ಗಾಝದಲ್ಲಿ ಮತ್ತೆ ದಾಳಿ ಮುಂದುವರಿಸಿದ ಇಸ್ರೇಲ್: 31 ಮಕ್ಕಳ ಸಹಿತ 100ಕ್ಕೂ ಹೆಚ್ಚು ಜನರ ಸಾವು

0
1492

ಸನ್ಮಾರ್ಗ ವಾರ್ತೆ

ಜೆರುಸಲೇಂ: ಗಾಝದಲ್ಲಿ ಇಸ್ರೇಲಿನ ನರಬೇಟೆ ಮುಂದುವರಿದಿದ್ದು ಸೇನೆಯ ಮಹಾ ಕ್ರೌರ್ಯ ಮುಂದುವರಿಯುತ್ತಿದೆ. ವಾಯು ದಾಳಿಯ ಜೊತೆಗೆ ಭೂಸೇನೆಯಿಂದ ಕೂಡ ಸೈನಿಕ ದಾಳಿ ಮುಂದುವರಿದಿದೆ. ಈವರೆಗೆ 113 ಮಂದಿ ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ. ಇವರಲ್ಲಿ 31 ಮಕ್ಕಳು ಮತ್ತು 16 ಮಹಿಳೆಯರೂ ಸೇರಿದ್ದಾರೆ. 621 ಮಂದಿ ಗಾಯಗೊಂಡಿದ್ದಾರೆ.

ಪೂರ್ವ ಜೆರುಸಲೇಂನಲ್ಲಿ ಫೆಲಸ್ತೀನಿ ನಿವಾಸಿಗಳನ್ನು ಒಕ್ಕಲೆಬ್ಬಿಸಿ ಅಲ್ಲಿ ಯಹೂದಿಯರಿಗೆ ವಸತಿ ನಿರ್ಮಿಸುವ ಇಸ್ರೇಲಿನ ಯೋಜನೆಯನ್ನು ವಿರೋಧಿಸಿ ಫೆಲಸ್ತೀನಿಯರು ಪ್ರತಿಭಟನೆ ನಡೆಸುತ್ತಿದ್ದು ಇದನ್ನು ಉಪಯೋಗಿಸಿ ಇಸ್ರೇಲ್ ಸೇನಾ ಕಾರ್ಯಾಚರಣೆ ನಡೆಸುತ್ತಿದೆ. ಮಸ್ಚಿದುಲ್ ಅಕ್ಸಾದಲ್ಲಿ ಸೇರಿದ ಪ್ರತಿಭಟನಾಕಾರರ ಮೇಲೆ ಪೊಲೀಸರು ದಾಳಿ ಮಾಡಿದರು.

