ಪರಿಸರದ ಮೇಲೆ ವಿವಿಧ ಹಬ್ಬಗಳ ಹಾನಿಕಾರಕ ಪರಿಣಾಮ

0
3

✍️ ಅರುಣ್ ಕುಮಾರ್ ನಾಡಾರ್
ಸಹಾಯಕ ಪ್ರಾಧ್ಯಾಪಕರು ಮತ್ತು ಪಿಎಚ್‌ಡಿ ಸಂಶೋಧನಾ ವಿದ್ವಾಂಸರು, ಮುಂಬಯಿ 

ವೇಗದ ನಗರೀಕರಣದ ಹಿನ್ನೆಲೆಯಲ್ಲಿ ಮಾಲಿನ್ಯವು ವಾಯು, ಜಲ ಅಥವಾ ಭೂಮಿಯ ಭೌತಿಕ, ಜೈವಿಕ ಮತ್ತು ರಾಸಾಯನಿಕ ಲಕ್ಷಣಗಳನ್ನು ಬದಲಾಯಿಸುತ್ತಾ, ಜೀವಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಮಾಲಿನ್ಯವು ಗಮನಹರಿಸಲೇಬೇಕಾದ ಅತ್ಯಂತ ನಿರ್ಣಾಯಕ ಸಮಸ್ಯೆಯಾಗಿದೆ. ಹಬ್ಬಗಳ ಸಂದರ್ಭದಲ್ಲಿ ಮಾಲಿನ್ಯವು ಹೆಚ್ಚಿನ ಪಾತ್ರ ವಹಿಸುತ್ತದೆ. ಮಾಲಿನ್ಯಕಾರಕಗಳು ನೈಸರ್ಗಿಕ ಸಂಪನ್ಮೂಲಗಳ ಕ್ಷೀಣಿಸುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿ, ಪರಿಸರಕ್ಕೆ ಹಾನಿ ಉಂಟುಮಾಡುತ್ತವೆ.

ಭಾರತದಲ್ಲಿ, ಮುಂಗಾರು ಮುಗಿದ ಕೂಡಲೇ ಹಬ್ಬಗಳ ಋತು ಪ್ರಾರಂಭವಾಗುತ್ತದೆ. ಇದು ದೀಪಾವಳಿ, ಗಣೇಶ ಚತುರ್ಥಿ, ಹೋಳಿ ಮತ್ತು ದುರ್ಗಾ ಪೂಜೆ ಇತ್ಯಾದಿಗಳೊಂದಿಗೆ ಶುರುವಾಗುತ್ತದೆ. ಈ ಹಬ್ಬಗಳ ಅವಧಿಯಲ್ಲಿ, ಹೆಚ್ಚಿನ ಪ್ರಮಾಣದ ಮಾಲಿನ್ಯಕಾರಕಗಳು ಮತ್ತು ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದು ಒಳಚರಂಡಿಗಳು ಮತ್ತು ಜಲಮೂಲಗಳಲ್ಲಿ ವಿಲೇವಾರಿಯಾಗಿ ಜಲಚರ ಪ್ರಭೇದಗಳು ಮತ್ತು ನೀರಿನ ಗುಣಮಟ್ಟದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ದೀಪಾವಳಿಯಂತಹ ಹಬ್ಬಗಳಲ್ಲಿ, ಪಟಾಕಿಗಳನ್ನು ಸುಡಲಾಗುತ್ತದೆ, ಇದು ಗಾಳಿಯನ್ನು ಕಲುಷಿತಗೊಳಿಸುವ ಹಾನಿಕಾರಕ ಅನಿಲಗಳನ್ನು ಬಿಡುಗಡೆ ಮಾಡುತ್ತದೆ. ಪಟಾಕಿಗಳ ಗನ್‌ಪೌಡರ್ ಸಹ ನೀರನ್ನು ಸೇರಿ ಅದರ ಗುಣಮಟ್ಟವನ್ನು ಕುಂದಿಸುತ್ತದೆ. ಇದು ಘನ ಕಾಗದದ ತ್ಯಾಜ್ಯವನ್ನೂ ಉಳಿಸುತ್ತದೆ. ನಿಧಾನಗತಿಯ ಅಥವಾ ಅಸಮರ್ಪಕ ಕಸ ಸಂಗ್ರಹಣೆಯಿಂದಾಗಿ ಇದು ರಸ್ತೆಗಳಲ್ಲಿಯೇ ಉಳಿಯುತ್ತದೆ. 

