ಅಕಾಲಿಕ ಮಳೆಯಿಂದ ಬೆಳೆ ಹಾನಿ: ಎಕರೆಗೆ ₹50 ಸಾವಿರ ಪರಿಹಾರಕ್ಕೆ ವೆಲ್ಫೇರ್ ಪಾರ್ಟಿ ಒತ್ತಾಯ

0
292

ಸನ್ಮಾರ್ಗ ವಾರ್ತೆ

ಬೆಂಗಳೂರು: ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ತಕ್ಷಣವೇ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ನೀಡಬೇಕು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರು ತಾಹಿರ್ ಹುಸೇನ್ ಆಗ್ರಹಿಸಿದರು.

ರೈತರ ಹೋಳು ಯಾರೂ ಕೇಳದಂತಾಗಿದೆ. ಸರಕಾರ ಸ್ಪಂದಿಸುತ್ತಿಲ್ಲ. ಸರ್ಕಾರಕ್ಕೆ ಕಿವಿ ಕೇಳಿಸುತ್ತಿಲ್ಲ, ಕಣ್ಣು ಕಾಣಿಸುತ್ತಿಲ್ಲ. ಅತಿಯಾದ ಮಳೆಯಿಂದ ರೈತರು, ಕೂಲಿ ಕಾರ್ಮಿಕರು ತೊಂದರೆಯಲ್ಲಿದ್ದಾಗ ಜನ, ಜಾನುವಾರು ಸಂಕಷ್ಟದಲ್ಲಿದ್ದಾಗ ಮಳೆಯಿಂದ ತೊಗರಿ, ಹತ್ತಿ, ಜೋಳ, ಕಡಲೆ ಸಂಪೂರ್ಣ ಹಾಳಾಗಿವೆ. ಹೀಗಾಗಿ ಬೆಳೆ ಹಾನಿ ಸಮೀಕ್ಷೆ ಮಾಡಿ ಕಾಲ ಕಳೆಯುವ ಬದಲು ತ್ವರಿತವಾಗಿ ಪರಿಹಾರದ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಮನೆ ಬಿದ್ದು ಬೀದಿ ಪಾಲಾದ ಕುಟುಂಬಕ್ಕೆ ಕನಿಷ್ಠ ₹5 ಲಕ್ಷ ಪರಿಹಾರ ನೀಡಬೇಕು. ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ಕುಟುಂಬಕ್ಕೆ ₹25 ಲಕ್ಷ ನೀಡಬೇಕು ಎಂದರು. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಬೆಳೆ ಹಾಳಾದ ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಸಮೀಕ್ಷೆ ನಡೆಸಿ ನ್ಯಾಯಯುತ ಪರಿಹಾರ ನೀಡಬೇಕು. ರೈತರಿಗೆ ಬೆಳೆಹಾನಿ ಪರಿಹಾರ ನೀಡುವಲ್ಲಿ ವಿಳಂಬ ನೀತಿ ಅನುಸರಿಸಿದರೇ ರಾಜ್ಯಾದ್ಯಂತ ಪ್ರಬಲ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.