ಬೀಫ್‌ ಸ್ಟಾಲ್‌ಗಳಿಗೆ ಬೆಂಕಿ: ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಪೋಲಿಸ್ ಕಮಿಷನರ್ ಹಾಗೂ ಉಳ್ಳಾಲ ಠಾಣಾಧಿಕಾರಿಗಳು ಅಭಿನಂದನಾರ್ಹರು- ಫಾರೂಕ್ ಉಳ್ಳಾಲ್

0
610

ಸನ್ಮಾರ್ಗ ವಾರ್ತೆ

ಉಳ್ಳಾಲ: ಕೆಲವು ದಿನಗಳ ಹಿಂದೆ ಉಳ್ಳಾಲದ ತೊಕ್ಕೊಟ್ಟು ಒಳಪೇಟೆಯ ತಾತ್ಕಾಲಿಕ ಬೀಟ್ ಸ್ಟಾಲ್‌ಗಳಿಗೆ ಬೆಂಕಿ ಕೊಟ್ಟು ದ್ವಂಸಗೊಳಿಸಿದ ದುಷ್ಕರ್ಮಿ ನಾಗರಾಜ್ ಎಂಬಾತನನ್ನು ಬಂಧಿಸುವ ಮೂಲಕ ಪೋಲಿಸ್ ಕಮಿಷನರ್ ಮತ್ತು ಉಳ್ಳಾಲ ಪೋಲಿಸ್ ಠಾಣಾಧಿಕಾರಿಗಳು ಉಳ್ಳಾಲದ ಶಾಂತಿ ಪ್ರಿಯ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೋಲಿಸರ ಕರ್ತವ್ಯಕ್ಕೆ ಸವಾಲೊಡ್ಡಿದ ಈ ಪ್ರಕರಣವನ್ನು ಪತ್ತೆ ಹಚ್ಚಿರುವುದರಿಂದ ಅಭದ್ರತೆಯಿಂದ ವ್ಯಾಪಾರ ನಡೆಸುವ ಬೀಫ್ ಸ್ಟಾಲ್‌ಗಳ ಮಾಲಕರ ಸಹಿತ ಇತರೆಲ್ಲಾ ಬೀದಿ ಬದಿ ವ್ಯಾಪಾರಸ್ಥರಿಗೆ ಧೈರ್ಯ ವಿಶ್ವಾಸ ತುಂಬಿದಂತಾಗಿದೆ ಎಂದೂ ಪತ್ರಿಕಾ ಹೇಳಿಕೆಯಲ್ಲಿ ಫಾರೂಕ್ ಉಳ್ಳಾಲ್ ತಿಳಿಸಿದರು. ಮಂಗಳೂರು ಪೋಲಿಸ್ ಕಮಿಷನರ್ ಶ್ರೀ ಶಶಿಕುಮಾರ್ ಮತ್ತು ಉಳ್ಳಾಲ ಪೋಲಿಸ್ ಠಾಣಾಧಿಕಾರಿ ಶ್ರೀ ಸಂದೀಪ್ ಮತ್ತು ತಂಡ ನೀಡಿದ ವಾಗ್ದಾನದಂತೆ ಆರೋಪಿ ನಾಗರಾಜ್ ನನ್ನು ಬಂಧಿಸಿರುವುದು ನೆಮ್ಮದಿಗೆ ಪೂರಕವಾಗಿದೆ. ಆರೋಪಿಯನ್ನು ಹೆಚ್ಚಿನ ತನಿಖೆಗೊಳಪಡಿಸಿದರೆ ಪತ್ತೆಯಾಗದೆ ಉಳಿದಿರುವ ಹಲವು ಕೃತ್ಯಗಳು ಬಯಲಾಗುವ ಸಾಧ್ಯತೆ ಎಂದು ಹೇಳಿದ್ದಾರೆ.

ನಾಡಿನ ಸ್ವಾಸ್ಥ್ಯವನ್ನು ಕೆಡಿಸುವ ದುಷ್ಕರ್ಮಿಗಳ ಮೂಲೋತ್ಪಾಟನೆಯನ್ನು ಇಂತಹ ದಕ್ಷ-ಪ್ರಾಮಾಣಿಕ ಅಧಿಕಾರಿಗಳಿಂದ ನಿರೀಕ್ಷಿಸಬಹುದು ಎಂದು ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ.