ಬಾಬರಿ ಮಸೀದಿ ಧ್ವಂಸ ಪ್ರಕರಣ: ಎಲ್ಲ ಆರೋಪಿಗಳು ಖುಲಾಸೆ; ಲಕ್ನೋ ಸಿಬಿಐ ಕೋರ್ಟ್ ತೀರ್ಪು

0
952

ಸನ್ಮಾರ್ಗ ವಾರ್ತೆ

ಲಕ್ನೊ,ಸೆ.30: ಬಾಬರಿ ಮಸೀದಿ ಕೆಡವಿದ ಪ್ರಕರಣದಲ್ಲಿ ಸಂಚು ನಡೆಸಿರುವುದಕ್ಕೆ ಸಾಕ್ಷ್ಯವಿಲ್ಲ ಎಂದು ಸಿಬಿಐ ವಿಶೇಷ ಕೋರ್ಟು ತೀರ್ಪು ನೀಡಿದೆ. ಹಿರಿಯ ಬಿಜೆಪಿ ನಾಯಕರಾದ ಎಲ್‍.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಸಹಿತ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಎರಡು ಸಾವಿರ ಪುಟದ ತೀರ್ಪು ಇದು. 28 ವರ್ಷದ ಬಳಿಕ ಪ್ರಕರಣದಲ್ಲಿ ತೀರ್ಪು ಬಂದಿದೆ. ಪ್ರಕರಣ ಸಾಬೀತು ಪಡಿಸಲು ಸಿಬಿಐ ವಿಫಲವಾಗಿದೆ ಎಂದು ಕೋರ್ಟು ಹೇಳಿದೆ. ಅಡ್ವಾಣಿ, ಜೋಷಿ ಜನರ ಗುಂಪನ್ನು ತಡೆಯಲು ಯತ್ನಿಸಿದರೆಂದು ಕೋರ್ಟು ಹೇಳಿತು.

ಲಕ್ನೊದ ವಿಶೇಷ ಸಿಬಿಐ ಕೋರ್ಟು ಜಡ್ಜ್ ಸುರೇಂದ್ರ ಕುಮಾರ್ ಯಾದವ್ ತೀರ್ಪು ಘೋಷಿಸಿದರು. 32 ಆರೋಪಿಗಳಲ್ಲಿ 26 ಮಂದಿ ಕೋರ್ಟಿಗೆ ಹಾಜರಾಗಿದ್ದರು. ಆರೋಪಿಗಳಾದ ಎಲ್‍ಕೆ ಅಡ್ವಾಣಿ, ಮುರಳಿ ಮನೋಹರ ಜೋಷಿ ವಯಸ್ಸಿನ ಕಾರಣದಿಂದ ಕೋರ್ಟಿಗೆ ಬರಲಿಲ್ಲ. ಕೊರೋನ ಪೀಡಿತರಾದ ಉಮಾಭಾರತಿ ಕೋರ್ಟಿನಲ್ಲಿ ಉಪಸ್ಥಿತರಿರಲಿಲ್ಲ. ಕಲ್ಯಾಣ ಸಿಂಗ್, ನೃತ್ಯಗೋಪಾಲ ಸಿಂಗ್, ಸತೀಶ್ ಪ್ರಧಾನ್ ಕೋರ್ಟಿಗೆ ಬರದಿದ್ದರೂ ಇವರು ವೀಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.

1992 ಡಿಸೆಂಬರ್ 6ರಂದು ಕರಸೇವಕರು ಬಾಬರಿ ಮಸೀದಿ ಕೆಡವಿಹಾಕಿದ್ದರು. ನಂತರ ನಡೆದ ಗಲಭೆಯಲ್ಲಿ 2000 ಮಂದಿ ಕೊಲ್ಲಲ್ಪಟ್ಟಿದ್ದರು. 1992 ಡಿಸೆಂಬರ್ 16ಕ್ಕೆ ಬಾಬರಿ ಮಸೀದಿ ಕೆಡವಿದ ಪ್ರಕರಣದ ತನಿಖೆಗೆ ಲಿಬರ್‍ಹಾನ್ ಆಯೋಗ ನೇಮಕವಾಗಿತ್ತು. 1993 ಅಕ್ಟೋಬರಿನಲ್ಲಿ ಉನ್ನತ ಬಿಜೆಪಿ ನಾಯಕರ ವಿರುದ್ಧ ಸಂಚು ಹೆಣದ ಆರೋಪವನ್ನು ಹೊರಿಸಿ ಸಿಬಿಐ ಕೇಸು ದಾಖಲಿಸಿತ್ತು.

ಬಾಬರಿ ಮಸೀದಿ ಧ್ವಂಸಕ್ಕೆ ಸಂಬಂಧಿಸಿ 47 ಎಫ್‍ಐಆರ್‌ಗಳಿವೆ. ಇದರಲ್ಲಿ ಅಜ್ಞಾತ ಕರಸೇವಕರ ವಿರುದ್ಧ ಮೊದಲ ಎಫ್‌ಐಆರ್ ಇದೆ. ಅಡ್ವಾಣಿ ಮತ್ತು ಇತರರ ವಿರುದ್ಧ ಕ್ರಿಮಿನಲ್ ಗೂಢಾಲೋಚನೆ ಆರೋಪವನ್ನು ಹೊರಿಸಿ ಎರಡನೇ ಪ್ರಥಮ ಮಾಹಿತಿ ವರದಿ ಸಲ್ಲಿಕೆಯಾಗಿತ್ತು. 351 ಸಾಕ್ಷಿಗಳು, 600ಕ್ಕೂ ಹೆಚ್ಚು ದಾಖಲೆಗಳು ಒಟ್ಟು 48 ಆರೋಪಿಗಳಿದ್ದರೂ ತೀರ ವಿಳಂಬಗೊಂಡ ಕೋರ್ಟು ಪ್ರಕ್ರಿಯೆಯ ವೇಳೆಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ.

ಬಾಬರಿ ಮಸೀದಿ ಕೆಡವಿದ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿ ವಿಶೇಷ ಸಿಬಿಐ ಕೋರ್ಟು ಸೆಪ್ಟಂಬರ್ 30ರೊಳಗೆ ತೀರ್ಪು ನೀಡಬೇಕೆಂದು ಸುಪ್ರೀಂ ಕೋರ್ಟು ಆದೇಶ ಹೊರಡಿಸಿತ್ತು. ತೀರ್ಪು ನೀಡಲು ಆಗಸ್ಟ್ 31ರವರೆಗೆ ವಿಚಾರಣಾ ಕೋರ್ಟಿಗೆ ಸುಪ್ರೀಂ ಕೋರ್ಟು ಸಮಯ ನೀಡಿತ್ತು. ಆದರೆ, ಸ್ಪೆಷಲ್ ಜಡ್ಜ್ ಸುರೇಂದ್ರ ಕುಮಾರ್ ಯಾದವ್ ಹೆಚ್ಚು ಸಮಯವಕಾಶವನ್ನು ಕೇಳಿದ್ದರಿಂದ ಸುಪ್ರೀಂ ಕೋರ್ಟು ಒಂದು ತಿಂಗಳ ಹೆಚ್ಚುವರಿ ಸಮಯವನ್ನು ನೀಡಿತ್ತು.