ದೇಶದಲ್ಲಿ ಆರಂಭಗೊಂಡ ಕೋವಿಡ್-19 ಬಿಕ್ಕಟ್ಟು: ಸಾವಿನ ಭೀತಿಯಲ್ಲಿರುವ ರೋಗಿಗಳನ್ನು ಒಂದು ನಿಮಿಷ ಸಂತೈಸಲೂ ಸಾಧ್ಯವಾಗುತ್ತಿಲ್ಲ

0
601

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜೂ.13: ಕಳೆದ 24 ಗಂಟೆಗಳಲ್ಲಿ ಆಂಬುಲೆನ್ಸ್ ಸೈರನ್ ಮೊಳಗುತ್ತಲೇ ಇದೆ. ಸಾವಿನ ಹೆದರಿಕೆಯಲ್ಲಿ ಅಸಹಾಯರಾಗಿ ಮುಖವನ್ನು ನೋಡುವ ರೋಗಿಗಳು, ಆಸ್ಪತ್ರೆಯಲ್ಲಿ ಹಾಸಿಗೆ ತುಂಬಿಕೊಂಡಿದೆ. ತುರ್ತು ಉಪಚಾರ ವಿಭಾಗವೂ ಖಾಲಿ ಇಲ್ಲ‌. ದೇಶದ ರಾಜಧಾನಿ ದಿಲ್ಲಿಯಲ್ಲಿ ಕೊರೋನ ಬಿಗಿಪಟ್ಟುಹಿಡಿದ ಲಕ್ಷಣಗಳು ಆಸ್ಪತ್ರೆಗೆ ಹೋಗಿ ನೋಡಿದರೆ ಅನುಭವಕ್ಕೆ ಬರುತ್ತಿದೆ. ಒಂದು ದಿವಸದಲ್ಲಿ 2000ಕ್ಕೂ ಹೆಚ್ಚು ಮಂದಿಗೆ ಹೊಸದಾಗಿ ಕೊರೋನ ದೃಢಪಡುತ್ತಿದೆ. ದಿನಕ್ಕೆ 100ರಷ್ಟು ಸಾವು ಸಂಭವಿಸುತ್ತಿದೆ. ಆದರೂ ನಿರೀಕ್ಷೆ ಕೈಚೆಲ್ಲದೆ ಹಗಲು ರಾತ್ರೆ ಆರೋಗ್ಯ ಕಾರ್ಯಕರ್ತರು ಪ್ರತಿಯೊಂದು ಜೀವವನ್ನು ರಕ್ಷಿಸಲು ಹೋರಾಟ ನಡೆಸುತ್ತಿದ್ದಾರೆ.

‘ಒಳ್ಳೆಯದಾಗಲು ಮಾತ್ರ ನಾವು ಪ್ರಾಥಿಸುತ್ತೇವೆ. ಆದರೂ ಅತ್ಯಂತ ಕೆಟ್ಟಪರಿಸ್ಥಿತಿಯನ್ನು ಸ್ವೀಕರಿಸುವುದಕ್ಕೆ ಮಾನಸಿಕವಾಗಿ ಮತ್ತು ಶಾರೀರಿಕವಾಗ ಸಿದ್ಧರಾಗಿದ್ದೇವೆ” ಎಂದು ದಿಲ್ಲಿಯ ಪ್ರಮುಖ ಖಾಸಗಿ ಆಸ್ಪತ್ರೆ ಮ್ಯಾಕ್ಸ್ ಸ್ಮಾರ್ಟ್ ಸೂಪರ್ ಸ್ಪೆಷಾಲಿಟಿಯ ವೈದ್ಯರಲ್ಲಿ ಒಬ್ಬರಾದ ದೇವನ್ ಜುನೇಜ ಹೇಳಿದರು. ದೇಶದಲ್ಲಿ ಕೊರೋನ ಸಮಸ್ಯೆ ಆರಂಭ ಶುರುವಾಗಿದೆ ಅಷ್ಟೇ. ಕೊರೋನ ಪೀಡಿತರ ಸಂಖ್ಯೆ ಯಾವಾಗ ಬೃಹತ್ತಾಗಿ ಹೆಚ್ಚಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅದನ್ನು ಎದುರಿಸಲು ಸಿದ್ಧವಾಗಿದ್ದೇವೆ ಎಂದು ಜುನೇಜ ಹೇಳಿದರು.

