ಪ್ರೇಮಕ್ಕೆ ಪೂರಕ ವಾತಾವರಣ ಕಲ್ಪಿಸಿ ಪ್ರೇಮಿಸಬಾರದೆಂದರೆ ಹೇಗೆ?

0
1243

ಸನ್ಮಾರ್ಗ ಸಂಪಾದಕೀಯ

ಉತ್ತರ ಭಾರತದ ಮಾನ-ಮರ್ಯಾದೆಯನ್ನು ಹರಾಜು ಹಾಕುತ್ತಿರುವ ಮರ್ಯದಾ ಹತ್ಯೆ ಎಂಬ ಕಾಯಿಲೆ ದಕ್ಷಿಣ ಭಾರತದಲ್ಲಿ ಅಪರೂಪ. ಹರೆಯದ ಯುವಕ-ಯುವತಿಯರೇ ಈ ಕ್ರೌರ್ಯದ ಬಲಿಪಶುಗಳು. ಉತ್ತರ ಭಾರತದಲ್ಲಿ ಎರಡು ಧರ್ಮಗಳ ನಡುವಿನ ಯುವಕ-ಯುವತಿಯ ನಡುವಿನ ಪ್ರೀತಿಗಿಂತಲೂ ಎರಡು ಜಾತಿಗಳ ಗಂಡು-ಹೆಣ್ಣಿನ ಪ್ರೀತಿಯೇ ಅತ್ಯಂತ ಹೆಚ್ಚು ಅಪಾಯಕಾರಿ. ಮೇಲ್ಜಾತಿ ಗಂಡನ್ನು ಕೀಳ್ಜಾತಿಯ ಹೆಣ್ಣು ಪ್ರೀತಿಸಿದರೆ, ಆ ಪ್ರೀತಿಯನ್ನು ಮೇಲ್ಜಾತಿ ಅವಮಾನಕರವೆಂದು ಭಾವಿಸುತ್ತದೆ ಮತ್ತು ಇದಕ್ಕೆ ತದ್ವಿರುದ್ಧ ಪ್ರೇಮ ಪ್ರಕರಣವನ್ನೂ ಇದೇ ಮಾನದಂಡದಲ್ಲೇ ನೋಡುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಕ್ರೌರ್ಯ ಬಲ ಪಡೆಯುತ್ತಲೂ ಇದೆ. ಆದರೆ,
ಇದರ ಕಾವು ಕರ್ನಾಟಕಕ್ಕೆ ಅಷ್ಟಾಗಿ ತಟ್ಟಿರಲಿಲ್ಲ. ಪ್ರೀತಿಸಿದ ಹೆಣ್ಣು-ಗಂಡನ್ನು ಅವರ ಜಾತಿಯೋ-ಧರ್ಮವೋ ಆಧಾರವಾಗಿಟ್ಟುಕೊಂಡು ಹತ್ಯೆ ಮಾಡುವ ಪ್ರಕರಣಗಳು ತೀರಾ ಅಪರೂಪವೆಂಬಂತೆ ಇಲ್ಲಿ ನಡೆಯುತ್ತಿದ್ದುವು.

ಇದೀಗ ರಾಜ್ಯದ ಬೆಳಗಾವಿಯಲ್ಲಿ ಇಂಥದ್ದೊಂದು ಕ್ರೌರ್ಯ ನಡೆದಿದೆ. `ಜಸ್ಟಿಸ್ ಫಾರ್ ಅರ್ಬಾಝ್’ ಎಂಬ ಹ್ಯಾಶ್ ಟ್ಯಾಗ್ ಟ್ವೀಟರ್‌ನಲ್ಲಿ ಟ್ರೆಂಡಿAಗ್ ಆಗುವಷ್ಟು ಈ ಘಟನೆ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. 25 ವರ್ಷದ ಯುವಕ ಅರ್ಬಾಝ್ ಮತ್ತು ಹಿಂದೂ ಯುವತಿಯು ಪ್ರೇಮಿಸುತ್ತಿದ್ದು ಇದನ್ನು ವಿರೋಧಿಸಿ ಯುವತಿಯ ತಂದೆ ಮತ್ತು ಇತರ ಮೂವರು ಸೇರಿಕೊಂಡು ಅರ್ಬಾಝ್‌ನ ಹತ್ಯೆ ನಡೆಸಿದ್ದಾರೆ ಎಂದು ಆತನ ಹೆತ್ತವರು ದೂರು ನೀಡಿದ್ದಾರೆ. ಅರ್ಬಾಝ್‌ನ ತಾಯಿಯ ದೂರಿನಂತೆ ಮೂವರ ಮೇಲೆ ಎಫ್‌ಐಆರ್ ದಾಖಲಾಗಿದೆ.

