ಆಯಿಷಾ ಮತ್ತು ತಾಬಿಶ್: ಸದ್ದಿಲ್ಲದ ಜಾಗೃತಿ ಕಾರ್ಯಕ್ರಮದ ಪುಷ್ಪಗಳು

0
976

ಸನ್ಮಾರ್ಗ ಸಂಪಾದಕೀಯ

ಕಳೆದವಾರ ದಕ್ಷಿಣ ಕನ್ನಡ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಎಲ್ಲರ ಗಮನ ಸೆಳೆದರು. ನವದೆಹಲಿಯಿಂದ ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆನ್ಸ್ ಆಫ್ ಇಂಡಿಯಾವು ಕಳೆದ ಜನವರಿಯಲ್ಲಿ ಸಿಎ ಅಂತಿಮ ಪರೀಕ್ಷೆ ನಡೆಸಿತ್ತು. ಇದರಲ್ಲಿ ಕಿಲ್ಲೂರಿನ ಆಯಿಷಾ ಎಂಬ ಯುವತಿ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆ ಹೊಂದಿ ಸುದ್ದಿಗೀಡಾದರು. ಇನ್ನೊಬ್ಬರು ಮುಹಮ್ಮದ್ ತಾಬಿಶ್ ಹಸನ್. ಸಿಎ ಪರೀಕ್ಷೆಯಲ್ಲಿ ಇವರು ರಾಷ್ಟ್ರ ಮಟ್ಟದಲ್ಲೇ 10ನೇ ರ‍್ಯಾಂಕ್ ಪಡೆದರು. ಇವರು ಉಪ್ಪಿನಂಗಡಿಯವರು.

ಕಳೆದ ಒಂದೂವರೆ ದಶಕದಿಂದೀಚೆಗೆ ಮುಸ್ಲಿಮ್ ಸಮುದಾಯದಲ್ಲಿ ಶೈಕ್ಷಣಿಕ ಪ್ರಗತಿ ಪವಾಡಸದೃಶ ರೀತಿಯಲ್ಲಿ ಜಾಗೃತಗೊಂಡಿರುವುದಕ್ಕೆ ಈ ಇಬ್ಬರು ವಿದ್ಯಾರ್ಥಿಗಳ ಸಾಧನೆಯಷ್ಟೇ ಸಾಕ್ಷ್ಯವಲ್ಲ. ಪ್ರತಿ ವರ್ಷದ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿ ಅಂತಿಮ ಪರೀಕ್ಷೆಗಳ ಫಲಿತಾಂಶಗಳು ಬಾರಿಬಾರಿಗೂ ಇದನ್ನು ಸ್ಪಷ್ಟಪಡಿಸುತ್ತಲೇ ಇವೆ. ಮುಸ್ಲಿಮ್ ಹೆಣ್ಣು ಮಕ್ಕಳ ಸಾಧನೆಯಂತೂ ಅಪೂರ್ವ. ಮುಸ್ಲಿಮ್ ಒಡೆತನದ ಮತ್ತು ಮುಸ್ಲಿಮ್ ಹೆಣ್ಣು ಮಕ್ಕಳು ಹೆಚ್ಚು ಕಲಿಯುತ್ತಿರುವ ಶಾಲೆಗಳು ಮತ್ತೆ ಮತ್ತೆ 100% ಫಲಿತಾಂಶವನ್ನು ದಾಖಲಿಸುತ್ತಾ ಬರುತ್ತಿರುವುದೂ ಗಮನಾರ್ಹ.

