ನಕಲಿ ವೆಂಟಿಲೇಟರ್‌ಗೆ ಅದ್ದೂರಿ ಪ್ರಚಾರ ನೀಡಿದ ವಿವಾದದಲ್ಲಿ ಗುಜರಾತ್ ಸರಕಾರ: ಧವನ್ I ವೆಂಟಿಲೇಟರ್‌ ನಿಷ್ಪ್ರಯೋಜಕ ಎಂದ ವೈದ್ಯರು!

0
596

ಸನ್ಮಾರ್ಗ ವಾರ್ತೆ

ಅಹ್ಮದಾಬಾದ್,ಜೂ.1: ಬಿಜೆಪಿ ಆಡಳಿತ ನಡೆಸುತ್ತಿರುವ ಗುಜರಾತ್‌ನಲ್ಲಿ ಬಾರೀ ಪ್ರಚಾರದೊಂದಿಗೆ ಬಿಡುಗಡೆಗೊಳಿಸಿದ್ದ ವೆಂಟಿಲೇಟರ್‌ನ್ನು ಕೊನೆಗೂ ಗೋಡೌನ್‌ಗೆ ಕಳುಹಿಸಲಾಗಿದೆ. ಕೊರೋನಾ ವೈರಸ್ ವಿರುದ್ದದ ಹೋರಾಟದಲ್ಲಿ ವಿಶ್ವಕ್ಕೆ ಹೊಸ ದಾರಿಯನ್ನು ಗುಜರಾತ್ ತೋರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಉದ್ಘಾಟನಾ ಬಾಷಣದಲ್ಲಿ ಹೇಳಿಕೊಂಡಿದ್ದ ವೆಂಟಿಲೇಟರ್ ಈಗ ಮೂಲೆಗುಂಪಾಗಿದೆ. ಆದರೆ ಇದು ನಕಲಿ ಎಂದು ತಿಳಿದು ಬಂದಾಗ ಒಂದೇ ತಿಂಗಳಲ್ಲಿ ಅಹಮದಾಬಾದ್ ಸಿವಿಲ್ ಕ್ಯಾಂಪಸ್ ಕೋವಿಡ್ ಆಸ್ಪತ್ರೆ ಮತ್ತು ಸೋಳಾ ಸಿವಿಲ್ ಆಸ್ಪತ್ರೆಯಿಂದ ಹೊರಹಾಕಿ ದಾಸ್ತಾನು ಕೋಣೆಗೆ ಕಳುಹಿಸಲಾಗಿದೆ ಎಂದು ಅಹಮದಾಬಾದ್ ಮಿರರ್ ವರದಿ ಮಾಡಿದೆ.

ರಾಜ್‌ಕೋಟಿನ ಜ್ಯೋತಿ ಸಿ.ಎನ್.ಸಿ ಎಂಬ ಕಂಪೆನಿಯು ಧಮನ್ ಒನ್ ಎಂಬ ಹೆಸರಿನ ವೆಂಟಿಲೇಟರ್ ನಿರ್ಮಿಸಿತ್ತು. ರೋಗ ವ್ಯಾಪಕವಾದ ಕಾರಣ ಅಹಮದಾಬಾದ್ ಸಿವಿಲ್ ಆಸ್ಪತ್ರೆ ಮತ್ತು ಗುಜರಾತ್‍ನ ವಿವಿಧ ಆಸ್ಪತ್ರೆಗಾಗಿ 900 ವೆಂಟಿಲೇಟರ್ ನಿರ್ಮಿಸಲಾಗಿತ್ತು. ಸರಕಾರ ಇದಕ್ಕೆ ಭಾರಿ ಪ್ರಚಾರವನ್ನೂ ನೀಡಿತ್ತು. ಆದರೆ ಇದು ಕಾರ್ಯರೂಪಕ್ಕೆ ಬಂದಾಗ ನಕಲಿ ಎಂಬುದು ಬಹಿರಂಗವಾಯಿತು. ಕೂಡಲೇ ಪ್ಯಾಕ್ ಮಾಡಿ ದಾಸ್ತಾನು ಕೋಣೆಗೆ ಕಳುಹಿಸಲಾಯಿತು. ಅಹ್ಮದಾಬಾದ್ ಸಿವಿಲ್ ಆಸ್ಪತ್ರೆ ಜಿಎಮ್.ಆರ್.ಎಸ್ ಗಾಂಧಿ ನಗರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮುಂತಾದೆಡೆ 300 ವೆಂಟಿಲೆಟರ್‍‌ನಲ್ಲಿ ಹೆಚ್ಚಿನದ್ದನ್ನು ಉಪಯೋಗಿಸಿಲ್ಲ. ನೋಡಲು ವೆಂಟಿಲೇಟರ್ ತರಹ ಇದ್ದರೂ ಎಲ್ಲವೂ ನಿಷ್ಪ್ರಯೋಜಕ ಎಂಬುದನ್ನು ವೈದ್ಯರು ಬಹಿರಂಗ ಪಡಿಸಿದ್ದರು.

