ಪಜೀರು ಜುಮಾ ಮಸೀದಿ ಅಧ್ಯಕ್ಷ, ಕೊಡುಗೈ ದಾನಿ ಹಾಜಿ ಅಬ್ದುರ್ರಝಾಕ್ ನಿಧನ

0
922

ಸನ್ಮಾರ್ಗ ವಾರ್ತೆ

ಮಂಗಳೂರು: ಕೊಡುಗೈ ದಾನಿಯಾಗಿ ಸದ್ದಿಲ್ಲದೇ ಸೇವಾ ಸಂಸ್ಥೆಗಳಲ್ಲಿ ಸದಾ ಸೇವೆ ಸಲ್ಲಿಸುತ್ತಿದ್ದ ಉದ್ಯಮಿ, ಪಜೀರು ಜುಮಾ ಮಸೀದಿ ಅಧ್ಯಕ್ಷರೂ ಆದ ಹಾಜಿ ಅಬ್ದುರ್ರಝಾಕ್ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ಅವರಿಗೆ 56 ವರ್ಷ ವಯಸ್ಸಾಗಿತ್ತು. ಸ್ಥಳೀಯವಾಗಿ ಪಜೀರ್ ಅಬ್ಬಾಸ್ ಎಂದೇ ಪ್ರಸಿದ್ಧರಾಗಿದ್ದ ಇವರು ಕಳೆದ ಹದಿನೈದು ವರ್ಷಗಳಿಂದ ಸತತವಾಗಿ ಪಜೀರು ರಹ್ಮಾನ್ ಜುಮಾ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬರುತ್ತಿದ್ದರು.

ಆಕರ್ಷಕವಾದ ಭವ್ಯ ಮಸೀದಿ, ಮಸೀದಿಯ ಆದಾಯಕ್ಕಾಗಿ ವಸತಿ ಸಂಕೀರ್ಣ, ಮಸೀದಿಯಂಗಳದಲ್ಲಿ ಮಳೆ ನೀರಿನ ನೀರಿಂಗಿಸುವಿಕೆ, ನಾಯಕತ್ವ ತರಬೇತಿ ಶಿಬಿರ ಮುಂತಾದ ಹತ್ತು ಹಲವು ಅಭಿವೃದ್ಧಿ ಕಾರ್ಯಗಳಲ್ಲಿ ಅವರ ಪಾತ್ರ ಬಹುದೊಡ್ಡದು.

ಉತ್ತಮ ವಾಗ್ಮಿಯಾಗಿದ್ದ ಇವರ ಕನ್ನಡ ಭಾಷಣಗಳು ಪರಿಣಾಮಕಾರಿಯಾಗಿರುತ್ತಿತ್ತು. ಯೌವ್ವನದಲ್ಲೇ ನಾಯಕತ್ವ ಗುಣವನ್ನು ಬೆಳೆಸಿಕೊಂಡಿದ್ದ ಇವರು ಜಮೀಯತ್ತುಲಬಾ ಫ್ರೆಂಡ್ಸ್ ಅಸೋಸಿಯೇಶನ್ ಇದರ ಅಧ್ಯಕ್ಷರಾಗಿದ್ದ ಕಾಲದಲ್ಲಿ ರಕ್ತದಾನ ಶಿಬಿರ, ಬಡ ಮಕ್ಕಳಿಗೆ ಶೈಕ್ಷಣಿಕ ನೆರವು ಮುಂತಾದ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಸ್ಥಳೀಯರಾಗಿ ಜನಾನುರಾಗಿಯಾಗಿದ್ದರು.

ಪಜೀರಿನಲ್ಲಿ ಪರಂಪರಾಗತವಾಗಿ ಬಂದ ಮತೀಯ ಸೌಹಾರ್ದತೆಯನ್ನು ಉಳಿಸಿಕೊಂಡು ಬೆಳೆಸುವಲ್ಲಿ ಇವರ ಪಾತ್ರ ಹಿರಿದಾದುದು. ಮಂಗಳೂರು ಮತ್ತು ಉಡುಪಿಯಲ್ಲಿ ಲೈಟಿಂಗ್ ಉದ್ಯಮ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದ್ದರು.

ಪತ್ನಿ ಹಫ್ಸಾ, ಮಕ್ಕಳಾದ ಸುಫೈಲ್, ಸಫ್ವಾನ್, ತಾಯಿ , ಸಹೋದರ, ಸಹೋದರಿಯರು ಮತ್ತು ಅಪಾರ ಬಂಧು ಬಳಗವನ್ನೂ, ಗೆಳೆಯರನ್ನೂ ಅಗಲಿದ್ದಾರೆ. ಮೃತರ ಪಜೀರಿನ ಸ್ವಗೃಹದಲ್ಲಿ ಸಂಜೆ 5ರಿಂದ ರಾತ್ರಿ ಎಂಟರರವರೆಗೆ ಪಾರ್ಥಿವ ಶರೀರದ ಸಂದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮೃತರ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.