ರಾಜ್ಯದ ವಿವಿಧ ವಿವಿಗಳು ಸ್ನಾತಕ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಶೀಘ್ರ ಪ್ರಕಟ ಮಾಡಲು ಎಸ್.ಐ.ಓ ಕರ್ನಾಟಕ ಒತ್ತಾಯ

0
225

ಸನ್ಮಾರ್ಗ ವಾರ್ತೆ

ಬೆಂಗಳೂರು: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಸಂಯೋಜಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಸ್ನಾತಕ ಪದವಿಯ ಅಂತಿಮ ವರ್ಷದ ರೆಗ್ಯುಲರ್ ಮತ್ತು ರಿಪೀಟರ್ ನ ಪರೀಕ್ಷಾ ಫಲಿತಾಂಶ ಇನ್ನೂ ಪ್ರಕಟ ಮಾಡಿಲ್ಲ, ಇದೇ ಸಂದರ್ಭದಲ್ಲಿ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿ.ಇಡಿ ಕೋರ್ಸಿನ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ. ಫಲಿತಾಂಶ ಪ್ರಕಟ ಆಗದೆ ಇರುವುದರಿಂದ ಅನೇಕ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ದಾಖಲಾತಿಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಪರೀಕ್ಷಾ ಫಲಿತಾಂಶವನ್ನು ಶೀಘ್ರ ಪ್ರಕಟ ಮಾಡುವಂತೆ ಎಸ್.ಐ.ಓ ಕರ್ನಾಟಕ ಒತ್ತಾಯಿಸಿದೆ.

2021-22 ನೇ ಶೈಕ್ಷಣಿಕ ಸಾಲಿಗೆ ಎರಡು ವರ್ಷಗಳ ಬಿ.ಇಡಿ(B.Ed) ಕೋರ್ಸಿನ ವ್ಯಾಸಂಗಕ್ಕಾಗಿ ಸರ್ಕಾರಿ ಕೋಟಾದಡಿ ದಾಖಲಾತಿ ಬಯಸುವ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಿದ್ದರು. ಆನ್ಲೈನ್ ನಲ್ಲಿ ಸಲ್ಲಿಕೆಯಾದ ಅರ್ಜಿಯನ್ನು ಪರಿಗಣಿಸಿ, ಮೆರಿಟ್ ನಿಯಮದನ್ವಯ ಸೀಟು ಹಂಚಿಕೆಯಾಗಿದ್ದು, ಅರ್ಹತಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಅನ್ವಯ ಅಭ್ಯರ್ಥಿಗಳು ತಮ್ಮ ಮೂಲ ಪ್ರಮಾಣ ಪತ್ರಗಳ ಪರಿಶೀಲನೆಗಾಗಿ ಜಿಲ್ಲಾ ನೋಡಲ್ ಕೇಂದ್ರ/ವ್ಯವಸ್ಥಾಪಕ ಕೇಂದ್ರಕ್ಕೆ (CTE/DIET) ಹಾಜರಾಗಲು ದಿನಾಂಕವನ್ನು ನಿಗದಿಪಡಿಸಿದೆ.

ಆಯ್ಕೆ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳು ತಮಗೆ ಸೀಟು ಹಂಚಿಕೆಯಾದ ಸಂಸ್ಥೆ/ಕಾಲೇಜಿಗೆ ದಾಖಲಾಗಲು ಇಚ್ಛಿಸುವವರು ತಮ್ಮ ಮೂಲ ದಾಖಲೆಗಳನ್ನು ಹೊಂದಿಕೆ ಮಾಡಿಕೊಳ್ಳಬೇಕಾಗಿದೆ. ಅರ್ಹತಾ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ಪ್ರಮಾಣ ಪತ್ರಗಳ ಪರಿಶೀಲನೆಯು ಡಿಸೆಂಬರ್ 2 ರಿಂದ 10 ನೇ ತಾರೀಖಿನವರೆಗೆ ನಡೆಸಲಾಗುತ್ತಿದೆ.

ಪರಿಶೀಲನೆ ಮತ್ತು ದಾಖಲಾತಿ ಸಂದರ್ಭದಲ್ಲಿ ಸ್ನಾತಕ ಪದವಿಯ ಉತ್ತೀರ್ಣ ಪ್ರಮಾಣ ಪತ್ರವನ್ನು ನೀಡುವುದು ಕಡ್ಡಾಯವಾಗಿದೆ ಹಾಗೂ ವೇಳಾಪಟ್ಟಿ ಯಂತೆ ನಿಗದಿತ ದಿನದಂದು ತಪ್ಪದೇ ಹಾಜರಾಗಲು ತಿಳಿಸಲಾಗಿದೆ. ಈಗಾಗಲೇ ಅನೇಕ ಅಭ್ಯರ್ಥಿಗಳು ಪ್ರಮಾಣ ಪತ್ರ ಪರಿಶೀಲನೆಗೆ ಹಾಜರಾಗಿದ್ದು ಪದವಿಯ ಫಲಿತಾಂಶ ಇಲ್ಲದೆ ಸೀಟು ಹಂಚಿಕೆಯಾಗಿದ್ದರು ದಾಖಲಾತಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಶೀಘ್ರದಲ್ಲೇ ಫಲಿತಾಂಶ ಪ್ರಕಟಿಸದೆ ಇದ್ದರೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಲಭಿಸುವಿಕೆಯಿಂದ ವಂಚಿತರಾಗುವ ಆತಂಕದಲ್ಲಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ ಎಂದು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಹೇಳಿದೆ.

ವಿಶ್ವವಿದ್ಯಾಲಯಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಫಲಿತಾಂಶ ಪ್ರಕಟ ಮಾಡಲು ಸಿದ್ಧತೆ ನಡೆಸಬೇಕೆಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ. ಸರ್ಕಾರಿ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯು ಪರಸ್ಪರ ಸಹಕಾರದ ಮತ್ತು ಹೊಂದಾಣಿಕೆಯ ವ್ಯವಹಾರದ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಎಸ್.ಐ.ಓ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಪೀರ್ ಲಟಗೇರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.