ಸನ್ಮಾರ್ಗ ವಾರ್ತೆ
ನವದೆಹಲಿ: ದೇಶದ ರಾಜಧಾನಿ ದೆಹಲಿಯ ಜನತೆಗೆ ಸಿಎಂ ಅರವಿಂದ್ ಕೇಜ್ರಿವಾಲ್ ಶುಭ ಸುದ್ದಿ ನೀಡಿದ್ದು, ಅನ್ಲಾಕ್ ಪ್ರಕ್ರಿಯೆ ಆರಂಭಿಸಿದ್ದಾರೆ. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆ ಕೆಲವೊಂದು ವಲಯಗಳ ಪುನಾರಾರಂಭಕ್ಕೆ ಷರತ್ತುಬದ್ಧ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ದೆಹಲಿಯಲ್ಲಿ ಕೋವಿಡ್ -19 ಸಕಾರಾತ್ಮಕ ದರವು ಶೇಕಡಾ 2 ಕ್ಕಿಂತ ಕಡಿಮೆಯಾಗುತ್ತಿರುವುದರಿಂದ, ಅನ್ಲಾಕ್ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸರ್ಕಾರ ನಿರ್ಧರಿಸಿದೆ. ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರನ್ನು ಭೇಟಿಯಾದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಮೇ 31 ರಿಂದ ವ್ಯವಹಾರಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು. ಸೋಮವಾರದಿಂದ ಒಂದು ವಾರದವರೆಗೆ ನಗರದಲ್ಲಿ ಕಾರ್ಖಾನೆಗಳು ಮತ್ತು ನಿರ್ಮಾಣ ಚಟುವಟಿಕೆಗಳಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ದೊಡ್ಡ ಪರಿಶ್ರಮದಿಂದಾಗಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿದ್ದು, ಆದರೆ ಹೋರಾಟದ ಪೂರ್ಣ ಗೆಲುವು ಸಿಕ್ಕಿಲ್ಲ ಎಂದು ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯ ಲಾಕ್ಡೌನ್ ಹಂತ ಹಂತವಾಗಿ ಅನ್ಲಾಕ್ ಮಾಡಲಾಗುತ್ತದೆ. ಮೊದಲಿಗೆ ಬಡವರು, ದಿನಗೂಲಿ ನೌಕರರು ಮತ್ತು ಪ್ರವಾಸಿ ಕಾರ್ಮಿಕರಿಗೆ ಆದ್ಯತೆ. ಹಾಗಾಗಿ ಸೋಮವಾರದಿಂದ ಕಟ್ಟಡ ಕಾಮಗಾರಿ ಮತ್ತು ಫ್ಯಾಕ್ಟರಿಗಳನ್ನು ತೆರೆಯಬಹುದಾಗಿದೆ. ಮುಂದಿನ ವಾರ ಮತ್ತೆ ಎರಡು ವಲಯಗಳು ಅನ್ಲಾಕ್ ಆಗಲಿವೆ ಎಂದು ಸಿಎಂ ತಿಳಿಸಿದ್ದಾರೆ.
ಈ ವಾರದ ಅನ್ಲಾಕ್ ಬಳಿಕ ಜನರು ಮತ್ತು ತಜ್ಞರ ಸಲಹೆ ಪಡೆದು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಒಂದು ವೇಳೆ ಕೊರೊನಾ ಪಸರಿಸುವ ಪ್ರಮಾಣ ಏರಿಕೆಯಾದಲ್ಲಿ ಅನ್ಲಾಕ್ ಪ್ರಕ್ರಿಯೆಯನ್ನ ರದ್ದುಗೊಳಿಸಲಾಗುವುದು. ಹಾಗಾಗಿ ದೆಹಲಿ ಜನತೆ ಅನ್ಲಾಕ್ ನಲ್ಲಿ ಕೊರೋನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸರ್ಕಾರದ ಜೊತೆ ಕೈ ಜೋಡಿಸಬೇಕೆಂದು ಸಿಎಂ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.