ಒಂದು ಕಾಲದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಮುಸ್ಲಿಮರ ಪಾಲು ತೀರಾ ಕಡಿಮೆಯಿತ್ತು. ಮುಸ್ಲಿಮ್ ಗಂಡು ಮಕ್ಕಳಿಗಿಂತಲೂ ಹೆಣ್ಣು ಮಕ್ಕಳ ಶಾಲಾ ಸೇರ್ಪಡೆ ವಿರಳವಾಗಿತ್ತು. ಸ್ಥಳೀಯವಾಗಿ ಎಷ್ಟನೇ ತರಗತಿವರೆಗೆ ಕಲಿಕೆ ಲಭ್ಯ ಇರುತ್ತದೋ ಅಲ್ಲಿಯವರೆಗೆ ಮಾತ್ರ ಹೆಣ್ಣು ಮಕ್ಕಳನ್ನು ಕಳುಹಿಸುವ ಮತ್ತು ಪಟ್ಟಣಕ್ಕೆ ಕಳುಹಿಸದೇ ಇರುವ ಮನೆಗಳು ಹಳ್ಳಿ ಮತ್ತು ಗ್ರಾಮೀಣ ಭಾಗದಲ್ಲಿ ಧಾರಾಳ ಇದ್ದುವು. ಗಂಡು ಮಕ್ಕಳಿಗೆ ಸಂಬಂಧಿಸಿ ಈ ಅನುಪಾತನದಲ್ಲಿ ಪ್ರಗತಿ ಇದ್ದರೂ ಭಾರೀ ಅನ್ನುವ ಪ್ರಮಾಣದಲ್ಲಿ ಇದ್ದಿರಲಿಲ್ಲ. ಇಂಥ ಸ್ಥಿತಿಯಲ್ಲಿ ಮುಸ್ಲಿಮ್ ಸಮುದಾಯದ ಒಳಗೆ ಒಂದು ಕ್ರಾಂತಿಕಾರಿ ಜಾಗೃತಿ ಕಾರ್ಯಕ್ರಮಗಳು ಅಲ್ಲಲ್ಲಿ ಆರಂಭವಾದುವು. ಧಾರ್ಮಿಕ ಸಂಘಟನೆಗಳು ಶಿಕ್ಷಣದ ಮಹತ್ವದ ಬಗ್ಗೆ ನಾಗರಿಕರಲ್ಲಿ ಎಚ್ಚರಿಕೆ ಮೂಡಿಸತೊಡಗಿದರು. ಹೆಣ್ಣು ಮತ್ತು ಗಂಡು ಮಕ್ಕಳು ಜೊತೆಯಾಗಿ ಕಲಿಯುವ ಕಲಿಕಾ ವಿಧಾನಕ್ಕೆ ಹೆಚ್ಚಿನ ಪೋಷಕರು ಒಲವು ತೋರದಿರುವುದೂ ವ್ಯಕ್ತವಾಯಿತು. ಹೆಣ್ಣು ಮಕ್ಕಳನ್ನು ಪ್ರಾಥಮಿಕ ಶಾಲಾ ಹಂತದ ಬಳಿಕ ಪ್ರೌಢ ಮತ್ತು ಕಾಲೇಜು ವಿದ್ಯಾಭ್ಯಾಸಕ್ಕೆ ಕಳುಹಿಸದೇ ಇರುವುದಕ್ಕೆ ಹೆಚ್ಚಿನ ಪೋಷಕರು ಈ ಕೋ-ಎಜುಕೇಶನ್ ಪದ್ಧತಿಯನ್ನು ಕಾರಣವಾಗಿ ನೀಡತೊಡಗಿದರು. ಇಂಥ ಸಂದರ್ಭದಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗಿಯಾದವರು ಎರಡು ಸವಾಲುಗಳಿಗೆ ಉತ್ತರವನ್ನು ಕಂಡುಕೊಳ್ಳಬೇಕಾಗಿತ್ತು.

1. ಕೋ-ಎಜುಕೇಶನ್‌ನ ಅಗತ್ಯ ಮತ್ತು ಶಿಕ್ಷಣದ ಬೇರೆ ಬೇರೆ ಕ್ಷೇತ್ರಗಳಲ್ಲಿ ಅದು ಕೆಲವೊಮ್ಮೆ ಅನಿವಾರ್ಯವಾಗುವುದನ್ನು ಸಮುದಾಯಕ್ಕೆ ತಿಳಿಯಪಡಿಸುವುದು.

2. ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಕ್ಷಣಕ್ಕೆ ನೋಡಿಕೊಳ್ಳುವುದು.

ಮೊದಲನೆಯದ್ದು ದೀರ್ಘಕಾಲವನ್ನು ಬಯಸುವ ಯೋಜನೆ. ಹೆಣ್ಣು-ಗಂಡು ಜೊತೆಯಾಗಿ ಕಲಿಯುವುದೇ ಅಪರಾಧ ಎಂದು ತಿಳಿ ದಿರುವ ಜನರನ್ನು ಒಂದು ರಾತ್ರಿ-ಬೆಳಗಾಗುವುದರೊಳಗೆ ತಿದ್ದುವುದು ಸಾಧ್ಯವಿಲ್ಲ. ಅದರ ಅನಿವಾರ್ಯತೆ ಎಲ್ಲೆಲ್ಲ ಬರುತ್ತದೆ ಮತ್ತು ಯಾಕೆ ಬರುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಹಲವು ವರ್ಷಗಳೇ ಬೇಕಾಗಬಹುದು. ಕೆಲವೊಮ್ಮೆ ಸ್ವಯಂ ಅನುಭವಕ್ಕೆ ಬರದ ಹೊರತು ಒಪ್ಪಿಕೊಳ್ಳುವುದಕ್ಕೂ ಅವರು ಸಿದ್ಧವಾಗಲಾರರು. ಹಾಗಂತ,

