ಗಡಿ ದಾಟಿದ್ದಕ್ಕೆ 23 ವರ್ಷ ಪಾಕ್ ಜೈಲಿನಲ್ಲಿ ಕಳೆದ ಮಧ್ಯಪ್ರದೇಶದ ವ್ಯಕ್ತಿ

0
374

ಸನ್ಮಾರ್ಗ ವಾರ್ತೆ

ಅಮೃತಸರ: ಮಧ್ಯಪ್ರದೇಶದ ಪ್ರಹ್ಲಾದ್ ಸಿಂಗ್ ರಾಜಪೂತ್ 33ನೇ ವಯಸ್ಸಿನಲ್ಲಿ ಪ್ರಮಾದವಶಾತ್ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದರು. ಅಲ್ಲಿ ಸೆರೆ ಸಿಕ್ಕು ಜೈಲಿನಲ್ಲಿ 23 ವರ್ಷ ಕಳೆಯಬೇಕಾಯಿತು. ಈಗ 56ನೆ ವರ್ಷದಲ್ಲಿ ಬಿಡುಗಡೆಗೊಂಡು ಹುಟ್ಟೂರಿಗೆ ಬಂದಿದ್ದಾರೆ. ಮಧ್ಯಪ್ರದೇಶದ ಸಾಗರ್‌ನ ಘೋಸಿಪಟ್ಟಿ ಗ್ರಾಮದಲ್ಲಿ ಪ್ರಹ್ಲಾದರ ಮನೆಯಿದ್ದು, ಅವರು ಮಾನಸಿಕ ಅಸ್ವಸ್ಥರು. ಹೀಗೆ ಅವರು ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದರು. ಈಗ ಸಹೋದರ ವೀರ್ ಸಿಂಗ್ ರಾಜ್‍ಪೂತ್ ಮತ್ತು ಕುಟುಂಬದ ನಿರಂತರ ಪ್ರಯತ್ನದ ಫಲವಾಗಿ ಬಿಡುಗಡೆಗೊಂಡು ಹುಟ್ಟು ಊರಿಗೆ ಬರಲು ಸಾಧ್ಯವಾಗಿದೆ.

1998ರಲ್ಲಿ ಒಂದು ದಿವಸ ಪ್ರಹ್ಲಾದ್ ಕಾಣೆಯಾಗಿದ್ದರು. ಮನೆಯವರು ಹುಡುಕಿದರೂ ಅವರು ಸಿಕ್ಕಿರಲಿಲ್ಲ. ಪೊಲೀಸರಿಗೂ ದೂರು ಕೊಡಲಾಗಿತ್ತು.

2014ರಲ್ಲಿ ಪ್ರಹ್ಲಾದ್ ಸಿಂಗ್ ಪಾಕಿಸ್ತಾನದ ಯಾವುದೋ ಜೈಲಿನಲ್ಲಿರುವ ಮಾಹಿತಿ ಲಭ್ಯವಾಗಿತ್ತು. ನಂತರ ಅವರ ಬಿಡುಗಡೆ ಪ್ರಯತ್ನ ಆರಂಭವಾಯಿತು. ವಿದೇಶ ಸಚಿವಾಲಯಕ್ಕೆ ಹಲವು ಮನವಿ ಕಳುಹಿಸಿ ಅಧಿಕಾರಿಗಳನ್ನು ಭೇಟಿಯಾಗಿ ಎಳು ವರ್ಷದ ಪರಿಶ್ರಮ ಈಗ ಫಲಪ್ರದವಾಗಿದ್ದು ಪ್ರಹ್ಲಾದ್ ಸಿಂಗ್ ಊರು ಸೇರಿಕೊಂಡಿದ್ದಾರೆ.

ಸೋಮವಾರ ಅಮೃತಸರದ ಅಠಾರಿ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಪಾಕಿಸ್ತಾನದ ಅಧಿಕಾರಿಗಳು ಅವರನ್ನು ಹಸ್ತಾಂತರಿಸಿದ್ದಾರೆ. ಸಹೋದರ ವೀರ್ ಸಿಂಗ್ ರಾಜಪೂತ್ ಮತ್ತು ಮಧ್ಯಪ್ರದೇಶ ಪೊಲೀಸರು ಅವರನ್ನು ಸ್ವಾಗತಿಸಲು ಗಡಿಗೆ ಬಂದಿದ್ದರು. ಎರಡು ದಶಕಗಳ ನಂತರ ಪ್ರಹ್ಲಾದ್ ಸಿಂಗ್ ಸಿಕ್ಕದ ಸಂತೋಷದಲ್ಲಿ ಕುಟುಂಬದವರಲ್ಲಿ ಸಂತೋಷ ಮನೆಮಾಡಿತು.