ಸನ್ಮಾರ್ಗ ವಾರ್ತೆ
ಹೆಲ್ಸಿಂಕಿ: ತೆರಿಗೆದಾರರ ಹಣವನ್ನು ಬಳಸಿಕೊಂಡು ಪ್ರಧಾನ ಮಂತ್ರಿಯವರು ಬೆಳಗ್ಗಿನ ಉಪಾಹಾರದ ಅಕ್ರಮ ಬಿಲ್ ನೀಡಿ ಹಣ ಪಡೆದಿದ್ದಾರೆಯೇ ಎಂದು ತನಿಖೆ ನಡೆಸುತ್ತೇವೆ ಎಂದು ಫಿನ್ಲ್ಯಾಂಡ್ ಪೊಲೀಸರು ಪ್ರಕಟಿಸಿದ್ದಾರೆ.
ಫಿನ್ ಲ್ಯಾಂಡ್ ಪ್ರಧಾನ ಮಂತ್ರಿ ಸನ್ನಾ ಮರಿನ್ ಅವರು ತನ್ನ ಅಧಿಕೃತ ನಿವಾಸವಾದ ಕೇಸರಂತಾದಲ್ಲಿ ವಾಸವಾಗಿದ್ದಾಗ ತನ್ನ ಕುಟುಂಬದ ಬ್ರೇಕ್ಫಾಸ್ಟ್(ಬೆಳಗ್ಗಿನ ತಿಂಡಿ) ಗಳಿಗಾಗಿ ತಿಂಗಳಿಗೆ ಸುಮಾರು 300 ಯುರೋಗಳಷ್ಟು (365 ಡಾಲರ್ ) ವಸೂಲಿ ಮಾಡುತ್ತಿರುವುದಾಗಿ ಇಲ್ಟಾಲೆಹ್ತಿ ಎಂಬ ಟ್ಯಾಬ್ಲಾಯ್ಡ್ ಪತ್ರಿಕೆಯು ವರದಿ ಮಾಡಿತ್ತು. ಪ್ರಧಾನಿಯವರು ಅಕ್ರಮ ಬಿಲ್ ನೀಡಿ ಹಣ ಪಡೆದಿದ್ದಾರೆ ಎಂದು ಪತ್ರಿಕೆ ಆರೋಪ ಮಾಡಿದೆ. ಈ ಹಿನ್ನೆಲೆಯಲ್ಲಿ ತೆರಿಗೆದಾರರ ಹಣವನ್ನು ದುರ್ಬಳಕೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಫಿನ್ಲ್ಯಾಂಡ್ ಪೊಲೀಸರು ಹೇಳಿದ್ದಾರೆ.
“ಪ್ರಧಾನಿಯಾಗಿ ನಾನು ಈ ಪ್ರಯೋಜನವನ್ನು ಕೇಳಿಲ್ಲ ಅಥವಾ ಅದನ್ನು ನಿರ್ಧರಿಸುವಲ್ಲಿ ನಾನು ಭಾಗಿಯಾಗಿಲ್ಲ. ತನಿಖೆಯನ್ನು ಸ್ವಾಗತಿಸುತ್ತೇನೆ. ಪೊಲೀಸರು ಅದನ್ನು ಪರಿಶೀಲಿಸುವಾಗ ಉಪಹಾರದ ಬಿಲ್ ನ ಪ್ರಯೋಜನವನ್ನು ಪಡೆಯುವುದನ್ನು ನಿಲ್ಲಿಸುತ್ತೇನೆ ಎಂದು ಪ್ರಧಾನ ಮಂತ್ರಿ ಮರಿನ್ ತನ್ನ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ತನಿಖೆಯಲ್ಲಿ ಪ್ರಧಾನ ಮಂತ್ರಿ ಕಚೇರಿಯೊಳಗಿನ ಅಧಿಕಾರಿಗಳ ನಿರ್ಧಾರಗಳ ಮೇಲೆ ಗಮನ ಹರಿಸಲಾಗುವುದು ಮತ್ತು ಯಾವುದೇ ರೀತಿಯಲ್ಲಿ ಪ್ರಧಾನಿ ಅಥವಾ ಅವರ ಅಧಿಕೃತ ಚಟುವಟಿಕೆಗಳಿಗೆ ಸಂಬಂಧಿಸಿಲ್ಲ” ಎಂದು ಹೇಳಿಕೆಯಲ್ಲಿ ಪೊಲೀಸ್ ಅಧಿಕಾರಿ ಟೀಮು ಜೋಕಿನೆನ್ ಹೇಳಿದ್ದಾರೆ.
ಸೋಷಿಯಲ್ ಡೆಮೋಕ್ರಾಟ್ ಪಕ್ಷದ ಪ್ರತಿನಿಧಿಯಾಗಿರುವ ಸನ್ನಾ ಮರಿನ್, 2019 ರ ಡಿಸೆಂಬರ್ನಲ್ಲಿ ಫಿನ್ ಲ್ಯಾಂಡ್ ನಲ್ಲಿ ಅಧಿಕಾರಕ್ಕೆ ಬಂದಿದ್ದಾರೆ.












