ಸರ್ಕಾರಿ ಉದ್ಯೋಗಿಗಳ ಸಂಬಳದಿಂದ ಪಿಎಂ ಕೇರ್ಸ್‍ ನಿಧಿಗೆ 157 ಕೋಟಿ ರೂ. ದೇಣಿಗೆ

0
384

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.16: ವಿವಿಧ ಸರಕಾರಿ ಇಲಾಖೆಗಳ ಉದ್ಯೋಗಿಗಳ ಸಂಬಳದಿಂದ ಪಿಎಂ ಕೇರ್ಸ್ ‌ನಿಧಿಗೆ 157.3 ಕೋಟಿ ರೂಪಾಯಿ ಹರಿದು ಬಂದಿದೆ. ಇದರಲ್ಲಿ ಶೇ.93ರಷ್ಟು ದೇಣಿಗೆಯನ್ನು ರೈಲ್ವೆ ಇಲಾಖೆ ನೀಡಿದೆ ಎಂದು ಮಾಹಿತಿ ಹಕ್ಕು ಕಾನೂನು ಪ್ರಕಾರ ಸಲ್ಲಿಸಿದ ಅರ್ಜಿಯ ಪ್ರಕಾರ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಇಂಡಿಯನ್ ರೈಲ್ವೆ 146.72 ಕೋಟಿ ರೂಪಾಯಿ ಸಂಬಳದಿಂದ ಸಂಗ್ರಹಿಸಿ ಪಿಎಂ ಕೇರ್ಸ್‌ಗೆ ಕೊಟ್ಟಿದೆ. ಬಾಹ್ಯಾಕಾಶ ಇಲಾಖೆ 5.18 ಕೋಟಿ ರೂಪಾಯಿ ನೀಡಿದ್ದು 59 ಸಚಿವಾಲಯಗಳ ಅಧೀನದ 89 ಕೇಂದ್ರ ಸರಕಾರದ ಇಲಾಖೆಗಳಲ್ಲಿ 50 ಇಲಾಖೆಗಳು ಮಾತ್ರ ವಿವರವನ್ನು ನೀಡಿವೆ. ಗೃಹ ಇಲಾಖೆ, ಪೋಸ್ಟಲ್ ಇಲಾಖೆ ನೀಡಿದ ದೇಣಿಗೆಯ ವಿವರ ಲಭ್ಯವಾಗಿಲ್ಲೆಂದು ಇಂಡಿಯನ್ ಎಕ್ಸ್‌ಪ್ರೆಸ್ ತಿಳಿಸಿದೆ.

ಪರಿಸರ ಇಲಾಖೆ 1.14ಕೋಟಿ, ವಿದೇಶ ಇಲಾಖೆ 43.26 ಲಕ್ಷ, ಸ್ಟಾಟಿಸ್ಟಿಕ್ಸ್ ಇಲಾಖೆ 34.83 ಲಕ್ಷ, ರಕ್ಷಣಾ ಇಲಾಖೆ 26.20 ಲಕ್ಷ ರೂಪಾಯಿ, ರೆವೆನ್ಯೂ 22.60 ಲಕ್ಷ ರೂಪಾಯಿಗಳನ್ನು ಪಿಎಂ ಕೇರ್ಸ್‌ಗೆ ದೇಣಿಗೆ ನೀಡಿವೆ.

ಈ ಹಿಂದೆ ಪಿಎಂ ಕೇರ್ಸ್‍ಗೆ ಸಿಕ್ಕಿರುವ ಹಣದ ವಿವರ ನೀಡಲಾಗದೆಂದು ಪ್ರಧಾನಿಯ ಕಚೇರಿ ಹೇಳಿತ್ತು. ಪಿಎಂ ಕೇರ್ಸ್ ಒಂದು ಸಾರ್ವಜನಿಕ ಫಂಡ್ ಅಲ್ಲ ಆದ್ದರಿಂದ ವಿವರಗಳನ್ನು ವೆಬ್‍ಸೈಟಿನಲ್ಲಿ ನೀಡಬೇಕಾಗಿಲ್ಲ ಎಂದು ಪ್ರಧಾನಿ ಕಚೇರಿ ಉತ್ತರಿಸಿತ್ತು. ಕಳೆದ ಮಾರ್ಚಿನಲ್ಲಿ ಕೊರೋನ ಹರಡುತ್ತಿದ್ದ ಪರಿಸ್ಥಿತಿಯಲ್ಲಿ ಪಿಎಂ ಕೇರ್ಸ್ ಫಂಡ್ ಆರಂಭವಾಗಿತ್ತು. ನಿಧಿಗೆ ಚಾಲನೆ ನೀಡಿದ ಐದು ದಿನಗಳಲ್ಲಿ 3,076 ಕೋಟಿ ರೂಪಾಯಿ ಇದಕ್ಕೆ ಸಿಕ್ಕಿತ್ತು ಎಂದು ವೆಬ್‍ಸೈಟ್ ಹೇಳುತ್ತದೆ.