ಭಾರತೀಯ ಸೇನಾಪಡೆಯ ಗುಂಡಿಗೆ ಜೈಷ್ ಭಯೋತ್ಪಾದನಾ ಸಂಘಟನೆಯ ಮುಖ್ಯ ಸೂತ್ರಧಾರ ಅಬು ಸೈಫುಲ್ಲಾ ಬಲಿ

0
367

ಸನ್ಮಾರ್ಗ ವಾರ್ತೆ

ಶ್ರೀನಗರ: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ದಾಳಿಯ ಮುಖ್ಯ ಸೂತ್ರಧಾರ ಎಂದು ಕರೆಯಲಾಗುತ್ತಿದ್ದ ಜೈಷ್ ಭಯೋತ್ಪಾದನಾ ಸಂಘಟನೆಯ ಅಬು ಸೈಫುಲ್ಲಾ ಇಂದು ಭಾರತೀಯ ಸೇನಾಪಡೆಯು ಪುಲ್ವಾಮ ಜಿಲ್ಲೆಯ ಹಾಂಗ್ಲ ಮಾರ್ಗ್ ಪ್ರದೇಶದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದಾನೆ ಎಂದು ಭಾರತೀಯ ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅದ್ನಾನ್, ಇಸ್ಮಾಯಿಲ್, ಲಂಬೂ ಎಂಬ ಹೆಸರುಗಳಿಂದ ಕರೆಯಲ್ಪಡುತ್ತಿದ್ದ ಅಬು ಸೈಫುಲ್ಲಾನನ್ನು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಲಾಗಿದೆ. ಈತ 2017ರಿಂದ ಕಾಶ್ಮೀರದ ಕಣಿವೆಯಲ್ಲಿ ಉಗ್ರವಾದಿ ಕೃತ್ಯಗಳನ್ನು ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಆತ ಜೊತೆಗೆ ಇನ್ನೋರ್ವ ಉಗ್ರನನ್ನು ಕೂಡ ತ್ರಾಲ್​ನಲ್ಲಿ ಭಾರತೀಯ ಸೈನಿಕರು ಎನ್​ಕೌಂಟರ್ ಮಾಡಿದ್ದು, ಆತನ ಗುರುತನ್ನು ಪತ್ತೆ ಹಚ್ಚುವುದಾಗಿ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

2019ರ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿ ಸೇರಿದಂತೆ ಇನ್ನೂ ಹಲವು ದಾಳಿಗಳಲ್ಲಿ ಈತನ ಪಾತ್ರವಿತ್ತು. ಪಾಕಿಸ್ತಾನ ಮೂಲದ ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಯಕರಾದ ರವೂಫ್ ಅಝಾರ್, ಮೌಲಾನಾ ಮಸೂದ್ ಅಝರ್ ಹಾಗೂ ಅಮ್ಮರ್ ಜೊತೆಗೆ ಅಬು ಅಲಿಯಾಸ್ ಅದ್ನಾನ್​ ನಿಕಟ ಸಂಪರ್ಕ ಹೊಂದಿದ್ದ ಎಂದು ಸೇನೆ ತಿಳಿಸಿದೆ.

ಇಂದು ಮುಂಜಾನೆ ಎರಡು ಪ್ರತ್ಯೇಕ ಭಯೋತ್ಪಾದನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ 14 ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.