ಮನೆಗೆ ವಿಶಿಷ್ಟವಾಗಿ ಪೈಂಟ್ ಬಳಿದು ಪಕ್ಷ ಪ್ರೇಮ ಮೆರೆದ ಕೇರಳ ಯೂತ್ ಕಾಂಗ್ರೆಸ್ ಕಾರ್ಯಕರ್ತ

0
605

ಸನ್ಮಾರ್ಗ ವಾರ್ತೆ

ಕೊಚ್ಚಿ: ತೀವ್ರ ಕುತೂಹಲ ಕೆರಳಿಸಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಪಕ್ಷಗಳ ವಿವಿಧ ಅಭ್ಯರ್ಥಿಗಳು ಜಯಗಳಿಸಲು ಹಲವಾರು ತಂತ್ರಗಾರಿಕೆಗಳನ್ನು ರೂಪಿಸಿ ಮತದಾರರ ಮನ ಗೆಲ್ಲಲು ಕಸರತ್ತು ನಡೆಸುತ್ತಿದ್ದಾರೆ. ಈ ಮಧ್ಯೆ ಕೇರಳ ಯೂತ್ ಕಾಂಗ್ರೆಸ್ ಕಾರ್ಯಕರ್ತನೋರ್ವ ತನ್ನ ಮನೆಗೆ ಸಂಪೂರ್ಣವಾಗಿ ವಿಶಿಷ್ಟವಾಗಿ ಪೈಂಟ್ ಮಾಡಿಸುವ ಮೂಲಕ ಪಕ್ಷ ಪ್ರೇಮ ಮೆರೆದಿದ್ದಾರೆ.

ಕೇರಳದ ಕೊಚ್ಚಿಯಲ್ಲಿನ ವೈಪಿನ್ ವಿಧಾನಸಭಾ ಕ್ಷೇತ್ರದ ಕೇರಳ ಯೂತ್ ಕಾಂಗ್ರೆಸ್ ಕಾರ್ಯಕರ್ತ ನೊಬೆಲ್ ಕುಮಾರ್ ತನ್ನ ಮನೆಗೆ ಯುಡಿಎಫ್ ನ ಪ್ರಚಾರಕ್ಕಾಗಿ ವಿಶಿಷ್ಟವಾಗಿ ಬಣ್ಣ ಬಳಿಸುವ ಮೂಲಕ ಸುದ್ದಿಯಾಗಿದ್ದಾರೆ. ತನ್ನ ಮನೆಯ ಗೋಡೆಯಲ್ಲಿ ಯುಡಿಎಫ್ ನ ನಾಯಕರ ಚಿತ್ರದ ಜೊತೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ಚಿತ್ರವನ್ನು ಬರೆಸಿದ್ದಾರೆ.

ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ನೊಬೆಲ್ ಕುಮಾರ್, ನನ್ನ ತಲೆಯಲ್ಲಿ ಆಲೋಚನೆ ಬಂದಾಗ ನನಗೆ ಸಹಕರಿಸಿದವರು ನನ್ನ ಗೆಳೆಯ ರಾಧಾಕೃಷ್ಣ. ಈ ಪೈಂಟ್ ಕಾರ್ಯ ಮುಗಿಸುವಾಗ ಸುಮಾರು ಎಂಟು ದಿನಗಳಾಗಿದೆ. ನನಗೆ 9,000 ರೂಪಾಯಿಯಷ್ಟು ಹಣ ಖರ್ಚಾಗಿದೆ. ವಿಶಿಷ್ಟವಾಗಿ ಪಕ್ಷದ ಪ್ರಚಾರ ನಡೆಸಬೇಕು ಎಂಬ ಹುಮ್ಮಸ್ಸಿನಲ್ಲಿ ನಾನು ಈ ರೀತಿಯ ಆಲೋಚನೆ ಮಾಡಿದ್ದಾಗಿ ಅವರು ತಿಳಿಸಿದ್ದಾರೆ

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಕೇರಳ ವಿರೋಧಪಕ್ಷದ ನಾಯಕ ರಮೇಶ್ ಚೆನ್ನಿತ್ತಲ, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಸಂಸದ ಹಿಬಿ ಈಡೆನ್, ಯುಡಿಎಫ್ ನ ವೈಪಿನ್ ವಿಧಾನಸಭಾ ಕ್ಷೇತ್ರದ ದೀಪಕ್ ಜಾಯ್ ರವರ ಚಿತ್ರವನ್ನು ಬಳಿಯಲಾಗಿದೆ. ಮತದಾರರನ್ನು ಆಕರ್ಷಿಸಲು ಕೇರಳದಲ್ಲಿ ಯುಡಿಎಫ್ ಸರ್ಕಾರ ಬಂದರೆ ನೀಡುವ ವಾಗ್ದಾನಗಳನ್ನು ಮಲಯಾಳಂನಲ್ಲಿ ಬರೆಯಲಾಗಿದೆ. ರಾಹುಲ್ ಗಾಂಧಿ ಭರವಸೆ ನೀಡಿರುವ ‘ನ್ಯಾಯ್’ ಯೋಜನೆಯನ್ನು ಮುಖ್ಯವಾಗಿ ಉಲ್ಲೇಖಿಸಲಾಗಿದೆ.

ಸದ್ಯ ಇದು ಮತದಾರರನ್ನು ಎಷ್ಟು ಸೆಳೆಯಬಹುದು ಎಂದು ಏಪ್ರಿಲ್ 6 ರಂದು ನಡೆಯುವ ಚುನಾವಣೆಯಲ್ಲಿ ಕಾದು ನೋಡಬೇಕು. 140 ಕೇರಳ ವಿಧಾನಸಭಾ ಚುನಾವಣೆಗೆ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2ರಂದು ಫಲಿತಾಂಶ ಹೊರಬೀಳಲಿದೆ.