ನಗರದಲ್ಲಿದ್ದೂ ಹಳ್ಳಿಯ ಜೀವನದ ಸೊಗಡು ಕಲಿಸಿದ ಕಾಲೇಜು ಜೀವನ ಮರೆಯಲಸಾಧ್ಯ

0
569

ಸನ್ಮಾರ್ಗ ಲೇಖನ

ಉಮಾಶ್ರೀ ರೈ ಕೆ.

ವಿದ್ಯಾರ್ಥಿ ಜೀವನದ ಹಾಗು ಹೋಗುಗಳಲ್ಲಿ ಸಿಗುವ ಸಿಹಿಕಹಿ ನೆನಪುಗಳು ಕೆಲವೊಂದು ಜೀವನ ಪೂರ್ತಿ ಮರೆಯಲಾಗದಂತೆ ಉಳಿದು ಬಿಡುತ್ತದೆ. ಸಹಪಾಠಿಗಳೊಂದಿಗಿನ ಒಡನಾಟ, ಶಿಕ್ಷಕರಿಂದ ಕಲಿವ ಶಿಸ್ತು, ಅವರು ಮಾಡುವ ಪಾಠ, ಕಾಳಜಿ, ತೋರಿಸುವ ಪ್ರೀತಿ, ನೀಡುವ ಶಿಕ್ಷೆ ಎಲ್ಲವೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಬದುಕಲ್ಲಿ ಪರಿಣಾಮ ಬೀರುತ್ತದೆ. ಹೈಸ್ಕೂಲ್ ಜೀವನವೇ ಕೊನೆ ಎಂದು ಬಾಲ್ಯದಲ್ಲಿ ಅಂದುಕೊಂಡಿದ್ದು ಸುಳ್ಳಲ್ಲ. ಆದರೆ ವಿದ್ಯಾಭ್ಯಾಸದ ಒಂದೊಂದೆ ಮೆಟ್ಟಿಲುಗಳನ್ನೇರಿದ ಮೇಲೆ ಕಲಿಯುವುದು ಇನ್ನೂ ಇದೆ ಎನ್ನುವ ಸತ್ಯದ ಅರಿವಾಗಿತ್ತು. ಕಲಿತಷ್ಟು ಮುಗಿಯದೆ ಇರುವುದೆ ವಿಧ್ಯಾಬ್ಯಾಸ.

ನನ್ನ ಜೀವನದ ಒಂದು ಮರೆಯಲಾಗದ ಮೈಲಿಗಲ್ಲು ಎಂದರೆ ಸ್ನಾತಕೋತ್ತರ ಪದವಿಯ ದಿನಗಳು. ನನ್ನ ವಿದ್ಯಾರ್ಥಿ ಜೀವನ ಒಂದರಿಂದ ಹತ್ತನೇ ತರಗತಿ, ಪಿಯುಸಿ ಪದವಿಯು ಹಳ್ಳಿಯ ನಮ್ಮೂರಿನ ಕೆಲವು ಶಾಲೆ, ಕಾಲೇಜುಗಳಲ್ಲಿ ಮುಗಿದಿತ್ತು. ಮುಂದೆ ಓದಬೇಕೆಂಬ ಹಂಬಲ, ಹೆತ್ತವರ ಪ್ರೋತ್ಸಾಹದಿಂದ, ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದೆ. ಎಂ.ಎ (ಅರ್ಥಶಾಸ್ತ್ರ) ಪದವಿಯು ಎರಡು ವರ್ಷಗಳ ಅನುಭವದಲ್ಲಿ ಜೀವನ ರೂಪಿಸಿಕೊಳ್ಳಲು ಸಾಕಷ್ಟು ಕಲಿತೆ. ಹಳ್ಳಿಯಲ್ಲಿದ್ದವಳಿಗೆ ಸಿಟಿಯ ಜೀವನದ ಅರಿವಾಯಿತು. ಹೆತ್ತವರನ್ನೇ ಎಲ್ಲದಕ್ಕೂ ಅವಲಂಬಿಸುತ್ತಿದ್ದ ನನಗೆ ಮನೆಯಿಂದ ದೂರವಿದ್ದು ಬದುಕುವ ರೀತಿ ಕಲಿತುಕೊಂಡೆ. ಹಾಸ್ಟೆಲ್‌ನಲ್ಲಿದ್ದುಕೊಂಡಿದ್ದ ನಾನು ಹೊಸ ಜನರೊಂದಿಗೆ ಹೊಂದಾಣಿಕೆಯಿಂದಿರುವುದು ಕಲಿತೆ.

