ಸನ್ಮಾರ್ಗ ವಾರ್ತೆ
ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲಿನ ಹೆಣ್ಮಕ್ಕಳ ಶಾಲೆಯ ಮೇಲೆ ಬಾಂಬ್ ದಾಳಿ ನಡೆದಿದ್ದು ಮೃತ ಪಟ್ಟವರ ಸಂಖ್ಯೆ 85ಕ್ಕೇರಿಕೆಯಾಗಿದೆ. 195 ಮಂದಿ ಗಾಯಗೊಂಡಿದ್ದಾರೆ. ನಾಪತ್ತೆಯಾದ ಮಕ್ಕಳಿಗಾಗಿ ಈಗಲೂ ರಕ್ಷಣಾ ಕಾರ್ಯ ಮುಂದುವರಿಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿನ್ನೆ ಸಯ್ಯಿದುಲ್ ಶುಹದಾ ಶಾಲೆಯಿಂದ ಮಕ್ಕಳು ಹೊರ ಬರುತ್ತಿದ್ದ ವೇಳೆ ಸ್ಫೋಟ ಆಗಿದೆ. ಪ್ರವೇಶದ ದ್ವಾರದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿದ್ದ ಬಾಂಬು ಸ್ಫೋಟಗೊಂಡಿತ್ತು. ಶಾಲೆಯಲ್ಲಿ ಮೂರು ಶಿಫ್ಟ್ನಲ್ಲಿ ಮಕ್ಕಳು ಕಲಿಯುತ್ತಿದ್ದಾರೆ. ಇದರಲ್ಲಿ ಹೆಣ್ಣುಮಕ್ಕಳು ಕಲಿಯುವ ಸಮಯದಲ್ಲಿ ಬಾಂಬ್ ಸ್ಫೋಟಗೊಂಂಡಿದೆ.
ಹಝಾರ ಅಲ್ಪಸಂಖ್ಯಾತ ಸಮುದಾಯದ ಶಿಯಾ ವಿಭಾಗದವರು ಹೆಚ್ಚು ಇಲ್ಲಿ ವಾಸವಿದ್ದು ತಾಲಿಬಾನ್ ಈ ಕೆಲಸ ಮಾಡಿದೆ ಎಂದು ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಗನಿ ಆರೋಪಿಸಿದ್ದಾರೆ. ಆದರೆ ನಾವು ಈ ಕೃತ್ಯವೆಸಗಿಲ್ಲ ಎಂದು ತಾಲಿಬಾನ್ ವಕ್ತಾರ ಆರೋಪ ಅಲ್ಲಗಳೆದಿದ್ದಾರೆ ಮತ್ತು ಕೃತ್ಯವನ್ನು ಖಂಡಿಸಿದ್ದಾರೆ.












