ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ್ದ 100ಕ್ಕೂ ಹೆಚ್ಚು ಅಧಿಕಾರಿಗಳು ಕೊರೋನಕ್ಕೆ ಬಲಿ..!
ಸನ್ಮಾರ್ಗ ವಾರ್ತೆ
ಲಕ್ನೊ: ತಂದೆಯು ಐಸಿಯುನಲ್ಲಿದ್ದಾಗ ಅವರ ಫೋನ್ಗೆ ಕರೆ ಮಾಡಿ ಉನ್ನತ ಅಧಿಕಾರಿಗಳು ಚುನಾವಣಾ ಕರ್ತವ್ಯಕ್ಕೆ ಹಾಜರಾಗಲು ಹೇಳಿದರು. ಅವರು ಐಸಿಯುನಲ್ಲಿದ್ದಾರೆ ಎಂದು ಹೇಳಿದಾಗ ನೀವು ಸುಳ್ಳು ಹೇಳುತ್ತಿದ್ದೀರ. ಪೊಲೀಸರಿಗೆ ದೂರು ಕೊಡುತ್ತೇವೆ…ಇದು ಉತ್ತರ ಪ್ರದೇಶದಲ್ಲಿ ನಡೆದ ಈ ವಾಸ್ತವ ಘಟನೆಯನ್ನು ವಿವರಿಸಿದ್ದು ಸರಕಾರಿ ಶಾಲಾ ಪ್ರಿನ್ಸಿಪಾಲ್ ಆಗಿದ್ದ ಲಲನ್ ರಾಂ ಎಂಬವರ ಪುತ್ರ ಅನಿಕೇತ್.
ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಪಂಚಾಯತ್ ಚುನಾವಣೆಯ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳಲ್ಲಿ ಹಲವರಿಗೆ ಕೊರೋನ ದೃಢಪಟ್ಟಿದೆ. ಇದರಲ್ಲಿ ಹಲವರು ಮೃತಪಟ್ಟಿದ್ದಾರೆ. ಸರಕಾರಿ ಶಾಲಾ ಪ್ರಿನ್ಸಿಪಾಲ್ ಆಗಿದ್ದ ಲಲನ್ ರಾಂ(59), ಮೀನಾ ಕುಮಾರಿ(55) ದಂಪತಿಗಳು ಕೊನೆಯ ಕೊರೊನ ಬಲಿಪಶುಗಳು ಎಂದು ವರದಿ ತಿಳಿಸಿದೆ. ಇಬ್ಬರೂ ಚುನಾವಣಾ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು. ಉತ್ತರ ಪ್ರದೇಶ ಸರಕಾರವು ಒಂದು ಅಂಕಿ ಅಂಶ ಹೇಳಿದರೆ, ವಾಸ್ತವ ಚಿತ್ರಣವೇ ಬೇರೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದು, 100ಕ್ಕೂ ಹೆಚ್ಚು ಅಧಿಕಾರಿಗಳು ಕೊರೋನಕ್ಕೆ ಬಲಿಯಾಗಿರುವುದಾಗಿ ತಿಳಿದು ಬಂದಿದೆ. ಆದರೆ ಸರಕಾರದ ಲೆಕ್ಕದಲ್ಲಿರುವುದು ಮಾತ್ರ 77.
ವಯೋ ಸಹಜ ರೋಗದ ಕೆಲವು ಲಕ್ಷಣಗಳಿದ್ದರೂ ಅಪ್ಪ ಅಮ್ಮನನ್ನು ಚುನಾವಣೆಯ ಕರ್ತವ್ಯಕ್ಕೆ ತರಬೇತಿಗೆ ಕಳುಹಿಸಲಾಯಿತು.. ಈ ಶಿಬಿರದಲ್ಲಿ ಭಾಗವಹಿಸಿದ ಕೆಲವೇ ದಿನಗಳಲಿ ಜ್ವರ ಬಂದಿದೆ ಎಂದು ಶಿಕ್ಷಕ ದಂಪತಿಯ ಪುತ್ರ ಅನಿಕೇತ್ ಆರೋಪಿಸಿದ್ದಾರೆ. ಇದೇ ವೇಳೆ, ಅಸೌಖ್ಯ ಕಾರಣದಿಂದ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಸರಕಾರದ ನಷ್ಟ ಪರಿಹಾರ ಕೂಡ ಇವರಿಗೆ ಸಿಗಲಾರದೆಂದು ಅವರ ಕುಟುಂಬದಲ್ಲಿ ಆತಂಕವಿದೆ.
