ಸನ್ಮಾರ್ಗ ವಾರ್ತೆ
ಗುವಾಹಟಿ: ಅಸ್ಸಾಂ-ಮಿಝೋರಾಂ ಗಡಿಯಲ್ಲಿ ನಡೆದ ಹಿಂಸಾಚಾರ ಘಟನೆಗೆ ಸಂಬಂಧಿಸಿದಂತೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳ ವಿರುದ್ಧ ಮಿಝೋರಾಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಸೋಮವಾರದಂದು ಎರಡು ರಾಜ್ಯಗಳ ಪೊಲೀಸ್ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯ ವೇಳೆ ಆರು ಅಸ್ಸಾಂ ಪೋಲೀಸರು ಸಾವನ್ನಪ್ಪಿದ್ದರು. ಆ ಬಳಿಕ ಮಿಜೋರಾಂ ನಿನ್ನೆ ಈ ಘಟನೆಯ ಕುರಿತು ಪ್ರಕರಣ ದಾಖಲಿಸಿದೆ ಎಂದು ಹೇಳಿದ್ದು, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ನೆರೆಯ ರಾಜ್ಯದ ಇತರ ಉನ್ನತ ಅಧಿಕಾರಿಗಳನ್ನು ಹೆಸರಿಸಿರುವುದಾಗಿ ತಿಳಿದು ಬಂದಿದೆ.
ಅಸ್ಸಾಂನ ಕ್ಯಾಚಾರ್ ನ ಗಡಿಭಾಗದಲ್ಲಿರುವ ಮಿಜೋರಾಂನ ಕೊಲಾಸಿಬ್ ಜಿಲ್ಲೆಯ ವೈರೆಂಗ್ಟೆ ಪೊಲೀಸ್ ಠಾಣೆಯಲ್ಲಿ “ಕೊಲೆ ಯತ್ನ” ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್ ಗಳ ಅಡಿಯಲ್ಲಿ ಎಫ್ ಐ ಆರ್ ನಲ್ಲಿ ಹೆಸರು ಉಲ್ಲೇಖಿಸಲಾಗಿದೆ. ಅಸ್ಸಾಂನ ಮುಖ್ಯಮಂತ್ರಿಯ ಸೂಚನೆಯಂತೆ ಪೊಲೀಸರು ಶಿಬಿರವನ್ನು ನಿರ್ಮಿಸಲು ಉದ್ದೇಶಿಸಿದ್ದರು ಎಂದು ಎಫ್ಐಆರ್ ನಲ್ಲಿ ಹೇಳಲಾಗಿದೆ.
ಎಫ್ಐಆರ್ ನಲ್ಲಿ ಉಲ್ಲೇಖಿಸಿರುವ ಪೊಲೀಸರಲ್ಲಿ ಅಸ್ಸಾಂ ಇನ್ಸ್ಪೆಕ್ಟರ್ ಜನರಲ್, ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್, ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದ್ದಾರೆ. ಕ್ಯಾಚಾರ್ ಜಿಲ್ಲಾ ಉಪ ಆಯುಕ್ತರನ್ನು ಸಹ ಸೇರಿಸಲಾಗಿದೆ. ಜೊತೆಗೆ 200 ಹೆಸರಿಲ್ಲದ ಪೊಲೀಸ್ ಸಿಬ್ಬಂದಿಯನ್ನು ಸೇರಿಸಲಾಗಿದೆ.












