ವಿಧಾನ ಪರಿಷತ್ ಫೋಟೋ ಗ್ಯಾಲರಿಯಲ್ಲಿ ಸಾವರ್ಕರ್ ಫೋಟೋ ಉದ್ಘಾಟಿಸಿದ ಯೋಗಿ ಆದಿತ್ಯನಾಥ್..!

0
555

ಸನ್ಮಾರ್ಗ ವಾರ್ತೆ

ಉತ್ತರ ಪ್ರದೇಶ: ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಫೋಟೋ ಗ್ಯಾಲರಿಯಲ್ಲಿ ಹಿಂದುತ್ವದ ವಿಚಾರವಾದಿ ಸಾವರ್ಕರ್ ಪೋಟೋ ಉದ್ಘಾಟಿಸಿರು‌ವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿವಾದದ ಕಿಡಿ ಹೊತ್ತಿಸಿದ್ದಾರೆ.

ಯೋಗಿಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಶಾಸಕ ದೀಪಕ್ ಸಿಂಗ್, ಫೋಟೋವನ್ನು ತೆಗೆದು ಹಾಕುವಂತೆ ಪತ್ರ ಬರೆದಿದ್ದಾರೆ.

“ಬ್ರಿಟಿಷರ ದೌರ್ಜನ್ಯವನ್ನು ತಡೆದುಕೊಂಡ ಮತ್ತು ಅವರ ಮುಂದೆ ತಲೆಬಾಗದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಫೋಟೋದೊಂದಿಗೆ ಬ್ರಿಟೀಷರಿಗೆ ಶರಣಾಗಿದ್ದ ಸಾವರ್ಕರ್ ಪೋಟೋ ಇಡುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲರಿಗೂ ಮಾಡಿದ ಅವಮಾನ” ಎಂದು ಅಧ್ಯಕ್ಷ ರಮೇಶ್ ಯಾದವ್ ಅವರಿಗೆ ಬರೆದ ಪತ್ರದಲ್ಲಿ ಸಿಂಗ್ ಹೇಳಿದ್ದಾರೆ.

ವೀರ್ ಸಾವರ್ಕರ್ ಅವರ ಚಿತ್ರವನ್ನು ವಿಧಾನ ಪರಿಷತ್ ನಲ್ಲಿ ಇಡುವ ಬದಲು ಬಿಜೆಪಿಯ ಸಂಸದೀಯ ಕಚೇರಿಯಲ್ಲಿ ಇಡಲಿ ಎಂದು ಕಿಡಿಗಾರಿರುವ ಅವರು, ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪರಿಷತ್ತಿನ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡುವಂತೆ ದೀಪಕ್ ಸಿಂಗ್ ಒತ್ತಾಯಿಸಿದ್ದಾರೆ.

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಈ ಕುರಿತು ಪ್ರತಿಕ್ರಿಯಿಸಿದ್ದು, ದೇಶದಲ್ಲಿ ವಿವಿಧ ಜನರು ಯಾವ ಕೊಡುಗೆ ನೀಡಿದ್ದಾರೆ ಎಂಬ ಬಗ್ಗೆ ಯುವಕರಲ್ಲಿ ಚರ್ಚೆ ನಡೆಯಬೇಕು ಮತ್ತು ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಹಕರಿಸಿದ ಎಲ್ಲರನ್ನು ಗೌರವಿಸಬೇಕು. ಆದರೆ ಬ್ರಿಟಿಷರಿಗೆ ಶರಣಾಗತಿಯಾದವರ ಬಗ್ಗೆ ಪ್ರಶ್ನೆಗಳಿರುವಾಗ ಇಂತಹ ಕ್ರಮ ಸರಿಯಲ್ಲ ಎಂದು ಹೇಳಿದ್ದಾರೆ.

ಭಾವಚಿತ್ರವನ್ನು ಉದ್ಘಾಟಿಸಿದ್ದ ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ, ಸಾವರ್ಕರ್ ಅವರು ಒಬ್ಬ ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ದಾರ್ಶನಿಕ‌‌. ಅವರ ವ್ಯಕ್ತಿತ್ವವು ಎಲ್ಲಾ ಭಾರತೀಯರಿಗೆ ಸ್ಫೂರ್ತಿಯ ಮೂಲವಾಗಿದೆ ಎಂದು ಹೇಳಿದ್ದರು.