ಕೃಷಿ ಕಾನೂನುಗಳನ್ನು ಒಂದೂವರೆ ವರ್ಷ ಸ್ಥಗಿತಗೊಳಿಸಲು ನಾವು ಸಿದ್ಧ: ಕೇಂದ್ರ ಸರಕಾರ

0
384

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ಒಂದೂವರೆ ವರ್ಷಗಳ ಕಾಲ ಸ್ಥಗಿತಗೊಳಿಸಲು ಸರ್ಕಾರ ಸಿದ್ಧವಾಗಿದೆ ಎಂದು ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದೆ ಎಂದು 10 ನೇ ಸುತ್ತಿನ ಮಾತುಕತೆಗೆ ಹಾಜರಾದ ರೈತರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದ್ದ ರೈತ ಸಂಘಗಳು ಈ ಪ್ರಸ್ತಾಪವನ್ನು ಪರಿಗಣಿಸುವುದಾಗಿ ಹೇಳಿದ್ದಾರೆ.

“ಸರ್ಕಾರವು ಹತ್ತನೇ ಸುತ್ತಿನ ಸಭೆಯಲ್ಲಿ ನಮ್ಮ ಮುಂದೆ ಹೊಸ ಪ್ರಸ್ತಾಪವನ್ನು ಇರಿಸಿದೆ. ಮೂರು ಹೊಸ ಕಾನೂನುಗಳ ಜೊತೆಗೆ ನಮ್ಮ ಎಲ್ಲ ಬೇಡಿಕೆಗಳನ್ನು ಪರಿಗಣಿಸುವ ವಿಶೇಷ ಸಮಿತಿಯನ್ನು ರಚಿಸಲು ಸಿದ್ಧವಾಗಿದೆ” ಎಂದು ಅಖಿಲ ಭಾರತ ಕಿಸಾನ್ ಸಭಾದ ಬಾಲ್ ಕಿಶನ್ ಸಿಂಗ್ ಬ್ರಾರ್ ಹೇಳಿದರು.

“ಸಮಿತಿಯು ಪರಿಶೀಲನೆಯನ್ನು ಪೂರ್ಣಗೊಳಿಸುವವರೆಗೆ, ಮೂರು ಹೊಸ ಕಾನೂನುಗಳನ್ನು ಒಂದೂವರೆ ವರ್ಷಕ್ಕೆ ತಡೆಹಿಡಿಯಲಾಗುವುದು ಎಂದು ಸರ್ಕಾರವು ಕೋರ್ಟ್ ನಲ್ಲಿ ಪ್ರಸ್ತಾಪಿಸಿದೆ” ಎಂದವರು ಹೇಳಿದರು.

ಕಳೆದ ವಾರದ ಆದೇಶದಲ್ಲಿ ಸುಪ್ರೀಂ ಕೋರ್ಟ್ ಕನಿಷ್ಠ ಎರಡು ತಿಂಗಳು ತಡೆಹಿಡಿದಿತ್ತಲ್ಲದೇ, ವಿಶೇಷ ನಾಲ್ವರು ಸದಸ್ಯರ ಸಮಿತಿಯೊಂದನ್ನು ವರದಿಯನ್ನು ಸಲ್ಲಿಸಲು ಎರಡು ತಿಂಗಳು ಕಾಲಾವಕಾಶ ನೀಡಿತ್ತು‌.

ಆದಾಗ್ಯೂ ಸಮಿತಿಯನ್ನು ರೈತರು ಒಪ್ಪಲಿಲ್ಲ. ಸಮಿತಿಯ ನಾಲ್ವರು ಸದಸ್ಯರು ಸರ್ಕಾರದ ಪರವಾಗಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಕಮಿಟಿಯ ಸದಸ್ಯರೋರ್ವರು ಹೊರ ಬಂದಿದ್ದರು‌.

“ಸರ್ಕಾರವು ಭಯಭೀತರಾಗಿದೆ ಮತ್ತು ಅದರ ಚರ್ಮವನ್ನು ಉಳಿಸುವ ಮಾರ್ಗಗಳನ್ನು ಹುಡುಕುತ್ತಿದೆ” ಎಂದು ಶ್ರೀ ಬ್ರಾರ್ ಹೇಳಿದ್ದಾರೆ‌.