ಸನ್ಮಾರ್ಗ ವಾರ್ತೆ
ಬೆಂಗಳೂರು: ಜನರ ಕೂಗನ್ನು ಸರಕಾರಕ್ಕೆ ತಲುಪಿಸಲು ‘ಜನಾಗ್ರಹ ಆಂದೋಲನ’ ಪ್ರಾರಂಭವಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಸರಕಾರವನ್ನು ಜಾಗೃತಗೊಳಿಸುವ ಪ್ರಯತ್ನ ಭರದಿಂದ ನಡೆದಿದೆ. ಮೇ 6 ರಂದು ಸಾಣೆಹಳ್ಳಿಯ ಪಂಡಿತರಾಧ್ಯ ಶ್ರೀಗಳು ಈ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಹಿರಿಯ ಸ್ವಾತಂತ್ರ ಹೋರಾಟಗಾರರದ ಹೆಚ್. ಎಸ್. ದೊರೆಸ್ವಾಮಿ, ಸಾಹಿತಿ ಬರಗೂರು ರಾಮಚಂದ್ರಪ್ಪ, ನಿವೃತ್ತ ಐಎಎಸ್ ಅಧಿಕಾರಿ ಶಸಿಕಾಂತ್ ಸೆಂದಿಲ್, ಹಿರಿಯ ಸಾಮಾಜಿಕ ಕಾರ್ಯಕರ್ತ ಕೆ.ಎಲ್. ಅಶೋಕ್, ದಲಿತ ಚಳವಳಿಯ ಮುಖಂಡ ಮಾವಳ್ಳಿ ಶಂಕರ್ ಮುಂತಾದವರು ಈ ಪ್ರಯತ್ನದ ಭಾಗವಾಗಿದ್ದಾರೆ.
ಜನಾಗ್ರಹ ಆಂದೋಲನದ ಭಾಗವಾಗಿ ಇಂದು [ಮೇ 10ರಂದು] ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ 400 ಜನ ಗಣ್ಯರು ಹಾಗೂ ಸಮಾಜಿಕ ಕಾರ್ಯಕರ್ತರು ಸಹಿ ಮಾಡಿರುವ ತುರ್ತು ಪತ್ರವನ್ನು, ಆಂದೋಲನದ ಕಾರ್ಯಕರ್ತರಾದ ವರದರಾಜೇಂದ್ರ ಹಾಗೂ ರವಿ ಮೋಹನ್ ಅವರು ಕಾರ್ಯದರ್ಶಿಗಳ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸಿದ್ದಾರೆ.
ಪತ್ರದಲ್ಲಿ ಸರಕಾರ ಜನರ ಜೀವ ಮತ್ತು ಜೀವನ ಉಳಿಸಲು ಪಂಚ ತುರ್ತು ಕ್ರಮಗಳನ್ನು ಕೈಗೆತ್ತಿಕೊಳ್ಳಬೇಕೆಂದು ಆಗ್ರಹಿಸಲಾಗಿದೆ. ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತು ಆಕ್ಸಿಜನ್ ಸಹಿತ ಬೆಡ್ ಗಳ ಸಂಖ್ಯೆಯನ್ನು ಯುದ್ಧೋಪಾದಿಯಲ್ಲಿ ಹೆಚ್ಚಿಸುವುದು, ಎಲ್ಲಾ ವಯಸ್ಸಿನವರಿಗೂ ಉಚಿತ ವ್ಯಾಕ್ಸಿನ್ ನೀಡುವುದು, ಎಲ್ಲಾ ಕುಟುಂಬಗಳಿಗೂ ಉಚಿತವಾಗಿ ಸಮಗ್ರ ಪಡಿತರ ಕಿಟ್ ನೀಡುವುದು, ದುಡಿಮೆ ಕಳೆದುಕೊಂಡಿರುವ ಶ್ರಮಿಕ ಕುಟುಂಬಗಳಿಗೆ ಕನಿಷ್ಟ 5000 ರೂಗಳ ಮಾಸಿಕ ಆರ್ಥಿಕ ನೆರವನ್ನು ನೀಡುವುದು ಮತ್ತು ದುಡಿಯುವ ವ್ಯಕ್ತಿ ಮಡಿದ ಕುಟುಂಬಕ್ಕೆ 5ಲಕ್ಷ ಪರಿಹಾರ ಧನ ನೀಡುವುದನ್ನು ಸರ್ಕಾರ ತೆಗೆದುಕೊಳ್ಳಲೇಬೇಕಾದ ಕ್ರಮಗಳೆಂದು ಜನಾಗ್ರಹ ಆಂದೋಲನದ ವತಿಯಿಂದ ಒತ್ತಾಯಿಸಲಾಗಿದೆ.
ಈ ಯೋಜನೆಗಾಗಿ ಕಾರ್ಪೊರೇಟ್ ಕಂಪನಿಗಳ ವಹಿವಾಟಿನ ಮೇಲೆ ಶೇ. 2ರ ಕೊರೋನಾ ಸುಂಕವನ್ನು ಹಾಕುವ, ಕೋಟ್ಯಾಧಿಪತಿ ರಾಜಕಾರಣಿಗಳು ಹಾಗೂ ಉದ್ದಿಮೆಪತಿಗಳ ಆದಾಯದ ಮೇಲೆ ಶೇ. 5ರ ತೆರಿಗೆ ವಿಧಿಸುವ ಹಾಗೂ ಸೆಂಟ್ರಲ್ ವಿಸ್ಟಾದಂತಹ ದುಂದು ಯೋಜನೆಗಳನ್ನು ರದ್ದುಗೊಳಿಸಿ ಎಲ್ಲಾ ಹಣವನ್ನು ಕೋವಿಡ್ ನಿಭಾವಣೆಗೆ ತಿರುಗಿಸುವ ಸಲಹೆಗಳನ್ನು ಮುಂದಿಡಲಾಗಿದೆ.
ಇವು ಈಗಾಗಲೇ ನೆರೆ ರಾಜ್ಯಗಳಾದ ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ಸರಕಾರ ಗಳು ಜಾರಿ ಮಾಡಿರುವ ಕ್ರಮಗಳೇ ಆಗಿದ್ದು ಕರ್ನಾಟಕವೂ ಜನರ ಬದುಕನ್ನು ಉಳಿಸಲು ದಿಟ್ಟ ಕ್ರಮಗಳಿಗೆ ಮುಂದಾಗಲೇಬೇಕು ಎಂದು ಒತ್ತಾಯಿಸಲಾಗಿದೆ. ಕರ್ನಾಟಕದ ಹಿರಿಯರ ಹಾಗೂ ಸಾಮಾಜಿಕ ಕಾರ್ಯಕರ್ತರ ಈ ಆಗ್ರಹಕ್ಕೆ ಸರ್ಕಾರ ಸ್ಪಂದಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.













