ಅನುಪಮ ಮಹಿಳಾ ಮಾಸಿಕಕ್ಕೆ 20ರ ಸಂಭ್ರಮ: ನಾಳೆ ವಿಶೇಷಾಂಕ ಬಿಡುಗಡೆ, ಸನ್ಮಾನ

0
897

ಸನ್ಮಾರ್ಗ ವಾರ್ತೆ

ಮಂಗಳೂರು: ಮಂಗಳೂರಿನಿಂದ ಪ್ರಕಟವಾಗುತ್ತಿರುವ ಅನುಪಮ ಮಹಿಳಾ ಮಾಸಿಕಕ್ಕೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಿಶೇಷಾಂಕ ಬಿಡುಗಡೆ ಮತ್ತು ಮೂವರು ಮಹಿಳಾ ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದು ಅನುಪಮದ ಸಂಪಾದಕಿ ಶಹನಾಝ್ ಎಂ. ತಿಳಿಸಿದ್ದಾರೆ.

ಮಂಗಳೂರಿನ ಪತ್ರಿಕಾ ಭವನದಲ್ಲಿಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಅವರು, 20ನೇ ವರ್ಷ ಪೂರ್ಣಗೊಳಿಸಿದ ಈ ಸುಸಂದರ್ಭದಲ್ಲಿ ಅನುಪಮ ಬಳಗವು ವಿಶೇಷಾಂಕವೊಂದನ್ನು ಹೊರ ತಂದಿದ್ದು ಇದರ ಬಿಡುಗಡೆ ಡಿ.26 ಶನಿವಾರ ಮಧ್ಯಾಹ್ನ `ಶಾಂತಿ ಪ್ರಕಾಶನ ಸಭಾಂಗಣ’ದಲ್ಲಿ ನಡೆಯಲಿದೆ. ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ವಿಜಯ ಟೈಮ್ಸ್ ಪ್ರಧಾನ ಸಂಪಾದಕಿ ವಿಜಯಲಕ್ಷ್ಮಿ ಶಿಬರೂರು ವಿಶೇಷಾಂಕವನ್ನು ಬಿಡುಗಡೆಗೊಳಿಸಲಿದ್ದಾರೆ. ಕರಾವಳಿ ವಾಚಕಿ-ಲೇಖಕಿಯರ ಸಂಘದ ಕಾರ್ಯದರ್ಶಿ ಸುಖಾಲಾಕ್ಷಿ ವೈ ಸುವರ್ಣ, ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಸಮೀನಾ ಅಫ್ಶಾನ್ ಅತಿಥಿಗಳಾಗಿ ಭಾಗವಹಿಸಲಿರುವರು ಎಂದರು.

ಇದೇ ವೇಳೆ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆಗೈಯ್ಯುತ್ತಿರುವ ಜ್ಯೂಲಿಯೆಟ್ ಪಿಂಟೋ, ಆರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದಿರುವ ನರ್ಸ್ ಭವ್ಯಾರಿಗೆ ಹಾಗೂ ಸಮಾಜ ಸೇವೆಯಲ್ಲಿ ಹಲವಾರು ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿರುವ ಆಯಿಶಾ ಮುಮ್ತಾಝ್‍ರಿಗೆ ಸನ್ಮಾನ ಮಾಡಿ, ಗೌರವಿಸಲಾಗುವುದು ಎಂದು ಶಹನಾಝ್ ಎಂ. ತಿಳಿಸಿದ್ದಾರೆ.

