ಕಾಸರಗೋಡು ಜಿಲ್ಲೆಯ ಕೋವಿಡ್ ಕ್ರಮಗಳ ಕುರಿತಾಗಿ ವಾರದೊಳಗೆ ವಿವರಣೆ ಕೊಡಿ: ಕೇರಳ ಹೈಕೋರ್ಟ್

0
453

ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಫ್ರೆಟರ್ನಿಟಿ ಮೂಮೆಂಟ್

ಸನ್ಮಾರ್ಗ ವಾರ್ತೆ

ಕಾಸರಗೋಡು: ಕೋವಿಡ್ ರೋಗಿಗಳಿಗೆ ಅಗತ್ಯವಿರುವ ಚಿಕಿತ್ಸೆಯ ಕೊರತೆ, ವೆಂಟಿಲೇಟರ್ ಅಭಾವ, ವೈದ್ಯರ ಹಾಗೂ ಆರೋಗ್ಯ ಕಾರ್ಯಕರ್ತರ ಕೊರತೆ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ಕಾಸರಗೋಡು ಜಿಲ್ಲೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೇರಳ ಹೈಕೋರ್ಟ್ ನ ಮೆಟ್ಟಿಲೇರಿದ್ದ ಫ್ರೆಟರ್ನಿಟಿ ಮೂಮೆಂಟ್ ನ ಅರ್ಜಿಯನ್ನು ಪರಿಗಣಿಸಿರುವ ನ್ಯಾಯಾಲಯವು, ಕಾಸರಗೋಡು ಜಿಲ್ಲೆಯ ಕೋವಿಡ್ ರಕ್ಷಣೆಯ ಕುರಿತಾಗಿ ವಾರದೊಳಗೆ ವಿವರಣೆ ಕೊಡಬೇಕು ಎಂದು ಸರಕಾರಕ್ಕೆ ಸೂಚನೆ ನೀಡಿದೆ.

ಜಸ್ಟಿಸ್ ವಿನೋದ್ ಚಂದ್ರನ್ ಅಧ್ಯಕ್ಷರಾಗಿರುವ ಪೀಠವು ಈ ದಾವೆಯನ್ನು ತನಿಖೆ ನಡೆಸಿದ್ದು, ಸರಕಾರದೊಂದಿಗೆ ಲಿಖಿತ ರೂಪದಲ್ಲಿ ಒಂದು ವಾರದೊಳಗೆ ವಿವರಣೆ ನೀಡಬೇಕೆಂದು ನ್ಯಾಯಾಲಯವು ನಿರ್ದೇಶಿಸಿದೆ. ದಾವೆಯನ್ನು ಮುಂದಿನ ವಾರ ಪುನಃ ವಿಚಾರಣೆ ನಡೆಸಲಾಗುವುದು. ಕೋವಿಡ್ ಸಂಬಂಧವಾಗಿ ಕಾಸರಗೋಡು ಜಿಲ್ಲೆಯಲ್ಲಿ ಏನೆಲ್ಲಾ ಕ್ರಮ ಕೈಗೊಂಡಿದ್ದೀರಿ ಎಂದು ಕೇರಳ ಹೈಕೋರ್ಟ್ ಪ್ರಶ್ನಿಸಿದೆ.

ಫ್ರೆಟರ್ನಿಟಿ ಮೂಮೆಂಟ್ ಸಂಘಟನೆಯ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ರಾಶಿದ್ ಮುಹ್ಯುದ್ದೀನ್ ರವರು ಈ ಸಂಬಂಧ ನ್ಯಾಯಾಲಯದ ಮೆಟ್ಟಲೇರಿದ್ದರು. ಹೈಕೋರ್ಟ್ ನ ಸೂಚನೆಯನ್ನು ಫ್ರೆಟರ್ನಿಟಿ ಮೂಮೆಂಟ್ ಸ್ವಾಗತಿಸಿದೆ.