ಪ. ಬಂಗಾಳದಿಂದ ಬಿಜೆಪಿಯನ್ನು ಹೊರಹಾಕಲು ನನ್ನ ಒಂದು ಕಾಲು ಸಾಕು- ಮಮತಾ ಬ್ಯಾನರ್ಜಿ

0
948

ಕೋಲ್ಕತಾ: ಪುರುಲಿಯಾದ ಬಾಗ್ಮುಂಡಿಯಲ್ಲಿ ವೀಲ್ ಚೇರ್‌ನಲ್ಲಿಯೇ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿಯವರು, ನಾನು ಮನೆಯಲ್ಲಿ ಸೀಮಿತವಾಗಬಹುದೆಂದು ಅನೇಕ ಜನ ಭಾವಿಸಿದ್ದರು. “ನಾನು ಗಾಯಗೊಂಡ ನಂತರ, ಮನೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ ಎಂದು ಹಲವರು ಭಾವಿಸಿದ್ದರು. ಆದರೆ ನಾನು ಅನೇಕ ದಾಳಿಗಳನ್ನು ಎದುರಿಸಿದ್ದೇನೆ ಮತ್ತು ಹಲವಾರು ಸಂದರ್ಭಗಳಲ್ಲಿ ಗಾಯಗೊಂಡಿದ್ದೇನೆ. ಆದರೆ ನಾನು ಜನರನ್ನು ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ. ವೀಲ್ ಚೇರ್ ನಲ್ಲಿಯೇ ನಾನು ರಾಜ್ಯದಾದ್ಯಂತ ಪ್ರಯಾಣಿಸುತ್ತೇನೆ. ದಾಳಿಯಿಂದ ನಾನು ಕೆಳಗಿಳಿಯುವುದಿಲ್ಲ. ಪ. ಬಂಗಾಳದಿಂದ ಬಿಜೆಪಿಯನ್ನು ಹೊರಹಾಕಲು ನನ್ನ ಒಂದು ಕಾಲು ಸಾಕು” ಎಂದು ಅವರು ಬಿಜೆಪಿಯ ವಿರುದ್ದ ಹರಿಹಾಯ್ದರು.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಕಣವು ರಂಗೇರುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಸೋಮವಾರ ಜಂಗ್ಲೆಮಹಲ್‌ನಲ್ಲಿ ತಮ್ಮ ಪ್ರಚಾರದ ಸಂದರ್ಭದಲ್ಲಿ ಪರಸ್ಪರ ವಾಕ್ ಸಮರ ನಡೆಸಿದರು.

ಫುಟ್‌ಬೋರ್ಡ್‌ನಲ್ಲಿ ನಿಂತಿದ್ದ ಜನರನ್ನು ಸ್ವಾಗತಿಸುವ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ಮಮತಾ ಗಾಯಗೊಂಡಿರುವ ಘಟನೆಯನ್ನು ಉಲ್ಲೇಖಿಸಿದ ಅಮಿತ್ ಶಾ, ಆ ಸಣ್ಣ “ಘಟನೆಯ ನಂತರ ನೀವು ನೋವಿನಿಂದ ಬಳಲುತ್ತಿದ್ದೀರಿ. ನಿಮ್ಮ ರಾಜಕೀಯದಿಂದಾಗಿ ನಮ್ಮ ಪಕ್ಷದ 130 ಕಾರ್ಯಕರ್ತರು ಹತ್ಯೆಯಾದಾಗ ನೀವು ನೋವು ಅನುಭವಿಸಿದ್ದೀರಾ? ನಮ್ಮ ಹುತಾತ್ಮರ ತಾಯಂದಿರ ನೋವನ್ನು ನೀವು ಅನುಭವಿಸಿದ್ದೀರಾ?” ಮಮತಾತ ವಿರುದ್ಧ ವಾಗ್ದಾಳಿ ನಡೆಸಿದರು.

“ನನ್ನ ಹೆಲಿಕಾಪ್ಟರ್‌ನ ತಾಂತ್ರಿಕ ಕಾರಣದಿಂದಾಗಿ ನಾನು ಇಲ್ಲಿಗೆ ತಡವಾಗಿ ಬಂದಿದ್ದೇನೆ. ಆದರೆ ಇದರ ಹಿಂದೆ ಯಾವುದೋ ಪಿತೂರಿ ಎಂದು ನಾನು ಹೇಳುವುದಿಲ್ಲ. ನಂದಿಗ್ರಾಮದಲ್ಲಿ ಸಿಎಂ ಮೇಲೆ ದಾಳಿ ನಡೆದಿದೆ ಎಂದು ವಿವರಿಸಲಾಗಿದೆ. ಆದರೆ ಚುನಾವಣಾ ಆಯೋಗ ಇದೊಂದು ಅಪಘಾತ ಎಂದು ಹೇಳಿದೆ ಎಂದು ನಂದಿಗ್ರಾಮ ಘಟನೆ ಒಂದು ‘ಪಿತೂರಿ’ ಎಂದು ಹೇಳಿದ್ದ ಮಮತಾ ಬ್ಯಾನರ್ಜಿಗೆ ಅಮಿತ್ ಶಾ ತಿರುಗೇಟು ನೀಡಿದರು.