ಮದರಸಾಗಳಲ್ಲಿ ತಾಲಿಬಾನಿಗಳನ್ನು ಸೃಷಿಸಲಾಗುತ್ತಿದೆ: ವಿವಾದಾತ್ಮಕ ಹೇಳಿಕೆ ನೀಡಿದ ಸಿ.ಟಿ. ರವಿ

0
805

ಸನ್ಮಾರ್ಗ ವಾರ್ತೆ

ಕಲ್ಬುರ್ಗಿ: ಓಲೈಕೆ ರಾಜಕಾರಣದಿಂದಾಗಿ ದೇಶದಲ್ಲಿರುವ ಮದರಸಾಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಿದ್ದು, ದೇಶದಲ್ಲಿ ಮತ್ತಷ್ಟು ಪಾಕಿಸ್ತಾನಗಳು ಸೃಷ್ಟಿಯಾಗುವ ಸಂಭವವವಿದೆ. ಎಲ್ಲಿಯವರೆಗೆ ಹಿಂದುತ್ವ ಆಧರಿತ ರಾಜಕಾರಣ ಅಧಿಕಾರದಲ್ಲಿರುತ್ತದೋ ಅಲ್ಲಿಯವರೆಗೆ ದೇಶದಲ್ಲಿ ಕೆಲವೇ ಲಕ್ಷದಷ್ಟಿರುವ ಪಾರ್ಸಿಗಳು, ಯಹೂದಿಗಳಂಥವರು ನೆಮ್ಮದಿಯಿಂದ ಇರುತ್ತಾರೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಇಂದು ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ‘ತಾಲಿಬಾನಿಗಳು ಯಾವ ಗ್ರಂಥವನ್ನು ಓದಿ ಭಯೋತ್ಪಾದಕ ಕೃತ್ಯಕ್ಕಿಳಿದಿದ್ದಾರೆ ಎಂಬುದನ್ನು ನೋಡಿದರೆ ಆ ಗ್ರಂಥದ ದುಷ್ಟ ಪ್ರೇರಣೆ ಏನು ಎಂಬುದು ಅರ್ಥವಾಗುತ್ತದೆ. ಹಿಂದುತ್ವದ ರಾಜಕಾರಣ ದೇಶದಲ್ಲಿ ಇರುವವರೆಗೂ ಬುದ್ಧ, ಬಸವಣ್ಣನವರ ಚಿಂತನೆಗಳು, ಅಂಬೇಡ್ಕರ್ ಅವರ ವಾರಸುದಾರಿಕೆ ಉಳಿಯುತ್ತದೆ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

‘ಈ ದೇಶದ ಧರ್ಮಗ್ರಂಥಗಳನ್ನು ಓದಿದವರು ಯಾರೂ ತಾಲಿಬಾನಿಗಳಾಗುವುದಿಲ್ಲ. ಬದಲಾಗಿ ಅವರೆಲ್ಲ ದಾರ್ಶನಿಕರಾಗಿದ್ದಾರೆ. ದೇಶಭಕ್ತರಾಗಿದ್ದಾರೆ. ನಮ್ಮ ಮೂಲ ನಂಬಿಕೆಯಲ್ಲಿಯೇ ಸಮಭಾವವಿದೆ. ಸಮಭಾವ ಹೊಂದಿದ ಜನ ಇದ್ದಾಗ ಮಾತ್ರ ಸಮಾನತೆ, ಮಹಿಳಾ ಸ್ವಾತಂತ್ರ್ಯ ಇರುತ್ತದೆ. ಇಲ್ಲದಿದ್ದರೆ ಅಫ್ಘಾನಿಸ್ತಾನದ ಸ್ಥಿತಿ ನಮಗೂ ಬರುತ್ತದೆ’ ಎಂದು ಹೇಳಿದ್ದಾರೆ.

ಸಿ.ಟಿ.‌ರವಿಯವರ ಹೇಳಿಕೆಯನ್ನು ವಿರೋಧಿಸಿ ಈಗಾಗಲೇ ಸೋಷಿಯಲ್‌ ಮೀಡಿಯಾಗಳಲ್ಲಿ ವ್ಯಾಪಕ ಆಕ್ರೋಶ ಉಂಟಾಗಿದೆ.