ದೇಶದಲ್ಲಿ ಕೊರೋನ ವ್ಯಾಪಿಸುವ ಮೊದಲೇ ಲಾಕ್‍ಡೌನ್ ಘೋಷಿಸಲಾಗಿತ್ತು ಆದರೆ, ಕೊರೋನ ರೋಗಿಗಳ ಸಂಖ್ಯೆ ಹಠಾತ್ತಾಗಿ ಹೆಚ್ಚತೊಡಗಿದಾಗ ಲಾಕ್‍ಡೌನ್‍ನಲ್ಲಿ ಸಡಿಲಿಕೆ ಮಾಡಲಾಗಿದೆ. ಸಡಿಲಿಕೆಯಾಗಿದ್ದರಿಂದಲೇ ರೋಗಿಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. ನಿರಂತರ ಎರಡನೆ ದಿವಸ 10,000ಕ್ಕೂ ಮಿಕ್ಕಿ ಕೊರೋನಾ ರೋಗಿಗಳು ಪತ್ತೆಯಾಗಿದ್ದಾರೆ. ಈಗ ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ 3 ಲಕ್ಷ ದಾಟಿದೆ.

ರೋಗಿಯ ಸಂಖ್ಯೆ ಹಠಾತ್ ಏರಿಕೆಯಾದ್ದರಿಂದ ಸರಿಯಾದ ಚಿಕಿತ್ಸೆ ನೀಡಲು, ಗಮನ ಹರಿಸಲು ವೈದ್ಯರಿಗೆ ಸಾಧ್ಯವಾಗುತ್ತಿಲ್ಲ. ಸ್ಟೇಡಿಯಂವರೆಗೂ ಐಸೊಲೇಶನ್ ಕೇಂದ್ರಗಳನ್ನಾಗಿಸಲಾಗಿದೆ. ಸ್ಮಶಾನಗಳು ತುಂಬಿಕೊಂಡಿವೆ. ಕೊರೋನ ರೋಗಿಗಳನ್ನು ನೋಡಲು ಸಂಬಂಧಿಕರಿಗೆ ಅವಕಾಶ ನೀಡಲಾಗುತ್ತಿಲ್ಲ. ಸಾವಿನ ಭೀತಿಯಿಂದ ಮುಖ ನೋಡುವ ರೋಗಿಗಳ ಕೈಹಿಡಿದೊ, ದೃಷ್ಟಿ ಹರಿಸಿಯೊ ಸಂತೈಸುವುದಕ್ಕೂ ಆಗುವುದಿಲ್ಲ ಎಂದು ಜುನೇಜ ಹೇಳಿದರು. ಸೋಂಕಿತರು ಈ ಸಮಯದಲ್ಲಿ ತಮ್ಮ ಮನೋಸ್ಥೈರ್ಯ ಕಳಕೊಳ್ಳದಿರಲು ಗರಿಷ್ಠ ಪ್ರಯತ್ನ ನಡೆಸಬೇಕೆಂದು ಅವರು ಹೇಳಿದರು.

ಕೊರೋನ ರೋಗಿಗಳ ಸಂಖ್ಯೆ ಹೆಚ್ಚಿದೆ. ಆಸ್ಪತ್ರೆಗಳಲ್ಲಿ ಸ್ಥಳ ಇಲ್ಲ. ಹೆರಿಗೆ ವಾರ್ಡನ್ನೂ ಕೊರೋನ ರೋಗಿಗಳಿಗಾಗಿ ಮೀಸಲಿಡಲಾಗಿದೆ. ಕೊರೋನ ರೋಗಿಗಳ ಸಂಖ್ಯೆ ಹೆಚ್ಚುವ ಆತಂಕ ಇದೆ. ಎಲ್ಲಿಂದ ನಿಮಗೆ ರೋಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೊರೋನ ರೋಗಿಗಳನ್ನು ಉಪಚರಿಸುತ್ತಿರುವ ನರ್ಸ್ ಜ್ಯೋತಿ ಎಸ್ತರ್ ಹೇಳಿದರು.