ಅಲ್ಲಿಯವರೆಗೆ ಹೆಣ್ಣು ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವುದಕ್ಕೂ ಆಗುವುದಿಲ್ಲ. ಇದಕ್ಕೆ ಪರಿಹಾರ ಏನೆಂದರೆ, ಎರಡನೆಯ ದಾರಿ. ಹೆಣ್ಣು ಮಕ್ಕಳಿಗಾಗಿಯೇ ಶಾಲೆಗಳನ್ನು ತೆರೆಯುವುದು ಮತ್ತು ಆ ಶಾಲೆಯನ್ನು ಎಲ್ಲ ಧರ್ಮದ ಹೆಣ್ಣು ಮಕ್ಕಳಿಗೂ ಮುಕ್ತವಾಗಿಡುವುದು. ಗುಣಮಟ್ಟದ ಶಿಕ್ಷಣವನ್ನು ಕೊಟ್ಟು ಅವರನ್ನು ಸಬಲರನ್ನಾಗಿಸುವುದು. ಮಾತ್ರವಲ್ಲ, ಸಮುದಾಯದ ಒಳಗೆ ಶೈಕ್ಷಣಿಕ ಜಾಗೃತಿಯನ್ನು ನಿರಂತರವಾಗಿ ಜಾರಿಯಲ್ಲಿಡುವುದು. ಇಂಥ ಉದ್ದೇಶವನ್ನಿಟ್ಟುಕೊಂಡು ರಂಗಕ್ಕಿಳಿದುದರ ಪರಿಣಾಮವಾಗಿ ಅಲ್ಲಲ್ಲಿ ಹೆಣ್ಣು ಮಕ್ಕಳ ಪ್ರೌಢ ಶಾಲೆ ಮತ್ತು ಕಾಲೇಜುಗಳು ತಲೆ ಎತ್ತಿದುವು. ಇತರ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತೆ ಎಲ್ಲ ಕೋರ್ಸುಗಳೊಂದಿಗೆ ಗುಣಮಟ್ಟದ ಶಿಕ್ಷಣವನ್ನು ಅವು ನೀಡತೊಡಗಿದುವು. ಇದನ್ನು ಮುಸ್ಲಿಮ್ ಸಮುದಾಯ ಬೊಗಸೆಯೊಂದಿಗೆ ಸ್ವೀಕರಿಸಿತು. ಆವರೆಗೆ ಹೆಣ್ಣು ಮಕ್ಕಳನ್ನು ಪ್ರಾಥಮಿಕ ಹಂತದಿಂದ ಮುಂದಕ್ಕೆ ಕಳುಹಿಸಲು ಒಪ್ಪದೇ ಇದ್ದ ಹೆತ್ತವರೂ ತಮ್ಮ ಹೆಣ್ಣು ಮಕ್ಕಳನ್ನು ಇಂಥ ಶಾಲೆಗಳಿಗೆ ಕಳುಹಿಸತೊಡಗಿದರು. ಮಕ್ಕಳ ಕಲಿಕಾ ಆಸಕ್ತಿ ಮತ್ತು ಸಾಧನೆಗೆ ಹೆಮ್ಮೆ ಪಟ್ಟುಕೊಳ್ಳತೊಡಗಿದರು. ನೋಡನೋಡುತ್ತಲೇ ಹೆಣ್ಣು ಮಕ್ಕಳು ಸಮಾಜದ ಇತರ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಪೈಪೋಟಿ ನೀಡತೊಡಗಿದರು. ರ‍್ಯಾಂಕ್ ವಿದ್ಯಾರ್ಥಿಗಳಲ್ಲಿ, ಉನ್ನತ ಶ್ರೇಣಿ ಪಡೆದು ತೇರ್ಗಡೆಯಾದವರಲ್ಲಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಯಶಸ್ವಿಯಾದವರಲ್ಲಿ, ಡಾಕ್ಟರೇಟ್ ಪಡೆದವರಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳು ಕಣ್ಣಿಗೆ ಕುಕ್ಕುವಷ್ಟು ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡರು. ವಿಶೇಷ ಏನೆಂದರೆ,

