ಸೆಗಣಿ ರೆಡಿಯೇಶನ್ ತಡೆಯುತ್ತದೆ ಎಂದ ಕೇಂದ್ರ ಕಾಮಧೇನು ಆಯೋಗ ಅಧ್ಯಕ್ಷ: ಸಂಶೋಧನೆಗೆ ಆಧಾರ ಕೇಳಿ ಪತ್ರ ಬರೆದ 400 ವಿಜ್ಞಾನಿಗಳು

0
815

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.16: ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಾಯ್‍ಯವರ ಸೆಗಣಿ ರೆಡಿಯೇಶನ್ ತಡೆಯುತ್ತದೆ ಎಂಬ ವಾದಕ್ಕೆ ಆಧಾರ ಕೇಳಿ ದೇಶದ 400ರಷ್ಟು ವಿಜ್ಞಾನಿಗಳು ಬಹಿರಂಗ ಪತ್ರ ಬರೆದಿದ್ದಾರೆ. ಅಕ್ಟೋಬರ್ 13ರಂದು ಪತ್ರಿಕಾಗೋಷ್ಠಿಯಲ್ಲಿ ಅವರು ಸೆಗಣಿ ಚಿಪ್ ಅನ್ನು ಪ್ರಕಟಿಸಿದ್ದರು. ಮೊಬೈಲ್ ಫೋನ್‍ನಿಂದಾಗುವ ರೆಡಿಯೇಶನ್ ಕಡಿಮೆ ಮಾಡಲು ಈ ಚಿಪ್‍ನಿಂದ ಸಾಧ್ಯವಿದೆ ಎಂದು ಅವರು ಹೇಳಿದ್ದರು.

ಐಐಟಿ ಬಾಂಬೆ, ಟಾಟಾ ಇನ್ಸ್ಟಿಟ್ಯೂಟ್ ಆಫ್ ರಿಸರ್ಚ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆಂಡ್ ರಿಸರ್ಚ್ ನಂತಹ ಸಂಸ್ಥೆಗಳ ವಿಜ್ಞಾನಿಗಳ ಸಹಿತ 400 ಮಂದಿ ಆಧಾರ ತಿಳಿಸುವಂತೆ ಪತ್ರ ಬರೆದಿದ್ದಾರೆ.

ನಿಮ್ಮ ಭಾಷಣದಲ್ಲಿ ಎಲ್ಲವೂ ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಹಲವು ಬಾರಿ ಹೇಳಿದ್ದೀರಿ. ಎಲ್ಲಿ ವೈಜ್ಞಾನಿಕ ಪರೀಕ್ಷೆ ನಡೆಸಿದ್ದೀರಿ. ಯಾರು ಇದರ ಮುಖ್ಯ ಸಂಶೋಧರು. ಎಲ್ಲಿ ಸಂಶೋಧನೆಯನ್ನು ಪ್ರಕಟಿಸಿದ್ದೀರಿ. ಇದಕ್ಕೆ ಯೋಜನೆ ರೂಪಿಸಿದ ವಿವರಗಳು ಏನೆಲ್ಲ ಮುಂತಾದ ಪ್ರಶ್ನೆಗಳನ್ನು ವಿಜ್ಞಾನಿಗಳು ಎತ್ತಿದ್ದಾರೆ.

ನಿಮ್ಮ ಮಾತನ್ನು ಸಾಬೀತುಪಡಿಸದಿದ್ದರೆ ನಿಮ್ಮ ವರ್ತನೆ ಸಂವಿಧಾನವಿರೋಧಿ ಎನ್ನಬೇಕಾಗುತ್ತದೆ. ಆರ್ಟಿಕಲ್ 51ಎಯ ಪ್ರಕಾರ ವಿಜ್ಞಾನದ ಅರಿವನ್ನು ಹೊಂದುವುದು ಎಲ್ಲ ಭಾರತೀಯರ ಕರ್ತವ್ಯವವಾಗಿದೆ ಎಂದಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.