ಸನ್ಮಾರ್ಗ ವಾರ್ತೆ
ಲಕ್ನೊ: ಕಾರು ಖರೀದಿಸುವ ಸಲುವಾಗಿ ವ್ಯಾಪಾರಿಯೋರ್ವನಿಗೆ ಎಳೆಗೂಸನ್ನು ದಂಪತಿಗಳು ಮಾರಾಟ ಮಾಡಿದ ಘಟನೆ ಉತ್ತರ ಪ್ರದೇಶದ ಕನೌಜ್ ಜಿಲ್ಲೆಯಲ್ಲಿ ನಡೆದಿದೆ. ಒಂದು ಸೆಕೆಂಡ್ ಹ್ಯಾಂಡ್ ಖರೀದಿಸಲು ತಮ್ಮ ನವಜಾತ ಶಿಶುವನ್ನು ಒಂದೂವರೆ ಲಕ್ಷ ರೂಪಾಯಿಗೆ ಮಾರಿದ್ದಾರೆ. ಮಗುವಿನ ಅಜ್ಜ ಕೊತ್ವಾಲಿ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಬೆಚ್ಚಿ ಬೀಳುವಂತಹ ಘಟನೆ ಬಹಿರಂಗಕ್ಕೆ ಬಂದಿದೆ.
ಮಾರಲ್ಪಟ್ಟ ಈ ಮಗುವಿಗೆ ಕೇವಲ ಮೂರು ತಿಂಗಳಷ್ಟೇ ಆಗಿತ್ತು. ಈ ಮಗುವನ್ನು ಮಾರಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಗುರ್ಸಹಾಯ್ ಗಂಜ್ನ ವ್ಯಾಪಾರಿಯೊಬ್ಬರಿಗೆ ಮಗುವನ್ನು ಮಾರಲಾಗಿದ್ದು, ಈ ಹಣದಿಂದ ಕಾರನ್ನು ಖರೀದಿಸಲು ಹೀಗೆ ಮಾಡಿರುವುದಾಗಿ ಪೊಲೀಸ್ ವಿಚಾರಣೆ ವೇಳೆ ದಂಪತಿ ತಪ್ಪೊಪ್ಪಿಕೊಂಡಿದ್ದಾರೆ. ಈಗಲೂ ಮಗು ವ್ಯಾಪಾರಿ ಬಳಿಯಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಶೈಲೇಂದ್ರ ಕುಮಾರ್ ಮಿಶ್ರ ತಿಳಿಸಿದ್ದಾರೆ. ದಂಪತಿ ಒಂದು ಸೆಕೆಂಡ್ ಕಾರನ್ನು ಖರೀದಿಸಿದ್ದಾರೆ ಎಂದು ಅವರು ಹೇಳಿದರು. ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದವರು ತಿಳಿಸಿದ್ದಾರೆ.












