ಕೊರೋನಾದ ವಿರುದ್ಧ ಹೋರಾಡಿ, ರೋಗಿಯ ವಿರುದ್ಧವಲ್ಲ” ಎಂದರೂ- ಜನರು ನಡೆಸಿಕೊಳ್ಳುತ್ತಿರುವ ರೀತಿಯಿಂದ ಖಿನ್ನರಾದವರ ಕತೆ ಇದು

0
575
ಅಂಕಿತ್ ನಿಮಾ

ಸನ್ಮಾರ್ಗ ವಾರ್ತೆ

ಇಂಧೋರ್,ಮೇ.15: “ಕೊರೋನಾದ ವಿರುದ್ಧ ಹೋರಾಡಿರಿ, ರೋಗಿಯ ವಿರುದ್ಧವಲ್ಲ” ಎಂದು ಪ್ರತಿ ಫೋನ್ ಕರೆಯಲ್ಲಿ, ಕೊರೋನಾದ ಬಗ್ಗೆ ಸರ್ಕಾರವು ನೀಡುವ ರಕ್ಷಣಾತ್ಮಕ ಎಚ್ಚರಿಕೆ ಇಂದೋರ್‌ನ ಜನತೆಗೆ ನಾಟಿದಂತಿಲ್ಲ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಸಾಮಾಜಿಕ ಬಹಿಷ್ಕಾರ, ಕೊರೋನಾ ಸೋಂಕಿತರ ಬಗ್ಗೆ ತಿರಸ್ಕಾರ ಭಾವ ಬೆಳೆಯುತ್ತಿರುವುದು ವರದಿಯಾಗಿದೆ. ಈ ಅಮಾನವೀಯ ನಡೆಯ ಬಗ್ಗೆ ಇಂದೋರ್ ನಾಚಿಕೊಳ್ಳ ಬೇಕಾದಂತಹ ಅನೇಕ ಪ್ರಕರಣಗಳು ವರದಿಯಾಗಿವೆ.

ಇಲ್ಲಿಯವರೆಗೆ, ನಗರದಲ್ಲಿ 2299 ಕೊರೋನಾ ರೋಗಿಗಳು ಕಂಡುಬಂದಿದ್ದು, ಸಾವಿರಾರು ರೋಗಲಕ್ಷಣಗಳನ್ನು ಪ್ರತ್ಯೇಕಿಸಿ ನೂರಾರು ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ಆದರೆ, ಇಂತಹ ವರದಿಗಳು ಮಾನವೀಯತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ತಮ್ಮನ್ನು ಭಯೋತ್ಪಾದಕರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಕೊರೋನಾದಿಂದ ಗುಣಮುಖರಾದ ಜನರು ಹೇಳುತ್ತಾರೆ.

ಎಷ್ಟರವರೆಗೆಂದರೆ ಅವರ ಮನೆಗೆ ಹೋಗುವ ಮಾರ್ಗವನ್ನು ಕೂಡ ಬಂದ್ ಮಾಡಲಾಗಿದೆ, ಔಷಧಿ ಮತ್ತು ದಿನಸಿ ವಸ್ತುಗಳೂ ಕೂಡ ಅವರಿಗೆ ತಲುಪದಂತಾಗಿದ್ದು, ಅಂಗಡಿಯವರು ಕೊರೋನಾದಿಂದ ಗುಣಮುಖರಾದವರೆಂದು ತಿಳಿದಿದ್ದರೂ ಹೋಮ್ ಡೆಲಿವರಿ ನೀಡಲು ಒಪ್ಪುತ್ತಿಲ್ಲ.

ಮುರಳಿಧರ ನಿಮಾ

ಮೂನ್ ಪ್ಯಾಲೇಸ್ ನಿವಾಸಿಯಾದ 55 ವರ್ಷದ ಉದ್ಯಮಿ ಮುರಳೀಧರ್ ನೀಮಾ ಅವರು ಹೇಳುತ್ತಾರೆ -ನನಗೆ ಕೊರೋನಾ ಬಾಧಿಸಿದಾಗ, ನಾನೇನೋ ದೊಡ್ಡ ಅಪರಾಧ ಮಾಡಿದ್ದೇನೆ ಎಂಬಂತೆ ಜನರು ನನ್ನನ್ನು ನೋಡುತ್ತಿದ್ದಾರೆ. ಹೌದು ನಾನು ಭಯೋತ್ಪಾದಕ ಹೌದು. ಎಲ್ಲರೂ ಅಲ್ಲ, ಆದರೆ ಕೆಲವರು ನನ್ನನ್ನು ಮತ್ತು ಕುಟುಂಬವನ್ನು ಕೀಳರಿಮೆ ಭಾವದಿಂದ ನೋಡಲಾರಂಭಿಸಿದ್ದಾರೆ. ನಾವು ಈ ಕಾಲೋನಿ ಬಿಟ್ಟು ಹೊಗಬೇಕೆಂದು ಅವರು ಬಯಸುತ್ತಿದ್ದಾರೆ ಎಂದು ತಮ್ಮ ನೋವನ್ನು ತೋಡಿಕೊಂಡರು.