ಈ ದೇಶದಲ್ಲಿ ಪ್ರೇಮಕ್ಕೆ ಸಂಬಂಧಿಸಿ ಎರಡು ಬಗೆಯ ಪ್ರಶ್ನೆಗಳಿವೆ. ಗಂಡು-ಹೆಣ್ಣು ಪ್ರೇಮಿಸುವುದು ಸರಿಯೇ ಎಂಬ ಪ್ರಶ್ನೆ ಒಂದು ಕಡೆಯಾದರೆ, ಪ್ರೇಮಿಸುವುದಕ್ಕೆ ಅವರು ಗಂಡು-ಹೆಣ್ಣಾದರಷ್ಟೇ ಸಾಕೇ ಅಥವಾ ಅವರ ಧರ್ಮ, ಜಾತಿಗಳನ್ನು ಕೂಡ ಲೆಕ್ಕಕ್ಕೆ ತೆಗೆದುಕೊಳ್ಳಬೇಕೇ ಎಂಬುದು ಇನ್ನೊಂದು. ಸದ್ಯ ಈ ದೇಶದಲ್ಲಿ ಈ ಎರಡನೇ ಪ್ರಶ್ನೆಗೆ ಬಹಳ ಮಹತ್ವ ಇದೆ.

ಈ ದೇಶದಲ್ಲಿ ಮುಸ್ಲಿಮ್ ಯುವಕ ಮುಸ್ಲಿಮ್ ಯುವತಿಯನ್ನು ಪ್ರೀತಿಸುವಷ್ಟು ಹಿಂದೂ ಯುವತಿಯನ್ನು ಪ್ರೀತಿಸುವುದು ಸುಲಭವಲ್ಲ. ಅಂಥ ಪ್ರೀತಿಯ ಸುತ್ತ ನೂರಾರು ಅನುಮಾನದ ಸಂಗತಿಗಳನ್ನು ಈಗಾಗಲೇ ಸಾಮಾಜಿಕವಾಗಿ ಹರಡಿ ಬಿಡಲಾಗಿದೆ. ಲವ್ ಜಿಹಾದ್ ಎಂಬ ಪದ ಹುಟ್ಟಿಕೊಂಡಿದ್ದೇ ಇಂಥ ಪ್ರೀತಿಗಳನ್ನು ಮಟ್ಟ ಹಾಕುವುದಕ್ಕಾಗಿ. ಮುಸ್ಲಿಮ್ ಯುವಕ ಹಿಂದೂ ಯುವತಿನ್ನು ಪ್ರೀತಿಸುವುದು ತಪ್ಪು, ಹಿಂದೂ ಯುವತಿ ಮತ್ತು ಮುಸ್ಲಿಮ್ ಯುವಕ ಜೊತೆಯಾಗಿ ಇರಬಾರದು, ಮಾತಾಡಬಾರದು, ನಗಬಾರದು… ಇತ್ಯಾದಿ ಕಟ್ಟುಪಾಡುಗಳು ಸಮಾಜವನ್ನು ಇವತ್ತು ಅನಧಿಕೃತವಾಗಿ ಆಳತೊಡಗಿವೆ. ಇತ್ತೀಚೆಗಷ್ಟೇ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಇಂಥ ಎರಡು ಪ್ರಕರಣಗಳು ನಡೆದುವು. ಬೆಂಗಳೂರಿನಲ್ಲಿ ಮುಸ್ಲಿಮ್ ಯುವಕರು ಇಂಥ ನಿಲುವನ್ನು ಜಾರಿ ಮಾಡಲು ಹೊರಟರೆ ಮಂಗಳೂರಿನಲ್ಲಿ ಹಿಂದೂ ಯುವಕರು ಇಂಥ ನಿಯಮಗಳನ್ನು ಜಾರಿ ಮಾಡಿದರು. ಬೆಳಗಾವಿಯ ಅರ್ಬಾಝ್‌ನ ಸಾವು ಮುಖ್ಯವಾಗುವುದು ಈ ಹಿನ್ನೆಲೆಯಲ್ಲೇ. ಆತನ ಕೈಯನ್ನು ಕಟ್ಟಿ ಹಾಕಲಾಗಿರುವುದು ಅದೊಂದು ಕೊಲೆ ಎಂಬುದಕ್ಕೆ ಆಧಾರವೆಮದು ಹೆತ್ತವರು ಹೇಳುತ್ತಿದ್ದಾರೆ. ಈ ಆರೋಪಕ್ಕೆ ಪೂರಕ ಆಧಾರಗಳನ್ನೂ ಅವರು ನೀಡುತ್ತಿದ್ದಾರೆ. ನಿಜಕ್ಕೂ ಹತ್ಯೆಯೇ ಎಂದಾದರೆ, ಅತ್ಯಂತ ಗಂಭೀರ ಪ್ರಕರಣ ಇದು.