ಗಂಟೆಗಟ್ಟೆಲೆ ಉಷ್ಣತೆಯಲ್ಲಿ ಸುರಕ್ಷಾ ವಸ್ತ್ರವನ್ನು ಧರಿಸಿ ಇರುವುದರಿಂದ ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಬಳಲಿಕೆ ಆಗುತ್ತದೆ. ಒಂದು ಹನಿ ನೀರು ಕುಡಿಯಲು ಕೂಡ ಸಾಧ್ಯವಾಗುವುದಿಲ್ಲ. ಏನೂ ಮಾಡಲೂ ಆಗುವುದಿಲ್ಲ. ಮೂತ್ರ ವಿಸರ್ಜನೆಗೂ ಸಾಧ್ಯವಾಗುವುದಿಲ್ಲ ಎಂದು ಇನ್ನೋರ್ವ ದಾದಿ ಹೇಳಿದರು.

ದೇಶದ ಪ್ರಧಾನ ನಗರ ಕೊರೋನ ಸಾವಿನ ಭೀತಿಯ ಕೇಂದ್ರವಾಗಿಬಿಟ್ಟಿದೆ. ದಿನಾಲೂ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ಆರೋಗ್ಯ ಕಾರ್ಯಕರ್ತರು ರಾತ್ರೆ-ಹಗಲು ಸ್ವಂತ ಜೀವ ಪಣಕ್ಕಿಟ್ಟು ರಕ್ಷಣಾ ಕಾರ್ಯದಲ್ಲಿ ವ್ಯಸ್ತರಾಗಿದ್ದಾರೆ.

ಚಿಕಿತ್ಸೆ ಸಿಗದೆ ಪ್ರತಿಯೊಂದು ವಾರ್ಡಿನಲ್ಲಿ ಎಂಟು ಹತ್ತು ರೋಗಿಗಳು ಮೃತಪಟ್ಟಿರುವ ಲೋಕನಾಯಕ ಜಯಪ್ರಕಾಶ ನಾರಾಯಣ(ಎಲ್‍ಎನ್‍ಜೆಪಿ) ಆಸ್ಪತ್ರೆಯಲ್ಲಿ ಮೃತದೇಹಗಳು ಗಂಟೆಗಳ ಕಾಲ ರೋಗಿಗಳ ಜೊತೆಯೇ ಅನಾಥವಾಗಿ ಇರುತ್ತವೆ. ದಿಲ್ಲಿ ಸರಕಾರದ ಅಧೀನದ ದೊಡ್ಡ ಕೊರೋನಾ ಚಿಕಿತ್ಸಾ ಕೇಂದ್ರವಾದ ಎಲ್.ಎನ್.ಜೆಪಿ ರೋಗಿಗಳು ಮತ್ತು ಮೃತದೇಹಗಳ ಕುರಿತ ನಿರ್ಲಕ್ಷ್ಯದ ದೃಶ್ಯಗಳು ಹೊರಬರುತ್ತಿವೆ. ಇದಾದ ನಂತರ ರಾಷ್ಟ್ರೀಯ ಮಾನವಹಕ್ಕು ಆಯೋಗ ಆಸ್ಪತ್ರೆಗೆ ಭೇಟಿ ನೀಡಿದ್ದು, ಸವಿವರ ವರದಿಯನ್ನು ಹೊರಡಿಸುತ್ತೇವೆ ಎಂದು ಆಯೋಗ ತಿಳಿಸಿದೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.