ಸನ್ಮಾರ್ಗ ವಾರ್ತೆ
ಮೂಡಬಿದ್ರೆ: ಕೊರೋನ ಸಂದರ್ಭದಲ್ಲೂ ತಮ್ಮ ಜಾತಿ, ಧರ್ಮ, ಮತ ಭೇದ ಬಿಟ್ಟು ಮಾನವಕುಲ ಒಂದೇ ಎಂದು ಭಾವಿಸಿ ಆಹಾರವಿಲ್ಲದೆ ಬದುಕು ದೂಡುತ್ತಿರುವ ನಿರ್ಗತಿಕರ ಹೊಟ್ಟೆ ತುಂಬಿಸುವ ಕೆಲಸವನ್ನು ಮೂಡಬಿದ್ರೆಯ ಅಲ್ ಅಮೀನ್ ಹೆಲ್ಪ್ ಲೈನ್ ತಂಡದವರು ಕಳೆದ 22 ದಿನಗಳಿಂದ ದಿನನಿತ್ಯ ಮಾಡುತ್ತಿರುವುದು ಮಾನವೀಯ ಮೌಲ್ಯಕ್ಕೆ ಸಾಕ್ಷಿಯಾಗಿದೆ.
ಬಡವರ ಕಷ್ಟದ ಬಗ್ಗೆ ಅರಿತ ಕೆಲವರು ತಾವು ತಿನ್ನುವ ಅನ್ನವನ್ನು ಇತರರಿಗೂ ಹಂಚಿ ತಮ್ಮ ದೊಡ್ಡತನವನ್ನು ತೋರಿಸುತ್ತಾರೆ.
ಮೂಡಬಿದ್ರೆಯಲ್ಲಿ 2015 ರಲ್ಲಿ ಸ್ಥಾಪಿತವಾದ ಬಡ ಹೆಣ್ಣು ಮಕ್ಕಳ ಮದುವೆ ಹಾಗೂ ತೀರ ಬಡವರಿಗೆ ಚಿಕಿತ್ಸೆ ವೆಚ್ಚಗಳನ್ನು ಕೊಡುತ್ತಾ ಸಾಮಾಜಿಕ ಕೆಲಸ ಮಾಡುತ್ತಿದ್ದ ಅಲ್ ಅಮೀನ್ ಹೆಲ್ಪ್ ಲೈನ್ ತಂಡದ ಸದಸ್ಯರುಗಳು ಇಂದು ಈ ಸಂಕಷ್ಟದ ಕಾಲದಲ್ಲಿ ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಇವರು ಕಳೆದ 22 ದಿನಗಳಿಂದ ದಿನನಿತ್ಯ ನಿರಾಶ್ರಿತರು ಮತ್ತು ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗಳಿಗೆ, ಪೌರ ಕಾರ್ಮಿಕರಿಗೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ, ದೂರದ ಊರಂದ ಬರುವ ವಾಹನ ಚಾಲಕರಿಗೆ ಉಚಿತ ಆಹಾರ ವಿತರಿಸುತ್ತಿದ್ದಾರೆ. ಪ್ರತಿದಿನ ಸುಮಾರು 250 ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಇದರ ಜೊತೆಗೆ ಮಾಸ್ಕ್ ವಿತರಣೆಯನ್ನು ಕೂಡ ಮಾಡುತ್ತಿದ್ದಾರೆ.
ಕೊರೋನ ಅಟ್ಟಹಾಸದಿಂದ ಜನಜೀವನ ಅತಂತ್ರಗೊಂಡಿದೆ. ಕುಡಿಯಲು ನೀರು ಆಹಾರವಿಲ್ಲದೇ ನಿರ್ಗತಿಕರ ಬದುಕು ಅಯೋಮಯವಾಗಿದೆ. ಇಂತಹ ಸಂದರ್ಭದಲ್ಲಿ ಅಲ್ ಅಮೀನ್ ಹೆಲ್ಪ್ ಲೈನ್ ತಂಡದ ಸದಸ್ಯರು ಮಾಡುತ್ತಿರುವ ಈ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಡಾ. ಮೋಹನ್ ಆಳ್ವಾ ರವರು ಇವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೂಡಬಿದ್ರೆಯ ಆಸು ಪಾಸಿನಲ್ಲಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಮತ್ತು ನಿರಾಶ್ರಿತರಿಗೆ ಮಧ್ಯಾಹ್ನದ ಊಟದ ಅವಶ್ಯಕತೆ ಇದ್ದರೆ ಬೆಳಿಗ್ಗೆ 11 ಘಂಟೆಯ ಒಳಗಾಗಿ ಅಲ್ ಅಮೀನ್ ಹೆಲ್ಪ್ ಲೈನ್ ತಂಡದ ಈ ಕೆಳಗಿನ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.
ನಿಫಾಲ್ ಬೆದ್ರ 91480 30296,
ವಸೀರ್ ಪುತ್ತಿಗೆ 70197 61318
ಅಬ್ದುಸ್ಸಮದ್ ಅಲ್ ಝೈನ್ 97431 25241