ಎಪ್ರಿಲ್ ಹನ್ನೊಂದಕ್ಕೆ ಸಿದ್ಧಾರ್ಥ ನಗರ ಜಿಲ್ಲಾ ಕೇಂದ್ರ ದಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಇವರು ಭಾಗವಹಿಸಿದ್ದರು. ಎಪ್ರಿಲ್ 26ಕ್ಕೆ ಇವರನ್ನು ಡೂಮರ್ ಗಂಜ್ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ತಂದೆ ಹೃದ್ರೋಗಿಯಾಗಿದ್ದು ಶಿಬಿರದಿಂದ ಮರಳಿದ ನಾಲ್ಕು ದಿನಗಳೊಳಗೆ ಕೊರೋನ ರೋಗ ಲಕ್ಷಣಗಳು ಕಂಡು ಬಂತು. ಆರಂಭದಲ್ಲಿ ದೊಡ್ಡ ಸಮಸ್ಯೆ ಇರಲಿಲ್ಲ. ಆದರೆ, ಎಪ್ರಿಲ್ 20ಕ್ಕೆ ಅನಾರೋಗ್ಯ ತೀವ್ರಗೊಂಡಿತು. ಆಂಟಿಜನ್ ಪರೀಕ್ಷೆ ನಡೆಸಲಾಯಿತು. ಇದರಲ್ಲಿ ನೆಗೆಟಿವ್ ಬಂತು. ಆಸ್ಪತ್ರೆಗೆ ದಾಖಲಾಗಲು ಅವರು ಒಪ್ಪಲಿಲ್ಲ. ಎಪ್ರಿಲ್ 22ಕ್ಕೆ ಆರ್ಟಿಪಿಸಿಆರ್ ಟೆಸ್ಟ್ ನಡೆಸಲಾಯಿತು. ಆದರೆ ಫಲಿತಾಂಶ ತಡವಾಗಿದ್ದರಿಂದ 80 ಕಿಲೋಮೀಟರ್ ದೂರದ ಗೋರಕ್ ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.
ಎಪ್ರಿಲ್ 25ಕ್ಕೆ ತಂದೆಯು ಐಸಿಯುನಲ್ಲಿದ್ದಾಗ ಅವರ ಫೋನ್ಗೆ ಕರೆ ಮಾಡಿ ಉನ್ನತ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಲು ಹೇಳಿದರು. ಅವರು ಐಸಿಯುನಲ್ಲಿದ್ದಾರೆ ಎಂದು ಹೇಳಿದಾಗ ನೀವು ಸುಳ್ಳು ಹೇಳುತ್ತಿದ್ದೀರ. ಪೊಲೀಸರಿಗೆ ದೂರು ಕೊಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಅನಿಕೇತ್ ಆರೋಪಿಸಿದರು.
