ಡ್ಯಾಮ್ ನಲ್ಲಿ ಸ್ನಾನಕ್ಕೆ ತೆರಳಿದ್ದ ಮಲಯಾಳಂ ನಟ ಅನಿಲ್ ನೆಡುಮಂಗಾಡ್ ಮೃತ್ಯು

0
584

ಸನ್ಮಾರ್ಗ ವಾರ್ತೆ

ಕೇರಳ: ಸಿನಿಮಾ ಶೂಟಿಂಗ್ ನ ಮಧ್ಯೆ ದೊರೆತ ವಿಶ್ರಾಂತಿ ಸಮಯದಲ್ಲಿ ಸ್ನೇಹಿತರ ಜೊತೆಗೂಡಿ ಡ್ಯಾಮ್ ನಲ್ಲಿ ಸ್ನಾನಕ್ಕೆ ತೆರಳಿದ್ದ ಮಲಯಾಳಂ ಚಿತ್ರ ನಟ ಅನಿಲ್ ನೆಡುಮಂಗಾಡ್ ನೀರಿನ ಆಳಕ್ಕೆ ಸಿಲುಕಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಕೇರಳದ ತೋಡಪುಝ ಬಳಿಯ ಮಲಂಕರ ಡ್ಯಾಮ್‌ನಲ್ಲಿ ಅನಿಲ್ ಹಾಗೂ ಸ್ನೇಹಿತರು ಈಜಲು ತೆರಳಿದ್ದರು.‌ ಈ ವೇಳೆ ನೀರಿನ ಆಳಕ್ಕೆ ಸಿಲುಕಿ ಅನಿಲ್ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.

ಮಲಯಾಳಂ ನಲ್ಲಿ ಬಿಡುಗಡೆಯಾಗಿದ್ದ
ಅಯ್ಯಪ್ಪನುಮ್ ಕೋಶಿಯಮ್’, ‘ಕಮ್ಮಟಿಪಾಡಂ’, ‘ಪಾವಡ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಪಡೆದಿದ್ದ ಮಲಯಾಳಂ ನಟ ಅನಿಲ್ ರವರು ‘ಪೀಸ್’ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾಗ ಈ ಘಟನೆ ನಡೆದಿದೆ.

ಜೋಜು ಜಾರ್ಜ್ ‘ಪೀಸ್’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಶೂಟಿಂಗ್ ನ ಬ್ರೇಕ್ ವೇಳೆ ಅನಿಲ್ ಅವರು ಸ್ನೇಹಿತರ ಜೊತೆ ಡ್ಯಾಮ್ ಗೆ ಈಜಲು ತೆರಳಿದ್ದರು ಎನ್ನಲಾಗಿದೆ. ನೀರಿನ ಆಳಕ್ಕೆ ಹೋಗಿದ್ದ ಅನಿಲ್ ನದಿಯ ಸೆಳೆತಕ್ಕೆ ಸಿಲುಕಿದ್ದರಿಂದ ಮೃತಪಟ್ಟರೆಂದು ತಿಳಿದು ಬಂದಿದೆ. ಸ್ನೇಹಿತರು ಅನಿಲ್‌ ಮಿಸ್ ಆಗಿದ್ದಾರೆಂದು ಹುಡುಕಾಟ ನಡೆಸಿದ್ದಾರೆ. ಆದರೆ ಸಿಗದಿದ್ದಾಗ ರಕ್ಷಣಾ ದಳದ ಸಿಬ್ಬಂದಿಗಳು ಬಂದು ಹುಡುಕಿದಾಗ ಅನಿಲ್ ಪತ್ತೆಯಾಗಿದ್ದರು. ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆ ವೇಳೆಗಾಗಲೇ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು.

2014 ರಲ್ಲಿ ಮಲಯಾಳಂ ಚಿತ್ರರಂಗ ಪ್ರವೇಶಿಸಿದ್ದ ಇವರಿಗೆ 48 ವರ್ಷ ವಯಸ್ಸಾಗಿತ್ತು. ಮಲಯಾಳಂ ಚಿತ್ರರಂಗ ಅನಿಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. ನಟ ದುಲ್ಕರ್ ಸಲ್ಮಾನ್, ಪೃಥ್ವಿರಾಜ್, ಜೊಜು ಜಾರ್ಜ್, ಮೋಹನ್ ಲಾಲ್, ಮಮ್ಮುಟ್ಟಿ ಸೇರಿದಂತೆ ಮುಂತಾದ ಮಲಯಾಳಂ ನಟರು ಅನಿಲ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.