ಮಾರ್ನಮಿಕಟ್ಟೆ ಕೊರಗಜ್ಜ ಗುಡಿ ಅಪವಿತ್ರ ಪ್ರಕರಣ: ಆರೋಪಿ ದೇವದಾಸ್ ದೇಸಾಯಿ ಬಂಧನ

0
279

ಸನ್ಮಾರ್ಗ ವಾರ್ತೆ

ಮಂಗಳೂರು: ಮಾರ್ನಮಿಕಟ್ಟೆ ಕೊರಗಜ್ಜ ಗುಡಿಯಲ್ಲಿ ಬಳಸಿದ ಕಾಂಡೋಮ್ ಇತ್ತು ಅಪವಿತ್ರಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಬಂಧಿಸಿದ್ದು, ಬಂಧಿತ ಆರೋಪಿಯನ್ನು ಕೋಟೇಕಾರು ಕೊಂಡಾಣ ನಿವಾಸಿ ದೇವದಾಸ್ ದೇಸಾಯಿ( 62) ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಮೂಲತ: ಹುಬ್ಬಳ್ಳಿಯ ಉಣ್ಕಲ್ ಎಂಬ ಊರಿನವನಾಗಿದ್ದು, ತಲಪಾಡಿ ಕೆ.ಸಿ. ರೋಡ್ ಬಳಿ ಅಂತೋನಿ ರಾಜ್ ಎಂಬವರ ಮನೆಯನ್ನು ಖರೀದಿ ಮಾಡಿ ಪ್ರಸ್ತುತ ಇದೇ ಮನೆಯಲ್ಲಿ ಒಬ್ಬಂಟಿಯಾಗಿ ವಾಸ ಮಾಡಿಕೊಂಡಿದ್ದಾನೆ. ಸರಿಯಾದ ಕೆಲಸವಿಲ್ಲದೆ ಗುಜರಿ ಪೇಪರ್ ಬಾಕ್ಸ್ ಗಳನ್ನು ಮಾರಿಕೊಂಡು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾನೆ.

ಹಿಂದೂ ಧರ್ಮದಿಂದ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದು, ನನ್ನ ಹೆಂಡತಿ ಹಾಗೂ ಮಗಳು ಹುಬ್ಬಳ್ಳಿಯ ನಮ್ಮ ಮನೆಯಲ್ಲಿದ್ದವರು ಅತ್ತಿಗೆಯ ಜೊತೆಗೆ ಮನಸ್ತಾಪ ಮಾಡಿಕೊಂಡು ಅವಳ ಸ್ವಂತ ಊರಾದ ಚಿಕ್ಕಮಗಳೂರಿಗೆ ಹೋದವರು ನಂತರ ನನ್ನನ್ನೂ ದೂರಮಾಡಿ ಅಲ್ಲಿಯೇ ನೆಲೆಸಿರುತ್ತಾರೆ ಎಂದು ಮಾಹಿತಿ ನೀಡಿದ್ದಾನೆ ಎಂದು ಕಮಿಷನರ್ ತಿಳಿಸಿದ್ದಾರೆ.

ಕೇವಲ ಮಾರ್ನಮಿಕಟ್ಟೆ ಕೊರಗಜ್ಜ ಕಟ್ಟೆ ಅಲ್ಲದೆ, ಬಾಬುಗುಡ್ಡೆ ಕೊರಗಜ್ಜನ ಕಾಣಿಕೆ ಡಬ್ಬಿ, ಕೊಂಡಾಣ ದೈವಸ್ಥಾನ, ಮಂಗಳಾದೇವಿ ದೇವಸ್ಥಾನ, ಕದ್ರಿ ದೇವಸ್ಥಾನದ ಬಳಿಯಲ್ಲಿರುವ ರಿಕ್ಷಾ ಪಾರ್ಕ್ ನ ಬಳಿ ಕಾಣಿಕೆ ಡಬ್ಬಿ, ಕಲ್ಲುರ್ಟಿ ದೈವಸ್ಥಾನ, ಒಮೆಗಾ ಆಸ್ಪತ್ರೆ ಬಳಿ, ಪಂಪ್ ವೆಲ್, ಉಳ್ಳಾಲದ ದರ್ಗಾ ಬಳಿಯ ಮಸೀದಿಯ ಕಾಣಿಕೆ ಡಬ್ಬಿ, ಕಲ್ಲಾಫು ನಾಗನ ಕಟ್ಟೆ, ಕೊಟ್ಟಾರ ಚೌಕಿಯ ಕಲ್ಲುರ್ಟಿ ದೈವಸ್ಥಾನ, ಉರ್ವಾ ಮಾರಿಗುಡಿ ದೇವಸ್ಥಾನದ ಕಾಣಿಕೆ ಡಬ್ಬಿ, ಕುತ್ತಾರು ಕೊರಗಜ್ಜನ ಕಟ್ಟೆ, ಕುಡುಪು ದೈವಸ್ಥಾನ, ಉಳ್ಳಾಲದ ಕೊರಗಜ್ಜನ ಕಾಣಿಕೆ ಡಬ್ಬಿ, ನಂದಿಗುಡ್ಡೆಯ ಕೊರಗಜ್ಜನ ಗುಡಿ, ಎ ಬಿ ಶೆಟ್ಟಿ ವೃತ್ತದ ಬಳಿಯ ದರ್ಗಾ, ಸಿಖ್ ಗುರುದ್ವಾರ ಗುಡಿ- ಬಂಗ್ರ ಕೂಳೂರು, ಕೋಟ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ- ಮಂಕಿಸ್ವಾಂಡ್, ಆದಿ ಮಾಹೇಶ್ವರಿ ದೈವಸ್ಥಾನ ಭಜನಾ ಮಂಡಳಿ ಕಾಣಿಕೆ ಡಬ್ಬಿ- ಜೆಪ್ಪು ಮಹಾಕಾಳಿ ಪಡ್ಪು ಸೇರಿ ಒಟ್ಟು ಹದಿನೆಂಟು ಸ್ಥಳಗಳಲ್ಲಿನ ಕಾಣಿಕೆ ಡಬ್ಬಿಗಳಲ್ಲಿ ಕಾಂಡೋಮ್, ಭಿತ್ತಿಪತ್ರ, ಏಸುವಿನ ಕುರಿತ ಲೇಖನ ಹಾಕಿರುವುದಾಗಿ ತಿಳಿಸಿದ್ದಾನೆ ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.