್ನು ಎಂದೆಂದೂ ಇತರರಿಂದ ಪ್ರತ್ಯೇಕಿಸಿ ಬಿಡುತ್ತದೆ.
2004ರಲ್ಲಿ ಪ್ರಧಾನಿ ಹುದ್ದೆ ಕೈಬೀಸಿ ಕರೆದಾಗಲೂ ಅವರು ಅದನ್ನು ಸದ್ದಿಲ್ಲದೇ ನಿರಾಕರಿಸಿದರು. ಭಾರತದಲ್ಲಿ ಇಷ್ಟು ವರ್ಷ ಬದುಕಿಯೂ ತನ್ನ ಪತಿ ಮತ್ತು ಅವರ ತಾಯಿ ಈ ದೇಶಕ್ಕಾಗಿ ಜೀವ ಅರ್ಪಿಸಿಯೂ ಮಾತ್ರವಲ್ಲ ಅತ್ಯಂತ ಅಸುರಕ್ಷಿತವಾದ ಖಾಸಗಿ ಬದುಕನ್ನು ನಿಭಾಯಿಸಬೇಕಾಗಿ ಬಂದೂ ಅವರಿಗೆ ಅಧಿಕಾರ ಒದಗಿಬಂದಾಗ ಅವರನ್ನು ವಿದೇಶಿ ಎಂದೂ ಅಧಿಕಾರ ಮೋಹಿ ಎಂದೂ ಕರೆದು ಬಲಪಂಥೀಯ ಮಾಧ್ಯಮಗಳು ಮತ್ತು ರಾಜಕೀಯ ಪಕ್ಷಗಳು ನಿರಂತರ ಅವರನ್ನು ಭೇಟೆಯಾಡಿದುವು. ಆದರೆ ಅವರು ಅದನ್ನು ನಿರ್ಲಕ್ಷಿಸಿದರು.
ಪ್ರತಿ ಬಿಕ್ಕಟ್ಟಿನ ಸಂದರ್ಭ ಮತ್ತು ವಿಜಯದ ಸಂದರ್ಭದಲ್ಲೂ ಧೃತಿಗೆಡದೆ ಕಾಂಗ್ರೆಸ್ ಎಂಬ ವಿಶಾಲ ಪ್ಲಾಟ್ ಫಾರ್ಮ್ ಅನ್ನು ಒಟ್ಟಾಗಿ ಇರಿಸಲು ಕೊಂಡಿಯಾಗಿ ಶ್ರಮಿಸಿದರು. ಇಷ್ಟು ದೀರ್ಘ ಅವಧಿಯಲ್ಲಿ ಅವರು ಒಮ್ಮೆಯಾದರೂ ಕೋಮುವಾದಿಯಾಗಿ ಆಲೋಚಿಸಿದ್ದೋ ಜನರನ್ನು ಧಾರ್ಮಿಕ ನೆಲೆಯಲ್ಲಿ ವಿಭಜಿಸಿದ್ದೋ ನಡೆದಿಲ್ಲ.
2004ರಿಂದ 2014ರವರೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಸೋನಿಯಾ ಗಾಂಧಿ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷರಾಗಿದ್ದರು. ಅರುಣಾ ರಾಯ್, ಎಂ ಎಸ್ ಸ್ವಾಮಿನಾಥನ್, ಮಾಧವ್ ಗಾಡ್ಗಿಲ್, ಜೀನ್ ಡ್ರೈಸ್, ಹರ್ಷ ಮಂದರ್, ಮಿರಾಯ ಚಟರ್ಜಿ ಮುಂತಾದ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿತ್ವಗಳನ್ನು ಅವರು ಸಲಹಾ ಮಂಡಳಿಯ ಸಭೆಯಲ್ಲಿಟ್ಟು ಸಲಹೆ ಪಡೆದರು. ಎಲ್ಲಾ ಕರಡು ಮಸೂದೆಗಳನ್ನು ನಿರಂತರ ಚರ್ಚೆ ಮತ್ತು ಒಮ್ಮತದ ಮೂಲಕ ರಚಿಸಿದರು.
