ಸರಕಾರಿ ಶಾಲೆಯ ಬೀಗ ಮುರಿದು ಪಾರ್ಟಿ ನಡೆಸಿದ ದುಷ್ಕರ್ಮಿಗಳು: ರಾಯಚೂರಿನ ಮಾನ್ವಿ ರಬ್ಬಣಕಲ್ ನಲ್ಲಿ ಘಟನೆ

0
257

ಸನ್ಮಾರ್ಗ ವಾರ್ತೆ

ರಾಯಚೂರು: ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣಕಲ್ ಕ್ಯಾಂಪ್​ನ ಸರಕಾರಿ ಶಾಲೆಯ ಬೀಗ ಮುರಿದು ಹೊಸ ವರ್ಷದ ಮದ್ಯದ ಪಾರ್ಟಿ ನಡೆಸಿರುವ ದುಷ್ಕರ್ಮಿಗಳು, ಶಾಲೆಯ ದಾಖಲಾತಿಗಳ ಮೇಲೆ ಮದ್ಯ ಸುರಿದು ವಿಕೃತಿ ಮೆರೆದಿರುವ ಬಗ್ಗೆ ವರದಿಯಾಗಿದೆ.

ಆರೋಪಿಗಳು ಶಾಲೆಯ ಬಿಸಿಯೂಟ ಸಾಮಾಗ್ರಿಗಳನ್ನ ಬಳಸಿ ಮೊಟ್ಟೆ, ಮಾಂಸ ಬೇಯಿಸಿ ಪಾರ್ಟಿ ಮಾಡಿದ್ದಲ್ಲದೇ, ಬಳಸಿದ ವಸ್ತುಗಳನ್ನ ಎಲ್ಲೆಂದರಲ್ಲಿ ಬಿಸಾಡಿದ್ದಾರೆ. ಶಾಲೆಯ ದಾಖಲಾತಿಗಳ ಮೇಲೆ ಮದ್ಯ ಸುರಿದು ವಿಕೃತಿ ಮೆರೆದಿದ್ದು, ಈ ಬಗ್ಗೆ ಮುಖ್ಯೋಪಾಧ್ಯಾಯರು ಮಾನ್ವಿ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.

ಶಾಲಾ ಅಡುಗೆ ಕೋಣೆಯಲ್ಲಿದ್ದ ಮೊಟ್ಟೆ, ಹಾಲಿನಪುಡಿ, ಅಕ್ಕಿ, ಸಕ್ಕರೆ ಅಡುಗೆ ಬಳಸುವ ಎಣ್ಣೆ ಇನ್ನಿತರ ವಸ್ತುಗಳು ಕಳ್ಳತನವಾಗಿವೆ. ಮಕ್ಕಳಿಗಾಗಿ ನೀಡಲಾಗುತ್ತಿದ್ದ ಆಹಾರ ಪರಿಕರಗಳು ಕಳ್ಳತನವಾಗಿವೆ. ಶಾಲೆಯ ಆವರಣದಲ್ಲಿ ಮದ್ಯದ ಬಾಟಲ್​ಗಳು, ಮಾಂಸದ ತುಂಡುಗಳು ಪತ್ತೆಯಾಗಿವೆ. ಇಂದು ಬೆಳಿಗ್ಗೆ ಶಾಲೆಯನ್ನು ತೆರೆಯಲು ಮುಖ್ಯೋಪಾಧ್ಯಾಯರು ಬಂದಾಗ ಕಿಡಿಗೇಡಿಗಳು ಪಾರ್ಟಿ ಮಾಡಿರುವುದು ಬೆಳಕಿಗೆ ಬಂದಿದೆ. ಘಟನೆಯ ಸಂಬಂಧ ಮಾನ್ವಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.