ಕಾಲೇಜಿನ ಮೊದಲ ದಿನಗಳಲ್ಲಿ ಹೊಸ ವಾತಾವರಣ, ಹೊಸ ಮುಖಗಳು, ಎಲ್ಲವೂ ಹೊಸತು ಆದ ಕಾರಣ ಸ್ವಲ್ಪ ಹೊಂದಿಕೊಳ್ಳಲು ಸ್ವಲ್ಪ ಕಷ್ಟವೇ ಆಯ್ತು. ದಿನಕಳೆದಂತೆ ಎಲ್ಲರೂ ಪರಿಚಯದ ಜೊತೆಗೆ ಕೆಲವು ಸ್ನೇಹಿತರನ್ನು ಗಳಿಸಿಕೊಂಡೆ. ಕಾಲೇಜು ದಿನಗಳಲ್ಲಿ ವರ್ಷಕ್ಕೆ ಒಂದು ಬಾರಿ ನಡೆಯುತ್ತಿದ್ದ ರೂರಲ್ ಎಕ್ಸ್ಪೊಷರ್ ಪ್ರೊಗ್ರಾಮ್ ಅಂದರೆ ಹಳ್ಳಿ ಪ್ರದೇಶಗಳಿಗೆ ತೆರಳಿ ಅಲ್ಲಿ ಅವರೊಂದಿಗೆ 5 ದಿನಗಳಿದ್ದು ಅವರ ಜೀವನ ಶೈಲಿಗೆ ಹೊಂದಿಕೊಂಡು ಅವರಲ್ಲಿ ಒಬ್ಬರಾಗಿ ಕಳೆದ ದಿನಗಳು ಎಂದೂ ಮರೆಯಲು ಅಸಾಧ್ಯ.

ನಮಗೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಎಲ್ಲೂರು ಎಂಬ ಪುಟ್ಟ ಹಳ್ಳಿಯಲ್ಲಿ ಕಳೆದ 5 ದಿನಗಳ ಅನುಭವದಿಂದ ಸಾಕಷ್ಟು ಕಲಿತೆ. ಆ ಹಳ್ಳಿಗೆ ಸರಕಾರದಿಂದ ಸಿಗುವ ಹೆಚ್ಚಿನ ಸೌಲಭ್ಯಗಳು ದೊರೆಯದೆ, ವಿದ್ಯುತ್ ಇಲ್ಲದ, ಮನೆಯಲ್ಲಿ ಟಿ.ವಿ ಇಲ್ಲದೆ ಇರುವಂತಹ ಹಲವು ಮನೆಗಳಿದ್ದವು. ಅವರೊಂದಿಗೆ ಇದ್ದು ಅವರ ಜೀವನಶೈಲಿಗೆ, ಹಳ್ಳಿಯ ಸೊಗಡು, ಅವರ ಕಠಿಣ ಜೀವನ ಶೈಲಿ ಎಲ್ಲವೂ ಹೊಸ ಅನುಭವ ಹೊಂದಿಕೊಂಡು ಬದುಕಿದ ಕೆಲವೇ ದಿನಗಳಾದರೂ ಅದು ಸವಿ ಸವಿ ನೆನಪಾಗಿಯೇ ಉಳಿದಿದೆ. ಗ್ರಾಮೀಣ ಪ್ರದೇಶದ ನೆನಪು ಅವಿಸ್ಮರಣೀಯವಾಗಿತ್ತು. ಹಳ್ಳಿಯ ಬೀದಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಗರದಲ್ಲಿದ್ದೂ ಹಳ್ಳಿಯ ಜೀವನದ ಸೊಗಡು ಕಲಿಸಿದ ಕಾಲೇಜು ಜೀವನ ಮರೆಯಲಸಾಧ್ಯ.