ಅಂದಹಾಗೆ, ನೀವು ಹೇಡಿ ಎಂದು ಹೇಳಿದ ಈ ಮಹಿಳೆಯ ಮುಂದಾಳುತ್ವದಲ್ಲಿದ್ದ ರಾಷ್ಟ್ರೀಯ ಸಲಹಾ ಸಮಿತಿಯೇ ಈ ದೇಶದಲ್ಲಿ ಶಿಕ್ಷಣ, ಹಲವು ಸಾಮಾಜಿಕ, ಆರ್ಥಿಕ ಸುಧಾರಣೆಯನ್ನು ಮತ್ತು ಹಲವು ಅಪ್ರತಿಮ ಯೋಜನೆಗಳ ಕರಡು ಪ್ರತಿಗಳನ್ನು ರೂಪಿಸಿದ್ದು ಅನ್ನುವುದು ನಿಮಗೆ ಗೊತ್ತೇ ಅರ್ನಾಬ್? ಅವರೆಂದೂ ಯಾವ ಯೋಜನೆಯನ್ನೂ ಬಲವಂತದಿಂದ ಸರಕಾರದ ಮೇಲೆ ಹೇರಲಿಲ್ಲ. ಸಂವಾದ, ಒಮ್ಮತ, ಬಹುತ್ವ ಇತ್ಯಾದಿ ಹಲವು ಮೌಲ್ಯಗಳನ್ನು ಒಪ್ಪಿಕೊಂಡೇ ಅದರ ಆಧಾರದಲ್ಲೇ ನಿರ್ವಹಿಸಿದರು.
ಅವರು ಅತ್ಯಂತ ಧೈರ್ಯಶಾಲಿ ಮತ್ತು ಅಪೂರ್ವ ಒಳಿತಿನ ಮಹಿಳೆಯಾಗಿದ್ದರಿಂದಲೇ ತನ್ನ ಪತಿಯ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿದ್ದ ನಳಿನಿಯ ಮೇಲೆ ಕರುಣೆ ತೋರಲು ಮತ್ತು ಆ ಶಿಕ್ಷೆಯನ್ನು ಜೀವಾವಧಿಗೆ ಇಳಿಸುವಂತೆ ಮಾಡಲು ಸಾಧ್ಯವಾದದ್ದು. ಆ ಕಾರಣದಿಂದಲೇ ನಳಿನಿಯ ಮಗಳಿಗೆ ತನ್ನ ತಾಯಿಯನ್ನು ಜೈಲಿಗೆ ಹೋಗಿ ಮಾತಾಡಿಸಲು ಮತ್ತು ಆಲಿಂಗಿಸಲು ಸಾಧ್ಯವಾದದ್ದು.
ತನ್ನ ಪತಿಯನ್ನು ಕೊಂದ ವ್ಯಕ್ತಿಗಳನ್ನು ಕ್ಷಮಿಸಿದುದೇ ನೀವು ಅವರನ್ನು ಹೇಡಿ ಎಂದು ಕರೆದುದಕ್ಕೆ, ಅವರ ಮೇಲೆ ಈ ರೀತಿಯ ಆಕ್ರಮಣ ನಡೆಸಿರುವುದಕ್ಕೆ ಕಾರಣವೇ ಅರ್ನಾಬ್?
ಪ್ರೀತಿಯ ಗೋಸ್ವಾಮಿ, ನಿಮಗೆ ಇದು ಅರ್ಥವಾಗಬೇಕಿದ್ದರೆ ಮಾನವೀಯ ಒಳಿತಿನಲ್ಲಿ ನಿಮಗೆ ನಂಬಿಕೆ ಇರಬೇಕು. ದ್ವೇಷ, ಸರ್ವನಾಶ, ಧರ್ಮ ದ್ವೇಷ ಇತ್ಯಾದಿಗಳು ಮಾತ್ರ ತುಂಬಿಕೊಂಡ ಮನಸ್ಸಿಗೆ ಎಂದಿಗೂ ಮಾನವೀಯತೆ ಮತ್ತು ಕರುಣೆಯ ಆಳವಾದ ಮೌಲ್ಯಗಳು ಅರ್ಥವಾಗದು. ಆದ್ದರಿಂದಲೇ ನೀವು ಭಾರತ ಕಂಡ ಅತ್ಯಂತ ಧೈರ್ಯಶಾಲಿ ಮಹಿಳೆಯನ್ನು ಹೇಡಿ ಅನ್ನುತ್ತಿದ್ದೀರಿ. ಕಾಲವು ನಿಮ್ಮನ್ನು ನೋಡಿಕೊಳ್ಳಲಿದೆ. ಏಕೆಂದರೆ ಇತಿಹಾಸವು ಎಂದೂ ಸ್ಥಾವರವಾಗಿ ನಿಂತಿಲ್ಲ.
ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












