ಚಂಡಮಾರುತದ ಪರಿಶೀಲನೆಗೆ ಪ. ಬಂಗಾಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ: ಕ್ಯಾರೇ ಅನ್ನದ ಸಿಎಂ ಮಮತಾ ಬ್ಯಾನರ್ಜಿ…!

0
917

ಸನ್ಮಾರ್ಗ ವಾರ್ತೆ

ಕೋಲ್ಕತ್ತಾ: ಬಿಜೆಪಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವೆ ನಡೆಯುತ್ತಿದ್ದ ಶೀತಲ ಸಮರ ಇಂದು ಯಾಸ್ ಚಂಡಮಾರುತದ ಪರಿಶೀಲನೆಗೆ ಪ. ಬಂಗಾಳಕ್ಕೆ ಪ್ರಧಾನಿ ಮೋದಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಬಹಿರಂಗಗೊಂಡಿದೆ. ಪ್ರಧಾನಿಯವರನ್ನೇ ಕಡೆಗಣಿಸುವ ಮೂಲಕ ಸಿಎಂ ಮಮತಾ ಎಲ್ಲ ಪ್ರೋಟೋಕಾಲ್ ಗಳನ್ನೂ ಮುರಿದಿರುವ ಆರೋಪ ಕೇಳಿ ಬಂದಿದ್ದು, ಇದು ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಆದರೆ ಈ ಆರೋಪದ ಬಗ್ಗೆ ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರುವ ಮಮತಾ, ರಾಜ್ಯದ ಇತರ ಉನ್ನತ ಅಧಿಕಾರಿಗಳೊಂದಿಗೆ ಮುಂಚಿತವಾಗಿ ಸಭೆ ನಿಗದಿಯಾಗಿದ್ದರಿಂದ ಪ್ರಧಾನಿ ನರೇಂದ್ರ ಮೋದಿ ಜತೆಗಿನ ಪರಿಶೀಲನಾ ಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನಿಯವರ ಅನುಮತಿ ಪಡೆದಿದ್ದೆ ಎಂದು ತಿಳಿಸಿದ್ದಾರೆ.

ಯಾಸ್ ಚಂಡಮಾರುತದ ಪರಿಶೀಲನೆಗೆ ಒಡಿಶಾ ಹಾಗೂ ಪ. ಬಂಗಾಳಕ್ಕೆ ಪ್ರಧಾನಿ ಮೋದಿಯವರು ಭೇಟಿ ನೀಡುವ ವಿವರವು ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ಇನ್ನು ಬಂಗಾಳಕ್ಕೆ ಬಂದಾಗ ಪರಿಶೀಲನಾ ಸಭೆಗೆ ಹಾಜರಾಗದೆ ಮೋದಿ ಇಳಿದ ವಿಮಾನ ನಿಲ್ದಾಣದಲ್ಲಿ ಅವರೊಂದಿಗೆ 15 ನಿಮಿಷಗಳ ತ್ವರಿತ ಸಂವಾದವನ್ನು ನಡೆಸಿ, ಅವರಿಗೆ ವರದಿಯನ್ನು ನೀಡಿದ ನಂತರ ತೆರಳಿದರು ಎಂದು ತಿಳಿದು ಬಂದಿದೆ.

“ನೀವು ನನ್ನನ್ನು ಭೇಟಿಯಾಗಲು ಬಯಸಿದ್ದೀರಿ ಅದಕ್ಕಾಗಿಯೇ ನಾನು ಇಲ್ಲಿ ಬಂದಿದ್ದೇನೆ. ನಾನು ಮತ್ತು ನನ್ನ ಮುಖ್ಯ ಕಾರ್ಯದರ್ಶಿ ಈ ವರದಿಯನ್ನು ನಿಮಗೆ ಸಲ್ಲಿಸಲು ಬಯಸುತ್ತೇವೆ. ಈಗ ನಾವು ದಿಘಾದಲ್ಲಿ ಸಭೆಯೊಂದನ್ನು ಆಯೋಜಿಸಿದ್ದೇವೆ. ಆದ್ದರಿಂದ ನಾವು ಹೊರಡಲು ನಿಮ್ಮ ಅನುಮತಿಯನ್ನು ಕೋರುತ್ತೇವೆ” ಎಂದು ಮುಖ್ಯಮಂತ್ರಿ ಕೇಳಿರುವುದಾಗಿ ಅವರ ಆಪ್ತ ವಲಯವು ಹೇಳಿದೆ. .

ಪಶ್ಚಿಮ ಬಂಗಾಳ ಚುನಾವಣೆಯ ಬಳಿಕ ಮಮತಾ ಬ್ಯಾನರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಮುಖಾಮುಖಿ ಭೇಟಿ ಇದಾಗಿತ್ತು.

ಈ ಮಧ್ಯೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿ ಅಲಪನ್ ಬಂದೋಪಾಧ್ಯಾಯರು ಸಭೆಗೆ ಸುಮಾರು ಅರ್ಧ ಘಂಟೆ ತಡವಾಗಿ ಬಂದು, ಕಾಯುವಂತೆ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿತ್ತು. ಪ್ರಧಾನ ಮಂತ್ರಿಯವರು ವಿಮಾನದಿಂದ ಇಳಿದಾಗ ಸ್ವೀಕರಿಸಲು ಪಶ್ಚಿಮ ಬಂಗಾಳ ಸರ್ಕಾರದಿಂದ ಯಾರೂ ಇರಲಿಲ್ಲ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ .

ನೈಸರ್ಗಿಕ ವಿಪತ್ತಿನ ಸಮಯದಲ್ಲಿ ಶೋಚನೀಯ ಮತ್ತು ತೀರಾ ಕೆಳಮಟ್ಟದ ರಾಜಕಾರಣವನ್ನು ಮಮತಾ ಬ್ಯಾನರ್ಜಿ ಮಾಡಿದ್ದಾರೆ. ಭಾರತೀಯ ಗಣರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕೂಡ ರಾಜ್ಯದ ಮುಖ್ಯಮಂತ್ರಿಗಳು ಪ್ರಧಾನಮಂತ್ರಿ ಮತ್ತು ರಾಜ್ಯಪಾಲರಂತಹ ಉನ್ನತ ಸಾಂವಿಧಾನಿಕ ಸ್ಥಾನ ಹೊಂದಿರುವವರೊಂದಿಗೆ ಇಂತಹ ಕೊಳಕು, ಅಗೌರವ ಮತ್ತು ಸೊಕ್ಕಿನಿಂದ ವರ್ತಿಸಿಲ್ಲ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ಈಗ ಬಂಗಾಳ ವಿರೋಧ ಪಕ್ಷದ ನಾಯಕರಾಗಿರುವ ಸುವೇಂದು ಅಧಿಕಾರಿ ಸಭೆಯ ಭಾಗವಾಗಿ ಭಾಗವಹಿಸಿದ್ದು ಮುಖ್ಯಮಂತ್ರಿ ಮಮತಾರ ಅಸಮಾಧಾನಕ್ಕೆ ಕಾರಣ ಎಂದು ಟಿಎಂಸಿ ಮೂಲಗಳು ಹೇಳಿವೆ.