ನನ್ನ ಕಾಲೇಜು ಜೀವನದಲ್ಲಿ ನಾನು ಇಷ್ಟಪಟ್ಟ ಇನ್ನೊಂದು ವಿಷಯವೆಂದರೆ ಟಾಲೆಂಟ್ಸ್ ಡೇ, ಅಂದರೆ ನಮ್ಮ ಅಲೋಶಿಯಸ್ ಕಾಲೇಜಿನಲ್ಲಿ ಅನೇಕ ವಿಭಾಗಗಳಿವೆ. ಪ್ರತಿಯೊಂದು ವಿಭಾಗದ ವಿದ್ಯಾರ್ಥಿಗಳು ಅವರವರ ಪ್ರತಿಭೆಯನ್ನು ಪ್ರದರ್ಶಿಸಲು ಇದು ಒಂದು ಉತ್ತಮ ವೇದಿಕೆ ಅಂತ ಹೇಳಬಹುದು. ಇದು ಪ್ರತೀ ವರ್ಷ ಎರಡು ದಿನಗಳ ಕಾಲ ನಡೆಯುತ್ತದೆ. ಪ್ರತಿಯೊಬ್ಬರು ಕಡ್ಡಾಯವಾಗಿ ಭಾಗವಹಿಸಬೇಕಾದ ಕಾರಣ ಅದು ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಭವಿಷ್ಯಕ್ಕೆ ಸಹಾಯ ಮಾಡುತ್ತದೆ.

ನನ್ನ ಕಾಲೇಜು ಜೀವನದಲ್ಲಿ ಎರಡು ವರ್ಷಗಳಲ್ಲಿ ನಾನು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದೇನೆ. ಅವು ನನ್ನ ಗ್ರೇಡ್‌ಗಳಾಗಿರಬಹುದು, ಪಾಠವನ್ನು ಅರ್ಥಮಾಡಿಕೊಳ್ಳುವ ವಿಷಯದಲ್ಲಿ ಆಗಿರಬಹುದು ಅಥವಾ ಹೊಸ ಪರಿಸರ ಮತ್ತು ಸ್ನೇಹಿತರೊಂದಿಗೆ ಹೊಂದಾಣಿಕೆಯ ವಿಷಯದಲ್ಲಿ ಆಗಿರಬಹುದು, ಸೆಮಿನಾರ್ ಪೇಪರ್‌ಗಳನ್ನು ಪ್ರಸ್ತುತ ಪಡಿಸುವುದು, ಹಾಗೇಯೇ ಸೆಮಿಸ್ಟರ್ ಪರೀಕ್ಷೆಗಳಿಗೆ ಒತ್ತಡಕ್ಕೊಳಗಾಗುವಂತಹ ಸಮಸ್ಯೆಗಳನ್ನು ಕೂಡ ಎದುರಿಸಿದ್ದುಂಟು.
ಸ್ನೇಹಿತರೊಂದಿಗೆ ಸಮಯ ಕಳೆಯುವುದು ಕ್ಯಾಂಟಿನ್ ಆಹಾರವನ್ನು ಆನಂದಿಸುವುದು ಅದರಲ್ಲೂ ಮಧ್ಯಾಹ್ನದ ಆಹಾರ (ಮಿಡ್ಡೆ ಮೀಲ್) ಸ್ನೇಹಿತರೊಂದಿಗೆ ಸವಿಯುವುದು ಸುಮಧುರ ನೆನಪು. ಎಷ್ಟೋ ಬಾರಿ ನಾನು ನಾನು ಟಿಫಿನ್ ಮರೆತದ್ದು ಉಂಟು. ನಾನು ಟಿಫಿನ್ ಮರೆತರೂ ಸ್ನೇಹಿತರು ಹೊಟ್ಟೆ ಹಸಿವಿನಿಂದ ಕೂರಲು ಬಿಡುತ್ತಿರಲಿಲ್ಲ. ಅವರ ತಟ್ಟೆಯಿಂದ ಹಂಚಿ ತಿಂದದ್ದು, ಸ್ನೇಹಿತೆರೊಂದಿಗಿನ ಕೈ ತುತ್ತು ತಿಂದದ್ದು, ಸ್ನೇಹಿತರೊಂದಿಗೆ ಸಮಯ ಕಳೆದದ್ದು, ಕೆಲವೊಮ್ಮೆ ತರಗತಿಗಳು ಮತ್ತು ಉಪಾನ್ಯಾಸಗಳನ್ನು ಬಂಕ್ ಮಾಡುವುದು, ಸಿಲ್ಲಿ ಪ್ರಶ್ನೆಗಳ ಬಗ್ಗೆ ಸ್ನೇಹಿತರೊಂದಿಗೆ ಚರ್ಚಿಸುವುದು, ತಂಡವಾಗಿ ಸ್ನೇಹಿತರೊಂದಿಗೆ ಕೆಲಸ ಮಾಡುವುದು ಮತ್ತು ನೀಡಿದ ಚಟುವಟಿಕೆಗಳಲ್ಲಿ ಗೆಲ್ಲುವುದು ಅದ್ಭುತ ಅನುಭವ.

