ವಿಟ್ಲ: ಸೋಮವಾರದಿಂದ ಫ್ಯಾನ್ಸಿ, ಫೂಟ್‌‌ವೇರ್ ಮತ್ತು ಜವಳಿ ಅಂಗಡಿಗಳು ಬಂದ್

0
626

ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಹತ್ವದ ತೀರ್ಮಾನ; ಸಾಮರಸ್ಯಕ್ಕೆ ಮಾದರಿಯಾದ ವಿಟ್ಲ ಪೇಟೆ

ಸನ್ಮಾರ್ಗ ವಾರ್ತೆ

ವಿಟ್ಲ,ಮೇ.16: ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ತುರ್ತು ಸಭೆಯು ಮೇ 13ರಂದು ವಿಟ್ಲ ಅರಮನೆ ರಸ್ತೆಯ ಸುಭಾಶ್ ನಾಯಕ್‌ರವರ ಕಛೇರಿಯಲ್ಲಿ ನಡೆಯಿತು.

ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ (ವರ್ತಕರ ಸಂಘ) ಅಧ್ಯಕ್ಷರಾದ ಬಾಬು ಕೆ.ವಿ. ವಿಟ್ಲ ಅವರು ಅಧ್ಯಕ್ಷತೆ ವಹಿಸಿದ್ದರು. ಕೋವಿಡ್19 ಮುನ್ನೆಚ್ಚರಿಕಾ ಕ್ರಮವಾಗಿ ವಿಟ್ಲದ ವರ್ತಕರು ಸಾಮಾಜಿಕ ಅಂತರದ ಪಾಲನೆಗಾಗಿ ಕೆಲವೊಂದು ಸೂಚನೆಗಳನ್ನು ಪಾಲಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಈ ಸಭೆಯಲ್ಲಿ ಕೈಗೊಂಡ ತೀರ್ಮಾನಗಳು ಇಂತಿವೆ;

1. ರಂಝಾನ್ ಹಬ್ಬದ ಪ್ರಯುಕ್ತ ಖರೀದಿಗಾಗಿ ಜನಜಂಗುಳಿ ಸೇರುವ ಸಂಭವವಿರುವುದರಿಂದ ವಿಟ್ಲ ಪೇಟೆಯ ಜವುಳಿ ವಸ್ತ್ರ, ಪಾದರಕ್ಷೆ, ಫ್ಯಾನ್ಸಿ, ಟೈಲರ್ ಅಂಗಡಿಗಳನ್ನು 2020 ಮೇ 18 ಸೋಮವಾರದಿಂದ ರಂಝಾನ್ ತಿಂಗಳು ಮುಗಿಯುವ ತನಕ ಸಂಪೂರ್ಣ ಬಂದ್ ಮಾಡುವುದು.

2. ಮಾರ್ಚ್ 17 ರ ನಂತರದ 4ನೇ ಹಂತದ ಸರಕಾರದ ಲಾಕ್’ಡೌನ್ ನಿಯಮಗಳಿಗೆ ಅನುಗುಣವಾಗಿ ಮುಂದೆ ವಿಟ್ಲದ ವರ್ತಕರು ಕೈಗೊಳ್ಳಬೇಕಾದ ತೀರ್ಮಾನದ ಬಗ್ಗೆ ಇನ್ನೊಂದು ಸಭೆ ಕರೆಯುವುದು.

3. ಮಾಸ್ಕ್ ಧರಿಸದೇ ಬರುವ ಗ್ರಾಹಕರಿಗೆ ಜಾಗೃತಿ ಮೂಡಿಸುವುದು. ಅಂತಹ ಗ್ರಾಹಕರಿಗೆ ಮಾಸ್ಕ್ ಧರಿಸುವಂತೆ ಕಟ್ಟುನಿಟ್ಟಿನ ಕ್ರಮ ಅನುಸರಿಸುವಂತೆ ಪ್ರೇರೇಪಿಸುವುದು. ಸಾಧ್ಯವಾದರೆ ಅಂಗಡಿಗಳಲ್ಲಿ “ಮಾಸ್ಕ್ ಧರಿಸದವರಿಗೆ ಪ್ರವೇಶವಿಲ್ಲ” ಎಂಬ ಫಲಕ ಹಾಕುವುದು. ಎಲ್ಲಾ ಅಂಗಡಿಗಳಲ್ಲಿ ಸ್ಯಾನಿಟೈಸರ್ ಉಪಯೋಗಿಸುವುದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು.

4. ವಿಟ್ಲ ಪಟ್ಟಣ ಪಂಚಾಯತು ವಿಟ್ಲ ವ್ಯಾಪ್ತಿಯ ವಾಣಿಜ್ಯ ಅಂಗಡಿ ಮುಗ್ಗಟ್ಟುಗಳಿಗೆ ಸಮಯ ನಿಗದಿ ಮಾಡಿ ಬಂದ್ ಮಾಡಲು ನಿರ್ದೇಶಿಸಿದರೆ ಅದಕ್ಕೆ ವರ್ತಕರ ಸಂಘದಿಂದ ಬೆಂಬಲ ಸೂಚಿಸುವುದು.

ವರ್ತಕರ ಸಂಘದ ಗೌರವಾಧ್ಯಕ್ಷರಾದ ಜಗನ್ನಾಥ ಸಾಲಿಯಾನ್, ರಾಮದಾಸ ಶೆಣೈ, ರಶೀದ್ ವಿಟ್ಲ (ಅಲ್ ನೂರ್), ಶ್ರೀಕೃಷ್ಣ ವಿಟ್ಲ ಸೂಕ್ತ ಸಲಹೆ ಸೂಚನೆ ನೀಡಿದರು. ಕೋಶಾಧಿಕಾರಿ ಅಂತೋನಿ ಲೋಬೋ, ಅಚ್ಯುತ ಈಶ್ವರ & ಸನ್ಸ್, ವಿ.ಎಸ್.ಇಬ್ರಾಹಿಂ, ಅನಂತ ಪ್ರಸಾದ್, ಆರ್.ಎಸ್.ಲಕ್ಷ್ಮಣ ಪೂಜಾರಿ, ಶೀನ ಕಾಶಿಮಠ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಕ್ಲಿಫರ್ಡ್ ವೇಗಸ್ ಸ್ವಾಗತಿಸಿ ವಂದಿಸಿದರು.