ಈ ಉಪಕರಣದ ನಕಲಿತನದ ಬಗ್ಗೆ ಸಿವಿಲ್ ಆಸ್ಪತ್ರೆಯ ಮೆಡಿಕಲ್ ಸುಪರಿಡೆಂಟ್‌ರವರು ಮೇ 15ರಂದು ದೂರು ದಾಖಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದಾಗ ವಿವರ ಬಹಿರಂಗವಾಯಿತು. ಡ್ರಗ್ ಕಂಟ್ರೋಲರ್ ಆಫ್ ಇಂಡಿಯಾ ಈ ವೆಂಟಿಲೇಟರ್‌ಗೆ ಪರವಾನಿಗೆಯನ್ನು ಕೂಡಾ ನೀಡಿಲ್ಲ. ಓರ್ವ ರೋಗಿಯನ್ನು ಮಾತ್ರ ಇದರಲ್ಲಿ ತಪಾಸಿಸಿ ಉಪಕರಣದ ಗುಣಮಟ್ಟದ ಬಗ್ಗೆ ನೋಡಲಾಗಿತ್ತು. ಎತಿಕ್ಸ್ ಕಮಿಟಿಯ ಮುಂದೆ ಪರಿಕ್ಷೆ ನಡೆಸಿ ಫಲಿತಾಂಶ ಇಡಬೇಕೆಂಬ  2017ರ ವೈದ್ಯಕೀಯ ಶಸ್ತ್ರಾಸ್ತ್ರಗಳ ಕಾನೂನನ್ನು ಕೂಡ ಇದಕ್ಕೆ ಪಾಲಿಸಲಾಗಿಲ್ಲ.

“ಧಮನ್ ಒನ್ ಯಂತ್ರದಲ್ಲಿ ಸಂಕೋಚಕ ಮತ್ತು ಸಂವೇದಕಗಳಿಲ್ಲ. ರೋಗಿಯ ಶ್ವಾಸಕೋಶದ ಮೂಲಕ ನೀಡುವ ವೈದ್ಯಕೀಯ ಗಾಳಿ ಹಾಗೂ ಸಂಕುಚಿತ ಗಾಳಿಯ ಹರಿವನ್ನು ಮೇಲ್ವಿಚಾರಣೆ ಮಾಡಲು ಸಂಕೋಚಕಗಳು ಮತ್ತು ಸಂವೇದಕಗಳು ಅಗತ್ಯವಿದೆ. ಎರಡೂ ಭಾಗಗಳು ಧವನ್ ಒನ್‌ನಲ್ಲಿ ಲಭ್ಯವಿಲ್ಲ. ಸೋಲಾ ಸಿವಿಲ್ ಆಸ್ಪತ್ರೆಯ ಹಿರಿಯ ವೈದ್ಯ ಡೋಕ್ ತುರಮರು ಈ ಕುರಿತು ಚರ್ಚಿಸಿ ಈ ಯಂತ್ರಗಳನ್ನು ಅಳವಡಿಸದಿರಲು ನಿರ್ಧರಿಸಿದರು”
ಎಂದು ಅಹಮದಾಬಾದ್ ಮಿರರ್ ವರದಿ ಮಾಡಿದೆ.

ಎಪ್ರಿಲ್ ನಾಲ್ಕರಂದು ಬಹಳ ಪ್ರಚಾರದೊಂದಿಗೆ ಅದ್ದೂರಿಯಾಗಿ ಇದರ ಉದ್ಘಾಟನಾ ಕಾರ್ಯಕ್ರಮ ನಡೆದಿತ್ತು. ವೆಂಟಲೇಟರ್ ತೀವ್ರ ಅಗತ್ಯತೆ ಎದ್ದು ಕಾಣುತ್ತಿದ್ದ ಸಂದರ್ಭದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಗುಜರಾತ್ ಜಗತ್ತಿನ ಗಮನ ಸೆಳೆದಿದೆ ಎಂದು ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಹೇಳಿದ್ದರು.

ಕೇವಲ ಹತ್ತು ದಿನಗಳಲ್ಲಿ ರಾಜ್‌ಕೋಟಿನಲ್ಲಿ ಈ ಯಂತ್ರ ತಯಾರಿಸಲಾಗಿತ್ತು. ಈ ಒಂದು ಯಂತ್ರದ ವೆಚ್ಚ ಲಕ್ಷ ರೂಪಾಯಿ ತಗಲುತ್ತದೆ. ಪ್ರಧಾನ ಮಂತ್ರಿಯವರ ಮೇಕ್ ಇನ್ ಇಂಡಿಯಾದ ಭಾಗವೆಂದೂ ಹೇಳಲಾಗಿತ್ತು. ಕಂಪೆನಿ ಕೂಡಾ ಮುಖ್ಯಮಂತ್ರಿಗಳ ಆಪ್ತರದ್ದೆಂದು ಹೇಳಲಾಗುತ್ತದೆ.

“ಮುಖ್ಯಮಂತ್ರಿ ಅವರ ಆಪ್ತರು ಸೇರಿ ವಂಚನೆ ನಡೆಸಿದ್ದಾರೆ. ಇವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಕಾಂಗ್ರೆಸ್ ಆಪಾದಿಸಿದೆ. ನಕಲಿ ವೆಂಟಿಲೇಟರ್ ಬಳಸಲು ಸರಕಾರ ಪ್ರಯತ್ನಿಸುತ್ತಿದೆ ಇದರಿಂದಾಗಿಯೇ ಕೊರೋನಾ ಮತ್ತಷ್ಟು ವ್ಯಾಪಕವಾಗುತ್ತಿದೆ” ಎಂದು ಕಾಂಗ್ರೆಸ್ ಆಪಾದಿಸಿದೆ. “ಸರಕಾರ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ” ಎಂದು ಶಾಸಕ ಜಿಗ್ನೇಶ್ ಮೇವಾನಿ ಆರೋಪಿಸಿದರು. ಈ ವಿವಾದವು ಗರಿಗೆದರುವುದರೊಂದಿಗೆ ರಾಜ್ಯದಲ್ಲಿ ರೋಗ ಪೀಡಿತರ ಸಂಖ್ಯೆ ಏರುತ್ತಿರುವುದು ಜನಸಾಮಾನ್ಯರಲ್ಲಿ ಮತ್ತಷ್ಟು ಆತಂಕನ್ನು ಹೆಚ್ಚಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