ಸನ್ಮಾರ್ಗ ವಾರ್ತೆ
ಭೋಪಾಲ್: ಮಧ್ಯಪ್ರದೇಶ ನರ್ಸಿಂಗ್ ನೋಂದಣಿ ಮಂಡಳಿಯ ಆನ್ಲೈನ್ ನೋಂದಣಿ ವ್ಯವಸ್ಥೆಯಲ್ಲಿನ ಗಂಭೀರ ಲೋಪವು ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪೋರ್ಟಲ್ನಲ್ಲಿನ ಭದ್ರತಾ ಲೋಪ ಬೆಳಕಿಗೆ ಬಂದ ನಂತರ, ಭೋಪಾಲ್ನ ಟಿಟಿ ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ. ‘ಡಾಂಕಿ ಎಂಪಿಎನ್ಆರ್ಸಿ’ (DONKEY MPNRC) ಹೆಸರಿನಲ್ಲಿ ನರ್ಸಿಂಗ್ ನೋಂದಣಿ ಪ್ರಮಾಣಪತ್ರಗಳನ್ನು ನೀಡಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೋರ್ಟಲ್ನಲ್ಲಿನ ಲೋಪಗಳನ್ನು ಬಯಲಿಗೆಳೆಯಲು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ರಾಜ್ಯ ಉಪಾಧ್ಯಕ್ಷ ರವಿ ಪರ್ಮಾರ್ ಇಂತಹದೊಂದು ಪ್ರಯೋಗ ನಡೆಸಿದ್ದರು. ಪೋರ್ಟಲ್ನ ಕಾರ್ಯವೈಖರಿಯನ್ನು ಪರೀಕ್ಷಿಸಲು ರವಿ ಪರ್ಮಾರ್ ಅವರು ಅರ್ಜಿದಾರರ ಹೆಸರನ್ನು ‘ಡಾಂಕಿ ಎಂಪಿಎನ್ಆರ್ಸಿ’, ತಂದೆಯ ಹೆಸರನ್ನು ‘ಡಾಂಕಿ ಫಾದರ್’, ತಾಯಿಯ ಹೆಸರನ್ನು ‘ಡಾಂಕಿ ಮದರ್’ ಮತ್ತು ಜಾತಿಯನ್ನು ‘ಅನಿಮಲ್’ ಎಂದು ನಮೂದಿಸಿದ್ದರು.
ಪೋರ್ಟಲ್ ಯಾವುದೇ ಪರಿಶೀಲನೆಯಿಲ್ಲದೆ ಅರ್ಜಿಯನ್ನು ಸ್ವೀಕರಿಸಿದ್ದು, 2,050 ರೂಪಾಯಿ ಶುಲ್ಕ ವಿಧಿಸಿದ ನಂತರ ಸೆಪ್ಟೆಂಬರ್ 25 ರಂದು ಡಿಜಿಟಲ್ ನರ್ಸಿಂಗ್ ನೋಂದಣಿ ಪ್ರಮಾಣಪತ್ರವನ್ನು ನೀಡಿದೆ. ಅರ್ಜಿ ಸಂಖ್ಯೆ RG26103957 ಮತ್ತು ನೋಂದಣಿ ಸಂಖ್ಯೆಗಳಾದ Al-74561 ಮತ್ತು DII-73911 ರೊಂದಿಗೆ ಈ ಪ್ರಮಾಣಪತ್ರವನ್ನು ವಿತರಿಸಲಾಗಿದೆ. ಇದು ಸೆಪ್ಟೆಂಬರ್ 24, 2031 ರವರೆಗೆ ಮಾನ್ಯತೆಯನ್ನು ಹೊಂದಿದೆ.
ಆರೋಗ್ಯ ಕ್ಷೇತ್ರದಂತಹ ಅತ್ಯಂತ ಪ್ರಮುಖ ಕ್ಷೇತ್ರಕ್ಕೆ ಅರ್ಜಿದಾರರನ್ನು ಆಯ್ಕೆ ಮಾಡಲು ಬಳಸುವ ವ್ಯವಸ್ಥೆಯ ಗುಣಮಟ್ಟ ಮತ್ತು ಪರಿಶೀಲನಾ ವಿಧಾನಗಳನ್ನು ರವಿ ಪರ್ಮಾರ್ ತೀವ್ರವಾಗಿ ಟೀಕಿಸಿದ್ದಾರೆ. ಯಾರು ಬೇಕಾದರೂ ಸುಲಭವಾಗಿ ನಕಲಿ ಪ್ರಮಾಣಪತ್ರಗಳನ್ನು ಪಡೆಯಬಹುದಾದ ಪರಿಸ್ಥಿತಿ ಇದೆ ಎಂದು ಅವರು ಬೆಟ್ಟುಮಾಡಿ ತೋರಿಸಿದ್ದಾರೆ.
ವ್ಯವಸ್ಥೆಯ ದೋಷವನ್ನು ಅಧಿಕಾರಿಗಳ ಗಮನಕ್ಕೆ ತರಲು ಅವರು ಅಕ್ಟೋಬರ್ 1 ರಂದು ಪೊಲೀಸರಿಗೆ ದೂರು ನೀಡಿದ್ದರು. ನಂತರ ಪರ್ಮಾರ್ ಅವರು ಭೋಪಾಲ್ ಜಿಲ್ಲಾಧ್ಯಕ್ಷ ಅಕ್ಷಯ್ ತೋಮರ್ ಅವರೊಂದಿಗೆ ಪೊಲೀಸ್ ಠಾಣೆಗೆ ಹಾಜರಾಗಿ ಘಟನೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು ಹಸ್ತಾಂತರಿಸಿದ್ದಾರೆ.
ತನಿಖಾಧಿಕಾರಿಯಾಗಿರುವ ಸಬ್-ಇನ್ಸ್ಪೆಕ್ಟರ್ ರಾಘವೇಂದ್ರ ಸಿಂಗ್ ಸಿಕರ್ವಾರ್ ಮಾತನಾಡಿ, ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡ ನಂತರ ಮಧ್ಯಪ್ರದೇಶ ನರ್ಸಿಂಗ್ ನೋಂದಣಿ ಮಂಡಳಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಆದಾಗ್ಯೂ, ಮಂಡಳಿಯ ಪ್ರತಿನಿಧಿಗಳು ಇನ್ನೂ ಪೊಲೀಸರ ಮುಂದೆ ಹಾಜರಾಗಿಲ್ಲ ಎಂದು ಪರ್ಮಾರ್ ಆರೋಪಿಸಿದ್ದಾರೆ. ಇಡೀ ಆನ್ಲೈನ್ ಪ್ರಕ್ರಿಯೆಯನ್ನು ತಾಂತ್ರಿಕ ಪರಿಶೀಲನೆಗೆ ಒಳಪಡಿಸಬೇಕು ಮತ್ತು ಮಂಡಳಿಯ ಅಧಿಕಾರಿಗಳು ಹಾಗೂ ತಾಂತ್ರಿಕ ಸಂಸ್ಥೆಯ ಪಾತ್ರದ ಬಗ್ಗೆ ತನಿಖೆ ನಡೆಸಬೇಕು ಎಂದು ಎನ್ಎಸ್ಯುಐ ಒತ್ತಾಯಿಸಿದೆ.