ಜಲಮಾಲಿನ್ಯ

ಭಾರತದಲ್ಲಿ ಸುರಕ್ಷಿತ, ಶುದ್ಧ ಕುಡಿಯುವ ನೀರಿನ ಕೊರತೆ ಇದೆ. ಗಣೇಶ ಚತುರ್ಥಿಯಂತಹ ಹಬ್ಬಗಳ ಸಂದರ್ಭದಲ್ಲಿ ಭಾರತೀಯ ನಾಗರಿಕರು ಜಲಮಾಲಿನ್ಯದ ಕುರಿತು ನಿರ್ಲಕ್ಷ್ಯ ಧೋರಣೆ ತೋರುತ್ತಾರೆ. ಗಣೇಶ ಮೂರ್ತಿಗಳಿಗೆ ಸೀಸ ಮತ್ತು ಪಾದರಸದಂತಹ ಭಾರಲೋಹಗಳನ್ನು ಒಳಗೊಂಡಿರುವ ಹಾನಿಕಾರಕ ಮತ್ತು ವಿಷಕಾರಿ ಬಣ್ಣಗಳನ್ನು ಲೇಪಿಸಿ ಅಲಂಕರಿಸಲಾಗುತ್ತದೆ. ನೀರಿನೊಂದಿಗೆ ಬೆರೆತಾಗ, ಈ ಅಪಾಯಕಾರಿ ಲೋಹಗಳು ನೀರಿನ ಆಮ್ಲೀಯತೆಯನ್ನು ಹೆಚ್ಚಿಸುತ್ತವೆ, ಇದು ಪರಿಸರ, ಜಲಚರ ಜೀವಿಗಳು ಮತ್ತು ಮಾನುಷ್ಯರಿಗೆ ಅತ್ಯಂತ ಹಾನಿಕಾರಕವಾಗಿದೆ. ಇದು ಮನುಷ್ಯರಲ್ಲಿ ಚರ್ಮದ ಕಾಯಿಲೆಗೆ ಕಾರಣವಾಗುತ್ತದೆ. ಮುಂಬೈನಲ್ಲಿ ಪ್ರತಿ ವರ್ಷ 1.5 ಲಕ್ಷ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ, ಆದರೆ ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯ ಅವಧಿಯಲ್ಲಿ 50,000 ಜನರು ಗಂಗಾ ನದಿಯಲ್ಲಿ ಮೂರ್ತಿಗಳನ್ನು ವಿಸರ್ಜಿಸುತ್ತಾರೆ. ವಿಸರ್ಜನೆಗೆ ಪೂರ್ವ ಮತ್ತು ನಂತರದ ನೀರನ್ನು ಅವಲೋಕಿಸಿ ಹೋಲಿಸಿದಾಗ, ವಿಸರ್ಜನೆಯ ವಾಸ್ತವ ಸ್ಥಿತಿ ಸ್ಪಷ್ಟವಾಗುತ್ತದೆ. ಆರ್ಸೆನಿಕ್, ಪಾದರಸ ಮತ್ತು ಸೀಸದಂತಹ ಭಾರಲೋಹಗಳ ಅಧಿಕ ಪ್ರಮಾಣವಿತ್ತು ಎಂಬುದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಸೀಸ ಮತ್ತು ಪಾದರಸದಂತಹ ಲೋಹಗಳು ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದು, ಯಕೃತ್ತು, ಮೂತ್ರಪಿಂಡಗಳು, ಹೃದಯ, ರಕ್ತಪರಿಚಲನಾ ವ್ಯವಸ್ಥೆ ಮತ್ತು ಕೇಂದ್ರ ನರಮಂಡಲಕ್ಕೆ ಹಾನಿ ಉಂಟುಮಾಡಬಲ್ಲವು.

