ಸನ್ಮಾರ್ಗ ವಾರ್ತೆ
ಲಕ್ನೊ: ಕೊರೋನ ಎರಡನೇ ಅಲೆಯು ದೇಶದಲ್ಲಿ ಅತ್ಯಂತ ಹೆಚ್ಚು ಬಾಧಿಸಿದ ರಾಜ್ಯಗಳಲ್ಲಿ ಉತ್ತರ ಪ್ರದೇಶ ಕೂಡ ಒಂದಾಗಿದ್ದು ಆಸ್ಪತ್ರೆಯಲ್ಲಿ ಕೊರೋನದಿಂದ ಮೃತಪಟ್ಟಿರುವವರ ಸರಿಯಾದ ಲೆಕ್ಕಗಳು ಬಚ್ಚಿಡಲಾಗುತ್ತಿದೆ ಎಂಬ ಆಕ್ಷೇಪ ಕೇಳಿ ಬರುತ್ತಿದೆ. ಆದರೆ ಕೆಲವು ಗ್ರಾಮಗಳಲ್ಲಿರುವ ಆಚಾರಗಳು ಕೊರೋನ ಸಾವಿನ ಸಂಖ್ಯೆಯನ್ನು ಬಹಿರಂಗಪಡಿಸುತ್ತಿದೆ.
ಆರ್ಥಿಕವಾಗಿ ಹಿಂದುಳಿದ ಬುಂದೇಲ್ಖಂಡದ ಬಾಂದಾದಂತಹ ಜಿಲ್ಲೆಗಳಲ್ಲಿ ಮೃತರ ಸ್ಮರಣಾರ್ಥ ಬೋಧಿವೃಕ್ಷದಲ್ಲಿ ಮಣ್ಣಿನ ಮಡಕೆಯನ್ನು ತೂಗು ಹಾಕಲಾಗುತ್ತದೆ. ಸಂಸ್ಕಾರ ವಿಧಿ ವಿಧಾನ ಮುಗಿದ ಬಳಿಕ ಹೀಗೆ ಅಲ್ಲಿನ ನಿವಾಸಿಗಳು ಮಾಡುತ್ತಾರೆ. ಆ ಮಡಿಕೆಯಲ್ಲಿ ಸ್ವಲ್ಪ ನೀರು ಹಾಕಿ ಕೆಳಗೆ ಬತ್ತಿ ಹೊತ್ತಿಸಿಡುತ್ತಾರೆ. ಹನ್ನೆರಡು ದಿವಸಗಳ ಕಾಲ ಹೀಗೆ ಮಾಡುತ್ತಾರೆ. ಅಂತ್ಯ ಕರ್ಮ ಮುಗಿದ ಬಳಿಕ 13ನೇ ದಿನಕ್ಕೆ ಮಡಕೆ ಒಡೆಯುತ್ತಾರೆ.
ಈ ಹಿಂದೆ ಒಂದೆರಡು ಮಡಿಕೆಗಳಿರುತ್ತಿದ್ದವು. ಈಗ ಬೋಧಿ ವೃಕ್ಷದ ತುಂಬಾ ಮಡಕೆಗಳು ತುಂಬಿಕೊಂಡಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಜೀವನದಲ್ಲಿ ಇದೇ ಮೊದಲ ಬಾರಿ ಇಂತಹ ಅನುಭವವಾಗುತ್ತಿದೆ ಎಂದು ಮುನ್ನ ತಿವಾರಿ ಎಂಬವರನ್ನು ಉದ್ದರಿಸಿ ದಿ ಪ್ರಿಂಟ್ ವರದಿ ಮಾಡಿದೆ.
ಉತ್ತರ ಪ್ರದೇಶದ ಗ್ರಾಮಗಳಲ್ಲಿ ಮೃತಪಟ್ಟವರ ಸಂಖ್ಯೆ ಅಧಿಕೃತವಾಗಿ 200ಕ್ಕೂ ಕಡಿಮೆ ಎಂದು ತೋರಿಸಲಾಗುತ್ತಿದೆ. ಸರಿಯಾದ ಲೆಕ್ಕ ಮಾತ್ರ ಭಯಾನಕವಾಗಿ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಮೊದಲ ಬಾರಿಯ ಕೊರೋನ ಅಲೆಯಲ್ಲಿ ಇಂತಹ ಭಯಾನಕ ಪರಿಸ್ಥಿತಿ ಇರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ಎರಡನೇ ಅಲೆಯಲ್ಲಿ ಹಲವಾರು ಸಾವು ನೋವುಗಳು ಸಂಭವಿಸಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಆರೋಗ್ಯವಂತರಾಗಿ ಲವಲವಿಕೆಯಿಂದ ಇರುತ್ತಿದ್ದ ಯುವಕರೇ ಹೆಚ್ಚು ಕೊರೊನಕ್ಕೆ ಬಲಿಯಾಗುತ್ತಿದ್ದಾರೆ. ಇದು ಈ ಗ್ರಾಮವನ್ನೇ ದುಃಖದ ಮಡುವಿನಲ್ಲಿ ಕೆಡವಿದೆ. 30 ವರ್ಷದಿಂದ 50 ವರ್ಷದ ಒಳಗಿನವರು ಹೆಚ್ಚು ಮೃತಪಟ್ಟಿದ್ದಾರೆ. ರೋಗ ಬಾಧಿಸಿದ ಕೆಲವೇ ದಿನಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ ಪಂಚಾಯತ್ ಚುನಾವಣೆಯ ನಂತರ ಗ್ರಾಮದಲ್ಲಿಯೂ ಕೊರೋನ ವೈರಸ್ ಹರಡಿದೆ ಎಂಬ ಆಕ್ಷೇಪ ಎಲ್ಲ ಕಡೆಯಿಂದ ಕೇಳಿ ಬರುತ್ತಿದೆ.