ಹೆಣ್ಣು-ಗಂಡು ಪ್ರೀತಿಸುವುದು ಸಾಯಿಸಬೇಕಾದ ಅಪರಾಧ ಅಲ್ಲ. ಹಾಗಂತ, ಹೆಣ್ಣು-ಗಂಡಿನ ಪ್ರೀತಿಯ ಬಗ್ಗೆ ಉಭಯ ಹೆತ್ತವರಲ್ಲೂ ಅಸಮಾಧಾನ ಇರುವುದನ್ನು ಅಪರಾಧ ಎಂದು ಹೇಳುವಂತೆಯೂ ಇಲ್ಲ. ಅದಕ್ಕೆ ಧಾರ್ಮಿಕ, ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತಿತರ ಅನೇಕ ಕಾರಣಗಳಿರುತ್ತವೆ. ಪ್ರೇಮದ ಎದುರು ಈ ಎಲ್ಲ ಕಾರಣಗಳೂ ನಿರರ್ಥಕ ಎಂದು ಸಾರಾಸಗಟು ತಿರಸ್ಕರಿಸುವುದೂ ಸರಿಯಲ್ಲ. ಪ್ರೇಮದ ಅಮಲಿನಲ್ಲಿ ಗಂಡು-ಹೆಣ್ಣು ಅನೇಕ ಬಾರಿ ಅಂಧ ಆವೇಶದಲ್ಲಿರುತ್ತಾರೆ. ತಾವೇ ಸರಿ ಮತ್ತು ಇದರಾಚೆಗಿನ ಎಲ್ಲ ಅಭಿಪ್ರಾಯಗಳೂ ತಪ್ಪು ಅಥವಾ ತಮ್ಮ ಪ್ರೇಮವನ್ನು ತುಂಡರಿಸುವುದೇ ಅವುಗಳ ಉದ್ದೇಶ ಎಂಬ ಭ್ರಮೆಯಲ್ಲಿ ಅವರಲ್ಲಿರುತ್ತಾರೆ. ಇಂಥ ಸಂದರ್ಭದಲ್ಲಿ ಹಿರಿಯರು ಬುದ್ಧಿಮಾತುಗಳನ್ನು ಹೇಳುವುದು ಅಪರಾಧ ಅಲ್ಲ. ಆದರೆ ಇಂಥ ಯಾವ ಪ್ರಯತ್ನಗಳೂ ಬಲವಂತದ ಹೇರಿಕೆ ಆಗಬಾರದು. ಎಚ್ಚರಿಸುವ ಮಾತುಗಳು ಧಮಕಿ ಆಗಬಾರದು. ಕ್ಷಣಿಕ ಆವೇಶದ ಆಚೆಗೆ ಇರುವ ವಾಸ್ತವವನ್ನು ಮನದಟ್ಟು ಮಾಡುವುದು ಮತ್ತು ಇವೆಲ್ಲದರ ಆಚೆಗೂ ಅವರಿಬ್ಬರೂ ಬಲವಾಗಿಯೇ ತಮ್ಮ ನಿರ್ಧಾರಕ್ಕೆ ಅಂಟಿಕೊಂಡರೆ, ಅವರ ಮೇಲೆ ಯಾವ ಬಾಹ್ಯ ಒತ್ತಡವನ್ನೂ ಹೇರದೇ ಮತ್ತು ಬೆದರಿಕೆಯನ್ನೂ ಹಾಕದೇ ಅವರ ಪಾಡಿಗೆ ಬಿಟ್ಟು ಬಿಡುವುದು- ಈ ವಿವೇಕವನ್ನು ಎಲ್ಲರೂ ಪ್ರದರ್ಶಿಸಬೇಕು. ಅನೇಕ, ಇದು ಅಷ್ಟು ಸುಲಭ ಅಲ್ಲ. ಆದರೆ,