ರಮಝಾನ್‍ನ ಲೈಲತುಲ್ ಕದ್ರ್ ರಾತ್ರಿಯ ನಮಾಝ್ ನಿರ್ವಹಿಸುವಾಗ ಮಸೀದಿಯೊಳಗೆ ನುಗ್ಗಿ ಇಸ್ರೇಲಿ ಸೈನಿಕರು ದಾಂಧಲೆ ನಡೆಸಿದ್ದರು. ಇದನ್ನು ನಿಲ್ಲಿಸಬೇಕೆಂದು ಗಾಝದಲ್ಲಿ ಅಧಿಕಾರದಲ್ಲಿರುವ ಹಮಾಸ್ ರಂಗ ಪ್ರವೇಶಿಸಿತ್ತು. ನಂತರ ಗಾಝದ ಮೇಲೆ ಭಯಾನಕ ಬಾಂಬು ದಾಳಿಯನ್ನು ಆರಂಭಿಸಿದ್ದು ಈಗಲೂ ಮುಂದುವರಿಸುತ್ತಿದೆ. ದಾಳಿ ಇನ್ನಷ್ಟು ತೀವ್ರಗೊಳಿಸುವುದಾಗಿ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಗಾಝದಲ್ಲಿ ಶುಕ್ರವಾರ ದಾಳಿ ಮುಂದುವರಿಯುತ್ತಿದೆ. ಟ್ಯಾಂಕ್‍ಗಳು ಗಡಿಯಲ್ಲಿ ಬಂದು ನಿಂತಿದೆ. ಯಾವ ಕ್ಷಣದಲ್ಲಿಯೂ ಭೂಸೇನೆ ಕೂಡ ಯುದ್ಧ ಆರಂಭಿಸಬಹುದೆಂಬ ಸೂಚನೆ ಲಭ್ಯವಾಗಿದೆ. ಗಾಝದಲ್ಲಿ 20 ಲಕ್ಷ ಫೆಲಸ್ತೀನಿಯರು ವಾಸವಿದ್ದು ಅವರು ವಾಸ್ತವ್ಯದ ಎಲ್ಲ ಕಡೆ ಇಸ್ರೇಲ್ ದಾಳಿ ನಡೆಸುತ್ತಿದೆ. ಗುರುವಾರ ಗಾಝದಲ್ಲಿ ನಡೆದ ದಾಳಿಯಲ್ಲಿ ಮೃತಪಟ್ಟಿರುವ ಮಹಿಳೆಯರು ಮತ್ತು ಮೂವರು ಮಕ್ಕಳ ಮೃತದೇಹ ಪತ್ತೆಯಾಗಿದೆ ಎಂದು ಅಲ್‍ಜಝೀರ ವರದಿ ಮಾಡಿದೆ. ಇದರೊಂದಿಗೆ ನೂರಾರು ಕುಟುಂಬಗಳು ದಾಳಿಯಿಂದಾಗಿ ಎಲ್ಲವನ್ನೂ ಕಳಕೊಂಡು ಬೀದಿಗೆ ಬಂದಿವೆ.

ರಮಝಾನ್ ಉಪವಾಸ ಕಳೆದು ಈದುಲ್ ಫಿತ್ರ್ ಹಬ್ಬವನ್ನು ಎದುರು ನೋಡುತ್ತಿದ್ದ ಸಂದರ್ಭದಲ್ಲಿ ಇಸ್ರೇಲ್ ಭಾರೀ ಬಾಂಬು ಸುರಿದಿದೆ. ಸೈನಿಕರ ಜೊತೆ ಉಗ್ರವಾದಿ ಯಹೂದಿ ಗುಂಪು ಸೇರಿಕೊಂಡಿದೆ ಎಂದು ವರದಿಯಾಗಿದೆ. ಜೆರುಸಲೇಂ ಸಹಿತ ಅರಬರು ಮತ್ತು ಇಸ್ರೇಲಿಗರು ಜೊತೆಗೂಡಿ ವಾಸಿಸುವ ಪ್ರದೇಶಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಫೆಲಸ್ತೀನಿಯರ ಮೇಲೆ ಆಕ್ರಮಣ ನಡೆಸಲು ಕರೆ ನೀಡಲಾಗಿದ್ದು ನಂತರ ಫೆಲಸ್ತೀನಿಯರ ಮೇಲೆ ಸಂಘಟಿತ ದಾಳಿ ನಡೆಯುತ್ತಿದೆ.

ಇದೇವೇಳೆ ಗಾಝಾದಿಂದ ಹಮಾಸ್ ರಾಕೆಟ್ ದಾಳಿಯನ್ನು ಮುಂದುವರಿಸಿದೆ. ಇದುವರೆಗೆ ಏಳು ಮಂದಿ ಇಸ್ರೇಲಿಗರು ರಾಕೆಟ್ ದಾಳಿಯಿಂದ ಮೃತಪಟ್ಟಿದ್ದಾರೆ. ಲೆಬನಾನಿಂದಲೂ ಇಸ್ರೇಲ್ ಮೇಲೆ ರಾಕೆಟ್ ದಾಳಿ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ರವಿವಾರ ಈ ವಿಷಯದಲ್ಲಿ ಚರ್ಚೆ ನಡೆಸಲು ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆ ಕರೆದಿದೆ.