ಸನ್ಮಾರ್ಗ ವಾರ್ತೆ
ಶಾಜಹಾನ್ಪುರ(ಉತ್ತರಪ್ರದೇಶ): ಪ್ರಾರ್ಥನಾ ಕಾರ್ಯಕ್ರಮದ ವೇಳೆ ಕೈಸ್ತರಿಗೆ ಹಲ್ಲೆ ನಡೆಸಿ, ಬಲವಂತದಿಂದ ಜೈ ಶ್ರೀರಾಮ್ ಹೇಳುವಂತೆ ಮಾಡಿದ ಘಟನೆಯಲ್ಲಿ ವಿಹಿಂಪ ಕಾರ್ಯಕರ್ತರ ವಿರುದ್ಧ ಕೇಸು ದಾಖಲಿಸಬೇಕೆಂದು ಕ್ರೈಸ್ತ ನಾಯಕರು ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ. 20 ಜನರಿದ್ದ ತಂಡವು ಪ್ರಾರ್ಥನಾ ಕೇಂದ್ರಕ್ಕೆ ನುಗ್ಗಿ ದಾಂಧಲೆ ಮಾಡಿತ್ತು. ಮಹಿಳೆಯರನ್ನೂ ಸಹ ಹೊಡೆದಿತ್ತು. ಆದರೆ, ಥಳಿತಕ್ಕೊಳಗಾದವರ ಮೇಲೆಯೇ ಪೊಲೀಸರು ಕೇಸು ದಾಖಲಿಸಿದ್ದಾರೆ. ಲವ್ ಜಿಹಾದ್ನ ಹೆಸರಿನಲ್ಲಿ ಹೊಸದಾಗಿ ಜಾರಿಗೊಂಡ ಮತಾಂತರ ತಡೆ ಕಾನೂನು ಪ್ರಕಾರ ಪ್ರಾರ್ಥನೆಗೆ ನೇತೃತ್ವ ಕೊಟ್ಟ ಪಾಸ್ಟರ್ ಮುಂತಾದವರ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಸ್ವರ್ಗದ ಶುಭ ಸಮಾಚಾರ ಎಂಬ ಹೆಸರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ವಿಹಿಂಪ ನಾಯಕ ರಾಜೇಶಸ್ ಅವಸ್ತಿ, ಶ್ಯಾಂ ಮಿಶ್ರ, ಬಜರಂಗಲ್ ದಳ ನಗರ ಕನ್ವೀನರ್ ರಾಮ್ ಲಖನ್ ವರ್ಮ ಮುಂತಾದವರ ನೇತೃತ್ವದ ತಂಡ ಆಯುಧಗಳೊಂದಿಗೆ ಬಂದು ದಾಂಧಲೆ ನಡೆಸಿದೆ. ನಂತರ ಪಾಸ್ಟರ್ ಸಹಿತ ಅಲ್ಲಿದ್ದವರನ್ನು ವಿಹಿಂಪ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದರು.
ದುಷ್ಕರ್ಮಿಗಳ ಹೇಳಿಕೆಯ ಆಧಾರದಲ್ಲಿ ಪೊಲೀಸರು ಏಕಪಕ್ಷೀಯವಾಗಿ ಕ್ರೈಸ್ತ ವಿಶ್ವಾಸಿಗಳ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ ಎಂದು ಶಾಜಾನ್ಪುರ ಎಸ್ಪಿ ಆನಂದ್ಗೆ ನೀಡಿದ ದೂರಿನಲ್ಲಿ ಕ್ರೈಸ್ತ ನಾಯಕರು ಬೆಟ್ಟು ಮಾಡಿದ್ದಾರೆ. ಘಟನೆಯಲ್ಲಿ ನಿಷ್ಪಕ್ಷಪಾತವಾದ ತನಿಖೆ ನಡೆಸಿ ಅಪರಾಧಿಗಳ ವಿರುದ್ಧ ಕ್ರಮ ಜರಗಿಸಬೇಕೆಂದು ಇವರು ಮನವಿ ಮಾಡಿದ್ದಾರೆ. ಘಟನೆಯಲ್ಲಿ ತನಿಖೆ ನಡೆಯುತ್ತಿದ್ದು ಸತ್ಯಾಂಶ ಆಧಾರದಲ್ಲಿ ಕ್ರಮ ಜರಗಿಸುವುದಾಗಿ ಎಸ್ಪಿ ಆನಂದ್ ಹೇಳಿದರು.