ಸೌರಭ್ ತಿವಾರಿ

ನನ್ನ ಅಪ್ಪ ಮತ್ತು ಚಿಕ್ಕಮ್ಮಾಗೆ ಕೊರೋನಾ ಪಾಸಿಟಿವ್ ಎಂದು ಗೊತ್ತಾದ ಕೂಡಲೇ ಜನರು ಡೇರೆಗಳನ್ನು ಹಾಕಿ ನಮ್ಮ ಮನೆಗೆ ಹೋಗುವ ಮಾರ್ಗವನ್ನು ಮುಚ್ಚಿದರು. ಕಸ ತೆಗೆದುಕೊಂಡು ಹೋಗುವವರು, ಹಾಲು ಮಾರಲು ಬರುವವರನ್ನು ತಡೆಹಿಡಿಯಲಾಯ್ತು. ಆನ್‌ಲೈನ್‌ನಲ್ಲಿ ಔಷಧಿಗಳನ್ನು ತರಿಸಿದರೂ ಡೋರ್ ಡೆಲಿವರಿ ಮಾಡುವ ಹುಡುಗನನ್ನು ಅವರು ನಮ್ಮ ಮನೆಗೆ ಬರಲು ಬಿಡಲಿಲ್ಲ ಎಂದು ಸೌರಭ ತಿವಾರಿ ಹೇಳಿದರು.

ಶ್ವೇತಾ ಸಿಂಘಾಲ್

ಶ್ವೇತಾ ಸಿಂಘಾಲ್‌ರವರ ಕುಟುಂಬದ ಮೂವರು ಸದಸ್ಯರಿಗೆ ಕೊರೋನಾ ದೃಢಪಟ್ಟಿದೆ ಎಂದು ಅವರು ಹೇಳುತ್ತಾರೆ. ಕಿರಾಣಿ ಸಾಮಾನು ತರಲು ಹೇಳಿದಾಗ ಡೆಲಿವರಿ ಬಾಯ್ ನಿರಾಕರಿಸುತ್ತಾ, “ನಾವು ಮನೀಶ್ ಬಾಗ್‌ನಲ್ಲಿ ಕಿರಾಣಿ ಸಾಮಾನು ಡೆಲಿವರಿ ಮಾಡಿದ್ದೇವೆ ಎಂದು ಗೊತ್ತಾದರೆ ಇತರೆ ಗ್ರಾಹಕರು ನಮ್ಮಿಂದ ಸಾಮನು ಖರೀದಿಸುವುದಿಲ್ಲ”

ಅಂಕಿತ್ ನಿಮಾ

ಕೊರೋನಾಗೆ ಚಿಕಿತ್ಸೆ ಪಡೆದ ನಂತರ ಮೇ 6 ರಂದು ನನಗೆ ಡಿಸ್ಚಾರ್ಜ್ ಮಾಡಲಾಯಿತು ಎಂದು ಅಂಕಿತ್ ನಿಮಾ ಹೇಳುತ್ತಾರೆ- “ನಾನು ಮನೆಯಲ್ಲಿ ಪ್ರತ್ಯೇಕವಾಗಿರುತ್ತೇನೆ. ನೆರೆಹೊರೆಯಲ್ಲಿ ನನ್ನ ಬಗ್ಗೆ ತಿಳಿದ ನಂತರ ಜನರ ವರ್ತನೆ ಬದಲಾಯಿತು. ನಾನು ರೋಗದಿಂದ ಗುಣಮುಖನಾಗಿ ಬಂದೆ ಆದರೆ ಜನರ ಆಲೋಚನೆ ಯಾವಾಗಾ ಸರಿಯಾಗುವುದೋ?” ಎಂದರು.

ಹರ್ಷಿತಾ ಜೇಶಿ

ನಾನು ಕೊರೋನಾದಿಂದ ಗುಣಮುಖಳಾಗಿದ್ದೇನೆ ಎಂದು ಹರ್ಷಿತಾ ಜೇಶಿ ಹೇಳುತ್ತಾರೆ. ಆದರೆ ಈಗ ಅವರಿಗೆ ಯಾರೂ ಸಹಾಯ ಮಾಡಲು ಸಿದ್ಧರಿಲ್ಲ. ನಿಗಮದ ಕಸದ ಗಾಡಿಯೂ ಕೂಡ ಬರುತ್ತಿಲ್ಲ. ಮೂರು ಚೀಲ ಕಸ ಸಂಗ್ರಹವಾಗಿದೆ. ದಿನಸಿ ವಸ್ತುಗಳು, ಹಣ್ಣುಗಳು ಮತ್ತು ತರಕಾರಿಗಳು ಯಾವುದೂ ನನ್ನ ಕೈಗೆಟುಕುತ್ತಿಲ್ಲ ಎನ್ನುತ್ತಾರೆ.

ರವೀಂದ್ರ್ ಸಿಂಗ್

ರವೀಂದ್ರ್ ಸಿಂಗ್‌ರವರನ್ನು ಚಿಕಿತ್ಸೆಯ ನಂತರ ಏಪ್ರಿಲ್ 30 ರಂದು ಬಿಡುಗಡೆ ಮಾಡಲಾಯಿತು. ನೆರೆಹೊರೆಯವರು ಮನೆಗೆ ಬರುವ ಎರಡೂ ಮಾರ್ಗಗಳನ್ನು ಮುಚ್ಚಿದರು. ಪರಸ್ಪರ ನೋಡಿದ ಕೂಡಲೇ ಮುಖವನ್ನು ತಿರುಗಿಸಿಕೊಂಡು ಬಿಡುತ್ತಾರೆ. ಮನೆಯ ಮುಂಭಾಗದಿಂದ ಬರುವ ದಾರಿಯನ್ನೂ ಬಂದ್ ಮಾಡಿ ಬಿಟ್ಟಿದ್ದಾರೆ.