ಹೆತ್ತವರು ತಮ್ಮ ಮಕ್ಕಳು ತಮ್ಮ ಇಂಗಿತದಂತೆಯೇ ನಡೆಯಬೇಕು ಮತ್ತು ತಮ್ಮಲ್ಲಿ ವಿಚಾರಿಸದೇ ಯಾವ ನಿರ್ಧಾರವನ್ನೂ ಕೈಗೊಳ್ಳಬಾರದು ಎಂದು ಬಯಸುತ್ತಾರೆ. ಕೆಲವೊಮ್ಮೆ ಮಕ್ಕಳ ನಿರ್ಧಾರವೇ ಸೂಕ್ತವಾಗಿದ್ದರೂ ತಮ್ಮಲ್ಲಿ ವಿಚಾರಿಸಲಿಲ್ಲ ಎಂಬ ಕಾರಣಕ್ಕಾಗಿ ಹೆತ್ತವರು ಅದನ್ನು ತಿರಸ್ಕರಿಸುವುದೂ ಇದೆ. ಇಂಥ ಜಿಗುಟುತನಗಳು ಈಗಾಗಲೇ ಅನೇಕರ ಪ್ರಾಣಹರಣಕ್ಕೆ ಕಾರಣವಾಗಿದೆ. ಅಲ್ಲದೆ, ಉತ್ತರ ಭಾರತವು ಇಂಥ ನರಹತ್ಯೆಗಳ ಅಪರಾಧದ ಭಾರದಲ್ಲಿ ಈಗಾಗಲೇ ನರಳುತ್ತಿದೆ. ಆದ್ದರಿಂದ ಅದು ದಕ್ಷಿಣ ಭಾರತಕ್ಕೂ ಕಾಲಿಡದಂತೆ ಜಾಗರೂಕತೆ ಪಾಲಿಸಬೇಕಾದ ಅಗತ್ಯ ಇದೆ. ಒಂದುವೇಳೆ,
ಅರ್ಬಾಝ್ ಹತ್ಯಾ ಘಟನೆಯನ್ನು ರಾಜಕೀಯ ಅಥವಾ ಇನ್ನಿತರ ಒತ್ತಡಗಳ ಕಾರಣದಿಂದ ಮರೆಗೆ ಸರಿಸಿದರೆ, ಅದು ಮುಂದಿನ ದಿನಗಳಲ್ಲಿ ಇನ್ನಷ್ಟು ಹತ್ಯೆಗಳಿಗೆ ಪ್ರೇರಣೆ ಒದಗಿಸಬಹುದು. ಈಗಾಗಲೇ ಅನೈತಿಕ ಪೊಲೀಸ್‌ಗಿರಿಗಾಗಿ ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜಾಗಿದೆ. ಅರ್ಬಾಝ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಈ ಅನೈತಿಕ ಪೊಲೀಸ್‌ಗಿರಿಯೇ ಮುಂದಿನ ದಿನಗಳಲ್ಲಿ ಇನ್ನಷ್ಟು ಕರಾಳ ರೂಪ ನಡೆಯುವುದಕ್ಕೆ ಕಾರಣವಾಗಬಹುದು.