ಹೆಣ್ಣು ಮಕ್ಕಳ ಈ ಸಾಧನೆಯು ಪರೋಕ್ಷವಾಗಿ ಮುಸ್ಲಿಮ್ ಗಂಡು ಮಕ್ಕಳ ಕಲಿಕೆಯ ಮೇಲೂ ಪ್ರಭಾವ ಬೀರತೊಡಗಿತು ಎಂಬುದು. ಪ್ರತಿ ಮನೆಯಲ್ಲೂ ಹೆಣ್ಣು ಮಕ್ಕಳ ಸಾಧನೆ ಚರ್ಚಿತವಾಗುತ್ತಿರುವುದರ ಪರಿಣಾಮ ಗಂಡು ಮಕ್ಕಳ ಮೇಲೂ ಆಯಿತು. ಗಂಡು ಮಕ್ಕಳನ್ನು ಹೆಚ್ಚೆಚ್ಚು ಓದಿಸುವಂತೆ ಪ್ರತಿ ಹೆತ್ತವರನ್ನೂ ಈ ಬೆಳವಣಿಗೆ ಪರೋಕ್ಷವಾಗಿ ಒತ್ತಾಯಿಸತೊಡಗಿತು. ಇಂಥದ್ದೊಂದು ವಾತಾವರಣವು ಅಂತಿಮವಾಗಿ ಮುಸ್ಲಿಮ್ ಸಮುದಾಯದ ಪಾಲಿಗೆ ಭಾರೀ ಲಾಭಕರವಾಗಿ ಪರಿಣಮಿಸುತ್ತದೆ ಎಂಬುದಕ್ಕೆ ಇತ್ತೀಚಿನ ವರ್ಷಗಳು ಸಾಕ್ಷ್ಯ ಹೇಳುತ್ತಲೇ ಇವೆ. ಕಿಲ್ಲೂರಿನ ಆಯಿಷಾ ಮತ್ತು ಉಪ್ಪಿನಂಗಡಿಯ ತಾಬಿಶ್‌ರು ಅದರ ತಾಜಾ ಉದಾಹರಣೆಯಷ್ಟೇ.

ಅದರಲ್ಲೂ ಕಿಲ್ಲೂರಿನ ಆಯಿಷಾರ ಹಿನ್ನೆಲೆ ವಿಶಿಷ್ಟವಾದುದು. ಅವರ ತಂದೆ ಓರ್ವ ಮೌಲಾನಾ. ಅತ್ತ ಮಸೀದಿಯಲ್ಲಿ ನಮಾಝï‌ಗೆ ನೇತೃತ್ವ ನೀಡುತ್ತಾ ಮತ್ತು ಇತ್ತ ಮಗಳ ಉನ್ನತ ಶಿಕ್ಷಣದ ಕನಸು ಕಾಣುತ್ತಾ ಅದರಲ್ಲಿ ಯಶಸ್ವಿಯಾದವರು ಅವರು. ಎರಡು ದಶಕಗಳ ಹಿಂದೆ ಓರ್ವ ಮೌಲಾನಾರ ಮಗಳಿಂದ ಇಂಥದ್ದೊಂದು ಸಾಧನೆ ಅನಿರೀಕ್ಷಿತ. ಮೌಲಾನಾರು ತನ್ನ ಮಗಳನ್ನು ಸಿಎ ಮಾಡಿಸುವುದೋ ಉನ್ನತ ಶಿಕ್ಷಣ ಕೊಡಿಸುವುದೋ ಅಂದು ಸುಲಭ ಆಗಿರಲಿಲ್ಲ. ಆದರೆ, ಈಗ ಎಲ್ಲವೂ ಸಾಧ್ಯವಾಗುತ್ತಿದೆ. ಆದ್ದರಿಂದಲೇ ಇಂದು ಮುಸ್ಲಿಮ್ ಸಮುದಾಯವು ಆಯಿಷಾ, ತಾಬಿಶ್‌ರಂಥ ಸಾಧಕರನ್ನು ತಮ್ಮ ಮಕ್ಕಳ ಮುಂದೆ ಪ್ರಸ್ತಾಪಿಸಿ ಹೆಮ್ಮೆ ಪಟ್ಟುಕೊಳ್ಳಬೇಕು. ಶೈಕ್ಷಣಿಕವಾಗಿ ಸಬಲರಾಗುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯೊಂದಿಗೆ ಮಿಂಚುವ ಕನಸನ್ನು ಮಕ್ಕಳಲ್ಲಿ ಬಿತ್ತಬೇಕು.

ಶಿಕ್ಷಣವು ಪ್ರಬಲ ಆಯುಧ. ಅದು ಹೆಣ್ಣಾಗಲಿ ಗಂಡಾಗಲಿ- ಇಬ್ಬರಲ್ಲೂ ಸ್ವಂತಿಕೆಯನ್ನು, ವೈಚಾರಿಕ ಸ್ಪಷ್ಟತೆಯನ್ನು ಮತ್ತು ಧೈರ್ಯವನ್ನು ತುಂಬುತ್ತದೆ. ಸಮುದಾಯದ ಮತ್ತು ಸಮಾಜದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಛಾತಿಯನ್ನು ಅವರಿಗೆ ಕಲಿಸಿಕೊಡುತ್ತದೆ. ಯಾವುದೇ ವಿಷಯದ ಮೇಲೆ ನಿರ್ಧಾರ ಕೈಗೊಳ್ಳುವ ಶಕ್ತಿಯನ್ನು ಹುಟ್ಟು ಹಾಕುತ್ತದೆ.

ಆಯಿಷಾ ಮತ್ತು ತಾಬಿಶ್‌ರಿಗೆ ಅಭಿನಂದನೆಗಳು.