ದಿನಗಳು ಕಳೆದದ್ದೆ ತಿಳಿಯಲಿಲ್ಲ. ಎರಡು ವರ್ಷದ ಹಾಸ್ಟೆಲ್ ಜೀವನ, ಎಂ.ಎ ಪದವಿಯ ಅನುಭವ ಜೀವನದುದ್ದಕ್ಕೂ ನೆನಪಿಟ್ಟುಕೊಳ್ಳುವಂತೆ ಮಾಡಿತ್ತು. ಪದವಿಯ ಕೊನೆಯ ದಿನಗಳಲ್ಲಿ ಆತ್ಮೀಯ ಸ್ನೇಹಿತರನ್ನು, ನೆಚ್ಚಿನ ಉಪನ್ಯಾಸಕರನ್ನು ಬೀಳ್ಕೊಡುವ ಸಂದರ್ಭದಲ್ಲಿ ನಿಜಕ್ಕೂ ಕಣ್ಣಂಚು ತೇವಗೊಂಡಿತು. ಮತ್ತೆಂದು ಭೇಟಿಯಾಗುವೆನೋ? ಇಷ್ಟು ಬೇಗ ಕಾಲೇಜು ದಿನಗಳು ಯಾಕಾದರೂ ಮುಗಿದು ಹೋಯಿತು ಎಂದೆನಿಸಿದ್ದು ಸುಳ್ಳಲ್ಲ. ಸ್ನಾತಕೋತ್ತರ ಪದವಿಯ ನನ್ನ ಸಿಹಿಕಹಿ ಅನುಭವಗಳು ಎಂದಿಗೂ ಮರೆಯಲು ಅಸಾಧ್ಯ. ಪ್ರತಿಯೊಬ್ಬರ ಜೀವನದಲ್ಲೂ ಮರೆಯಲಾಗದ ನೆನಪುಗಳಿರುತ್ತವೆ. ನನ್ನ ವಿದ್ಯಾರ್ಥಿ ಜೀವನ ಘಟ್ಟದಲ್ಲಿ ಅನುಭವಿಸಿದ ಈ ದಿನಗಳು ಜೀವನ ಪರ್ಯಂತ ಹಸಿರಾಗಿ ಮನದಲ್ಲಿ ಅಚ್ಚಳಿಯದಂತೆ ಉಳಿಯುತ್ತದೆ.

ಉಮಾಶ್ರೀ ರೈ ಕೆ.
ಸಂತ ಅಲೋಶಿಯಸ್‌ ಬಿ.ಎಡ್ ಕಾಲೇಜು,  ಮಂಗಳೂರು