ಕಿಡ್ನಿ ರೋಗಿಯಾದ ಮೀನಾ ಕುಮಾರಿಯವರಿಗೆ ರೋಗ ಲಕ್ಷಣ ಕಂಡು ಬಂದಾಗ ಸಿದ್ಧಾರ್ಥ ನಗರದ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಅಲ್ಲಿ ಸರಿಯಾದ ವ್ಯವಸ್ಥೆ ಚಿಕಿತ್ಸೆ ಎರಡೂ ಇರಲಿಲ್ಲ. ನಂತರ ಅವರು ಮೃತಪಟ್ಟರು ಎಂದು ಮಕ್ಕಳು ಹೇಳಿದರು. ಚುನಾವಣಾ ತರಬೇತಿ ಶಿಬಿರದಲ್ಲಿ ಸಾಮಾಜಿಕ ಅಂತರ ಪಾಲಿಸಲಿಲ್ಲ. ದೇಹದ ಉಷ್ಣಾಂಶವನ್ನು ಪರೀಕ್ಷಿಸಿ ನೋಡಿಲ್ಲ. ಕೆಲವು ಮಂದಿ ಮಾತ್ರ ಮಾಸ್ಕ್ ಹಾಕಿಕೊಂಡಿದ್ದರು ಎಂದು ತಂದೆ ಮತ್ತು ತಾಯಿ ಹೇಳಿದ್ದಾರೆ ಎಂದು ಮಕ್ಕಳು ಹೇಳಿದ್ದಾರೆ.
ಇವರ ಹಿರಿಯ ಪುತ್ರಿ ಪ್ರೀತಿ ಸ್ಕೂಲ್ ಅಧ್ಯಾಪಕಿಯಾಗಿದ್ದಾರೆ. ಅವರನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸಲಾಯಿತು. ಈ ಸಮಯದಲ್ಲಿ ಪಂಚಾಯತ್ ಚುನಾವಣೆಯು ಬೇಕಿತ್ತಾ ಎಂದು ಅವರು ಪ್ರಶ್ನಿಸಿದ್ದಾರೆ. ತನ್ನನ್ನು ನೇಮಿಸಿದ ಟಿಕೊನಿಯ ಗ್ರಾಮದಲ್ಲಿ ಜ್ವರದಿಂದ ಬ್ಯಾಲೆಟ್ ಪೇಪರ್ ಗೆ ಸೀಲು ಹಾಕಲು ಕೂಡ ಆಗದ ದುರ್ಬಲರಾದ ಜನರು ಇದ್ದರು. ಅವರಿಗೆ ನಾವು ನೆರವು ನೀಡಬೇಕಾಗಿ ಬಂತು. ಚುನಾವಣೆಯ ನಂತರ ನನಗೂ ರೋಗ ಲಕ್ಷಣಗಳು ಕಂಡು ಬಂದವು. ನಂತರ ಮದ್ದು ಕುಡಿದೆ ಎಂದು ಪ್ರೀತಿ ಹೇಳಿದ್ದಾರೆ.
ಚುನಾವಣಾ ಕರ್ತವ್ಯದಲ್ಲಿ ಕೊರೋನ ಬಂದು ಮೃತಪಟ್ಟ ಕುಟುಂಬಕ್ಕೆ ಒಂದು ಕೋಟಿ ರೂ. ನಷ್ಟ ಪರಿಹಾರ ನೀಡಲು ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರಕಾರಕ್ಕೆ ಹೇಳಿದೆ. ಆರ್ ಟಿ ಪಿಸಿಆರ್ ಪರೀಕ್ಷೆ ನಡೆಸದೆ ಸರಿಯಾದ ಮುನ್ನೆಚ್ಚರಿಕೆ ಪಾಲಿಸದೆ ಅಧಿಕಾರಿಗಳನ್ನು ನೇಮಿಸಿದ ಸರಕಾರವನ್ನು ಚುನಾವಣಾ ಆಯೋಗವನ್ನು ಹೈಕೋರ್ಟ್ ತರಾಟೆಗೆತ್ತಿಕೊಂಡಿದೆ .ಇದುವರೆಗೆ ಲಭ್ಯವಾದ ಲೆಕ್ಕದಂತೆ 28 ಜಿಲ್ಲೆಗಳ 77 ಪೊಲಿಂಗ್ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂದು ಚುನಾವಣಾ ಕಮಿಶನರ್ ತರುಣ್ ಅಗರ್ವಾಲ್ ಕೋರ್ಟಿಗೆ ತಿಳಿಸಿದ್ದಾರೆ. ಆದರೆ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಅಧ್ಯಾಪಕರ ಸಂಘಟನೆ ಹೇಳುತ್ತಿದೆ.












