ಸನ್ಮಾರ್ಗ ವಾರ್ತೆ
ಮಂಗಳೂರು: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್, ಮಂಗಳೂರು ಇದರ ವತಿಯಿಂದ ಬಂಟ್ವಾಳ ತಾಲೂಕಿನ ಬಾಂಬಿಲ ಸಮೀಪದ ಮದ್ದ ಎಂಬಲ್ಲಿ ಬಡ ವಿಧವೆ ಹಾಗೂ ಆಕೆಯ ನಾಲ್ಕು ಅನಾಥ ಹೆಣ್ಮಕ್ಕಳ ಆಸರೆಗಾಗಿ ದಾನಿಗಳ ಸಹಾಯದಿಂದ ಅಂದವಾದ ಮನೆ ನಿರ್ಮಿಸಿ ಸರಳ ಕಾರ್ಯಕ್ರಮದಲ್ಲಿ ಇಂದು ಹಸ್ತಾಂತರಿಸಲಾಯಿತು.
ಜಮಾಅತೆ ಇಸ್ಲಾಮೀ ಹಿಂದ್, ಬಂಟ್ವಾಳ ವರ್ತುಲದ ಹಿರಿಯ ಸದಸ್ಯರೂ ನಿವೃತ್ತ ಅಧ್ಯಾಪಕರೂ ಆದ ಅಬ್ದುಸ್ಸಲಾಮ್ ಮಾಸ್ಟರ್ ಉದ್ಘಾಟಿಸಿ, ಸಮಾಜ ಸೇವೆಯ ಅಗತ್ಯ ಮತ್ತು ಅನಿವಾರ್ಯತೆಯ ಕುರಿತು ಮಾತಾಡಿದರು.
ಅನುಪಮ ಮಹಿಳಾ ಮಾಸಿಕದ ವ್ಯವಸ್ಥಾಪಕರಾದ ಮುಹಮ್ಮದ್ ಮುಹ್ಸಿನ್ ಸಂದರ್ಭೋಚಿತ ಉಪದೇಶ ನೀಡಿ, ಆರ್ಥಿಕ ಸಹಾಯ ನೀಡಿ ಸಹಕರಿಸಿದವರಿಗೂ ಫಲಾನುಭವಿ ಕುಟುಂಬಕ್ಕೂ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಮುಹಮ್ಮದ್ ಇಸ್‌ಹಾಕ್ ಪರಂಗಿಪೇಟೆ ಹಾಗೂ ಬಾಂಬಿಲ ಮಸೀದಿ ಕಮಿಟಿಯ ಸದಸ್ಯರಾದ ಮುಹಮ್ಮದ್ ಶರೀಫ್, ಜಮಾಅತೆ ಇಸ್ಲಾಮೀ ಹಿಂದ್ ಬಂಟ್ವಾಳ ಅಧ್ಯಕ್ಷರಾದ ಇಲ್ಯಾಸ್ ಅಹ್ಮದ್, ಅಬುಸ್ವಾಲೀ ಕೆಳಗಿನ ಪೇಟೆ, ಶಂಶೀರ್ ಮೆಲ್ಕಾರ್ ಇನ್ನಿತರರು ಉಪಸ್ಥಿತರಿದ್ದರು. ಈ ಅತ್ಯಂತ ಬಡ ಕುಟುಂಬದ ಮನೆ ನಿರ್ಮಾಣಕ್ಕೆ ಆರ್ಥಿಕವಾಗಿ ಸಹಕರಿಸಿದ ಸರ್ವರಿಗೂ ಸೃಷ್ಟಿಕರ್ತನು ತಕ್ಕ ಪ್ರತಿಫಲ ನೀಡಿ ಅನುಗ್ರಹಿಸಲಿ ಎಂದು ಸಮಾಜ ಸೇವಾ ಘಟಕ ತಿಳಿಸಿದೆ.