ಈ ದೇಶದಲ್ಲಿ ಕಲಿಕೆಯಿಂದ ಹಿಡಿದು ಉದ್ಯೋಗದವರೆಗೆ ಎಲ್ಲೂ ಹೆಣ್ಣು-ಗಂಡಿನ ನಡುವೆ ವಿಭಜನೆ ಇಲ್ಲ. ಮಾರುಕಟ್ಟೆಯಾಗಲಿ, ಸಿನಿಮಾ ಮಂದಿರಗಳಾಗಲಿ, ಕ್ಲಾಸ್ ರೂಮ್‌ಗಳು, ಸರಕಾರಿ ಕಚೇರಿಗಳು, ಪಾರ್ಕ್ಗಳು, ಕ್ರೀಡೆಗಳು, ರೈಲು, ಬಸ್ಸು, ವಿಮಾನ ಪ್ರಯಾಣಗಳು ಸಹಿತ ಎಲ್ಲೆಲ್ಲೂ ಗಂಡು-ಹೆಣ್ಣು ಜೊತೆಯಾಗಿಯೇ ಇರುತ್ತಾರೆ. ಹರೆಯದ ಗಂಡು-ಹೆಣ್ಣಿನ ಆಕರ್ಷಣೆಯಲ್ಲಿ ಈ ಬೆರೆಯುವಿಕೆಗೆ ಬಹುಮುಖ್ಯ ಪಾತ್ರ ಇದೆ. ಆದ್ದರಿಂದ ಈ ಎಲ್ಲ ವ್ಯವಸ್ಥೆಯನ್ನು ಹಾಗೆಯೇ ಇರಗೊಟ್ಟೇ ಹೆಣ್ಣು-ಗಂಡನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಅಸಂಬದ್ಧ ಮತ್ತು ಕ್ರೌರ್ಯ. ಹೆಣ್ಣು-ಗಂಡಿನ ನಡುವಿನ ಆಕರ್ಷಣೆಯನ್ನು ಯಾರು ಇಷ್ಟಪಡುವುದಿಲ್ಲವೋ ಅವರು ಮೊದಲಾಗಿ ಈ ಮೂಲ ವ್ಯವಸ್ಥೆಯನ್ನು ಬದಲಿಸುವುದಕ್ಕಾಗಿ ಚಳವಳಿ ನಡೆಸಿ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈಗಿನ ವ್ಯವಸ್ಥೆಯಿಂದ ತಮಗಾಗುತ್ತಿರುವ ತೊಂದರೆಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು. ಅದು ಬಿಟ್ಟು ಕೇವಲ ಹರೆಯದ ಹೆಣ್ಣು-ಗಂಡನ್ನು ನಡು ಬೀದಿಯಲ್ಲಿ ಬೆತ್ತಲೆಗೊಳಿಸುವುದು, ಥಳಿಸುವುದು, ನಿಂದಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಇದು ಬೇಜವಾಬ್ದಾರಿ ಮತ್ತು ಅಪ್ಪಟ ಗೂಂಡಾಗಿರಿ ವರ್ತನೆ. ಹೆಣ್ಣು-ಗಂಡು ಪರಸ್ಪರ ಪ್ರೀತಿಸುವುದಕ್ಕೆ ಪೂರಕವಾದ ಎಲ್ಲ ವಾತಾವರಣವನ್ನು ಹಾಗೆಯೇ ಇರಗೊಟ್ಟು ಪ್ರೀತಿಸಬೇಡಿ ಎಂದು ಹೇಳುವುದು ತಿಳಿಗೇಡಿತನ. ಈ ಹಿನ್ನೆಲೆಯಲ್ಲೇ ಅರ್ಬಾಝ್ ಪ್ರಕರಣ ಮತ್ತು ಅನೈತಿಕ ಪೊಲೀಸ್‌ಗಿಯನ್ನು ನಾವು ಅವಲೋಕಿಸಬೇಕು. ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಈ ದೇಶದಲ್ಲಿ ಯಾವ ಖಾಸಗಿ ತಂಡಕ್ಕೂ ಇಲ್ಲ. ಹಾಗೆ ಮಾಡುವ ತಂಡವನ್ನು ಕಠಿಣ ಪರಿಚ್ಛೇದಗಳಡಿ ಕಾನೂನು ಕ್ರಮಕ್ಕೆ ಒಳಪಡಿಸಬೇಕು. ತಪ್ಪಿತಸ್ಥರು ಯಾರೇ ಆಗಿರಲಿ, ಅವರ ಧರ್ಮ-ಚರ್ಮ ನೋಡದೇ ಶಿಕ್ಷಿಸದಿದ್ದರೆ ಮುಂದೆ ಇಂಥ ಕಾನೂನು ಉಲ್ಲಂಘನೆಗಳೇ ಕಾನೂನಾದೀತು.