ಈಗ ಮಹಿಳೆಯರು ಈ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ನೂರಾರು ಮಹಿಳಾ ಪತ್ರಕರ್ತೆಯರುತಮ್ಮ ಸಾಧನೆಯನ್ನು ದಾಖಲಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿಯೂ ಸ್ತ್ರೀಯರ ಪಾಲ್ಗೊಳ್ಳುವಿಕೆ ಗಮನಾರ್ಹವಾಗಿದೆ. ಹೀಗಿದ್ದರೂ ಮುಸ್ಲಿಮ್ ಮಹಿಳೆಯರ ಪಾಲುದಾರಿಕೆ ತೀರಾ ನಗಣ್ಯ ಇಂತಹ ಸಂದರ್ಭದಲ್ಲಿ 2000 ಇಸವಿಯಲ್ಲಿ ಮಂಗಳೂರಿನಿಂದ ಮುಸ್ಲಿಮ್ ಮಹಿಳೆಯರಿಂದಲೇ `ಅನುಪಮ’ ಎಂಬ ಮಾಸ ಪತ್ರಿಕೆ ಆರಂಭಗೊಂಡಿತು. ಇದು ಮಹಿಳೆಯರಿಂದ ಮಹಿಳೆಯರಿಗಾಗಿ ಪ್ರಕಟವಾಗುತ್ತಿರುವ ಕೌಟುಂಬಿಕ ಪತ್ರಿಕೆಯಾಗಿದೆ ಎಂದ ಅವರು, `ಅನುಪಮ’ ಜಾತಿ, ಜನಾಂಗ, ಮತ, ಧರ್ಮಗಳ ವ್ಯತ್ಯಾಸವಿಲ್ಲದೆ ಪ್ರತಿಭಾವಂತರಿಗೆ ಧ್ವನಿ ನೀಡಿದೆ.ಇಂದು, ಹೆಚ್ಚಿನ ಪತ್ರಿಕೆಗಳು ವಿಷಯ ಲಂಪಟತನ, ಸ್ತ್ರೀ ಸೌಂದರ್ಯ, ನಗ್ನ ಪ್ರಿಯತೆಯನ್ನು ನೆಚ್ಚಿನ ಸುದ್ಧಿಯಾಗಿಸಿರುವುದು ಎಲ್ಲರೂ ಬಲ್ಲರು.ಆದರೆ `ಅನುಪಮ’ ಶುದ್ಧ ಪತ್ರಿಕೋದ್ಯಮವನ್ನೇ ನೆಚ್ಚಿಕೊಂಡಿದೆ.ಹಿಂಸೆ, ಕಲಹ, ಒಡಕು, ಕೋಮು ಪಕ್ಷಪಾತ ಇತ್ಯಾದಿ ಕೆಡುಕುಗಳು `ಅನುಪಮ’ಕ್ಕೆ ಅಪರಿಚಿತವಾಗಿವೆ. ಇಂದು ಮಹಿಳೆಯರ ಸುಧಾರಣೆಯ ಹೆಸರಲ್ಲಿ ಶೋಷಣೆ ನಡೆಯುವುದೇ ಹೆಚ್ಚು.ಮನರಂಜನೆಯ ಹೆಸರಿನಲ್ಲಿ ಅಶ್ಲೀಲತೆ ದರ್ಶನವಾಗುವುದು ಜಾಸ್ತಿ. ಕೊರೋನಾ ಲಾಕ್ ಡೌನ್ ನ ಸಂಧರ್ಭದಲ್ಲೂ ಪತ್ರಿಕೆಯನ್ನು ನಿಲ್ಲಿಸದೆ ಎರಡು ತಿಂಗಳ ಜಂಟಿ ಸಂಚಿಕೆ ಚಾಲ್ತಿಯಲ್ಲಿತ್ತು ಎಂದು ಸಂಪಾದಕಿ ಶಹನಾಝ್ ಎಂ. ತಿಳಿಸಿದ್ದಾರೆ.

ಕೊರೋನಾ ಮಾರ್ಗಸೂಚಿಯ ಹಿನ್ನೆಲೆಯಲ್ಲಿ ಸರಳ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾಧ್ಯವಾದಲ್ಲಿ ಮುಂದಿನ ದಿನಗಳಲ್ಲಿ ಓದುಗರಿಗೂ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಅನುಪಮ ಬಳಗ ತಿಳಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಸಹ ಸಂಪಾದಕಿ ಸಬೀಹಾ ಫಾತಿಮಾ, ಶಹೀದಾ ಉಮರ್, ಸಮೀನಾ ಉಪ್ಪಿನಂಗಡಿ, ಕುಲ್ಸೂಮ್‍ ಅಬೂಬಕರ್ ಉಪಸ್ಥಿತರಿದ್ದರು.