ಹೊಂಡಗಳಿಂದ ತುಂಬಿದ ಕುಕ್ಕಿಲದ ಮುಖ್ಯ ರಸ್ತೆ; ಅಧಿಕಾರಿಗಳಿಂದ ಸಿಗದ ಸ್ಪಂದನೆ: ಚುನಾವಣಾ ಬಹಿಷ್ಕಾರಕ್ಕೆ ಗ್ರಾಮಸ್ಥರಿಂದ ತೀರ್ಮಾನ

0
570

ಸನ್ಮಾರ್ಗ ವಾರ್ತೆ

ಕುಕ್ಕಿಲ,ಜೂ.20: ವಿಟ್ಲಪಡ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕೋಡಪದವು ಕುಕ್ಕಿಲ ಸಂಪರ್ಕ ರಸ್ತೆಯು ಸಂಚಾರಕ್ಕೆ ಅಯೋಗ್ಯವಾಗಿದ್ದು ಜನತೆ ಹಿಡಿಶಾಪ ಹಾಕುವಂತಾಗಿದೆ. ಮಳೆಗಾಲದ ಆರಂಭವಾದ ದಿನಗಳಲ್ಲಿಯೇ ರಸ್ತೆಯು ಹೊಂಡಗಳಿಂದ ತುಂಬಿದ್ದು ಹೊಂಡದ ಮೇಲೆ ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸುವಂತಾಗಿರುವುದು ದುರದೃಷ್ಟಕರ. ಊರಿನ ಪ್ರಮುಖ ಸಂಪರ್ಕ ರಸ್ತೆಯ ಅವಸ್ಥೆ ಹೀಗಿರುವಾಗ, ವಾಹನಗಳ ಸಂಚಾರಕ್ಕೆ ಅಸಾಧ್ಯವಾಗಿರೋ ಈ ರಸ್ತೆಯಲ್ಲಿ ದಿನನಿತ್ಯ ಹಲವಾರು ವಿಧ್ಯಾರ್ಥಿಗಳು, ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ನಿಗದಿತ ಸಮಯಕ್ಕೆ ತಲುಪುವುದು ಸಾಹಸವೇ ಆಗಿದೆ. ರಸ್ತೆಬದಿ ತಡೆಗೋಡೆಗಳಿಲ್ಲದೆ, ಗುಡ್ಡ ಜರಿದು ಬಿದ್ದ ಮಣ್ಣನ್ನೂ ಕೂಡಾ ತೆಗೆಯಲು ಸಾಧ್ಯವಾಗದ ನಿಷ್ಕ್ರಿಯ ಆಡಳಿತವಿರುವಾಗ ನ್ಯಾಯ ಮರೀಚಿಕೆಯಾಗಿದೆ ಎನ್ನುವುದು ಊರವರ ಅಹವಾಲು.

ಅಧಿಕಾರಿಗಳಿಗೆ ಮಾಹಿತಿ ನೀಡಿ ವರ್ಷ ಕಳೆದರೂ ಸ್ಪಂದಿಸದೇ ಇರುವುದರಿಂದ ರೋಸಿ ಹೋದ ಜನತೆ ಮುಂದಿನ ಚುನಾವಣೆಯಲ್ಲಿ ಮತ ಬಹಿಷ್ಕಾರಿಸುವ ತೀರ್ಮಾನವನ್ನು ಕೈಗೊಂಡಿದ್ದಾರೆ. ಅರ್ಧ ಕಿಲೋ ಮೀಟರಿನಷ್ಟು ಕಾಂಕ್ರೀಟು ಮಾಡಿ ರಸ್ತೆ ಬದಿಗೆ ಮಣ್ಣುಹಾಕದೇ ಹೋಗಿರುವುದರಿಂದ ಒಂದುವಾಹನ ಮಾತ್ರ ಒಂದು ಬಾರಿ ಚಲಿಸುವಂತಾಗಿರುವುದು ನಾಗರಿಕರ ಕೋಪಕ್ಕೆ ತುತ್ತಾಗಿದೆ. ಊರ ನಾಗರಿಕರೇ ಸೇರಿ ರಸ್ತೆ ದುರಸ್ತಿ ಮಾಡಿ ಸಾಗಬೇಕಾದ ಪರಿಸ್ಥಿತಿ ಬಂದೊದಗಿರುವುದು ದುರಾದೃಷ್ಟಕರ.

ಒಟ್ಟಿನಲ್ಲಿ ರಸ್ತೆಯ ದುರಸ್ತಿಗೆ ಆಗ್ರಹಿಸಿಯೂ ಯಾರೂ ಕೂಡಾ ಇತ್ತ ತಲೆಹಾಕದೇ ಇರುವುದರಿಂದ ರೋಸಿ ಹೋದ ಇಲ್ಲಿನ ಮತದಾರರು ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವ ಮೂಲಕ ರಾಜಕಾರಣಿಗಳ ರಾಜಕೀಯ ಭವಿಷ್ಯಕ್ಕೆ ಮೂಳೆಹೊಡೆಯವ ತೀರ್ಮಾನ ಕೈಗೊಂಡಿರುವುದು ದುರದ್ರಷ್ಟವಾದರೂ ಒಪ್ಪಿಕೊಳ್ಳಬೇಕಾಗುವಂತಾಗಿದೆ‌.

ಇದಕ್ಕೆ ಯಾರು ಹೊಣೆ ?

ಕಳೆದ ಎರಡು ವರ್ಷಗಳಿಂದ ಸ್ಥಳೀಯರು ರಸ್ತೆ ಸರಿಪಡಿಸುವುದಕ್ಕಾಗಿ ಮನವಿ ಸಲ್ಲಿಸುತ್ತಿದ್ದಾರೆ. ಆದರೆ, ನೂರಾರು ಬಾರಿ ಮನವಿ ಸಲ್ಲಿಸಿದರೂ ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸಿಲ್ಲ ಎಂಬುದು ಗ್ರಾಮಸ್ಥರ ಅಹವಾಲು. ಇಲ್ಲಿ ಮಳೆಗಾಲ ಬಂತೆಂದರೆ ರಸ್ತೆ ಸಮಸ್ಯೆ, ಅಪಘಾತಗಳು ಹೆಚ್ಚಾಗುವ ಸಾಧ್ಯತೆಯಿದ್ದು, ರಸ್ತೆ ಬದಿಯಲ್ಲಿ ನೀರು ಹೋಗಲು ಚರಂಡಿಯೂ ಇಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.