ವಾಯು ಮಾಲಿನ್ಯ

ವೇಗದ ನಗರೀಕರಣ ಮತ್ತು ಕ್ಷೀಣಿಸುತ್ತಿರುವ ಸಂಪನ್ಮೂಲಗಳ ಹೆಚ್ಚುತ್ತಿರುವ ಬಳಕೆಯಿಂದಾಗಿ ವಾಯು ಮಾಲಿನ್ಯವು ಅತ್ಯಂತ ಗಂಭೀರ ಸವಾಲಾಗಿದೆ. ಧೂಳು, ಹೊಗೆ, ದೂಮ ಮತ್ತು ಅನಿಲಗಳಲ್ಲಿ ತೇಲುವ ಕಣಗಳು (ರೆಸ್ಪಿರೇಬಲ್ ಸಸ್ಪೆಂಡೆಡ್ ಪರ್ಟಿಕ್ಯುಲೇಟ್ ಮ್ಯಾಟರ್) ಎಂಬ ಸೂಕ್ಷ್ಮ ಕಣಗಳಿವೆ, ಇವು ಅನೇಕ ಪ್ರಮುಖ ನಗರ ಪ್ರದೇಶಗಳಲ್ಲಿ ಸುರಕ್ಷಿತ ಮಿತಿಯ ಮಟ್ಟಕ್ಕಿಂತ ಸಾಕಷ್ಟು ಹೆಚ್ಚಿವೆ. ಹಬ್ಬಗಳ ಅವಧಿಯಲ್ಲಿ ಈ ಕಣಗಳ ಮಟ್ಟವು ಗರಿಷ್ಠ ಮಟ್ಟದಲ್ಲಿ ಕಂಡುಬರುತ್ತದೆ. ದಸರಾ ಸಂದರ್ಭದಲ್ಲಿ ರಾವಣನನ್ನು ಸುಡುವುದರಿಂದ ಉಂಟಾಗುವ ಹೊಗೆಯೂ ವಾಯು ಮಾಲಿನ್ಯವನ್ನು ಹೆಚ್ಚಿಸುತ್ತದೆ. ಸಲ್ಫರ್ ಆಕ್ಸೈಡ್‌ಗಳು, ಹೈಡ್ರೋಕಾರ್ಬನ್‌ಗಳು, ಆಮ್ಲೀಯ ಅನಿಲಗಳು, ಕಾರ್ಬನ್ ಸಂಯುಕ್ತಗಳ ಆಕ್ಸೈಡ್‌ಗಳು ಇತ್ಯಾದಿಗಳು ಪ್ರಬಲ ವಿಷಕಾರಿ ಅಂಶಗಳಾಗಿವೆ. ದೀಪಾವಳಿ ಹಬ್ಬದ ಅವಧಿಯಲ್ಲಿ ಸುಡುವ ಪಟಾಕಿಗಳನ್ನು ಸೋಡಿಯಂ ನೈಟ್ರೇಟ್, ಸಲ್ಫೇಟ್, ಬೇರಿಯಂ ಸಲ್ಫರ್ ಮತ್ತು ಪೊಟ್ಯಾಸಿಯಮ್ ಕ್ಲೋರೇಟ್ ಬಳಸಿ ತಯಾರಿಸಲಾಗುತ್ತದೆ. ಈ ಪಟಾಕಿಗಳನ್ನು ಸುಟ್ಟಾಗ, ಅವು ನೈಟ್ರೋಜನ್ ಆಕ್ಸೈಡ್‌ಗಳು, ಭಾರಲೋಹಗಳು, ಸಲ್ಫರ್ ಡೈಆಕ್ಸೈಡ್ ಮತ್ತು ವಾಯು ಮಾಲಿನ್ಯವನ್ನು ಉಂಟುಮಾಡುವ ಕಣಗಳಂತಹ ಹಾನಿಕಾರಕ ಅನಿಲಗಳನ್ನು ಹೊರಸೂಸುತ್ತವೆ. ಇದು ಕಣ್ಣುಗಳಲ್ಲಿ ಕಿರಿಕಿರಿ ಉಂಟುಮಾಡುತ್ತದೆ, ಉಸಿರಾಟದ ತೊಂದರೆಗಳು ಮತ್ತು ಅಲರ್ಜಿಗಳಿಗೆ ಕಾರಣವಾಗುತ್ತದೆ. ಹೊಳೆಯುವ ಮತ್ತು ಮಿನುಗುವ ಗನ್‌ಪೌಡರ್ ರಾಸಾಯನಿಕಗಳನ್ನು ಆಮ್ಲಗಳು, ಮೈಕಾ ಮತ್ತು ಗಾಜಿನ ಚೂರುಗಳ ಕ್ಷಾರಗಳಂತಹ ಅಗ್ಗದ ವಸ್ತುಗಳಿಂದ ತಯಾರಿಸಲಾಗುತ್ತದೆ, ಇವು ಕಿರಿಕಿರಿ, ತುರಿಕೆ ಮತ್ತು ತರಚುವಿಕೆಯಂತಹ ಚರ್ಮ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡುತ್ತವೆ ಹಾಗೂ ಉಸಿರಾಟದ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳ ಕ್ಯಾನ್ಸರ್‌ಗೂ ಕಾರಣವಾಗಬಹುದು.

ಉಪಸಂಹಾರ:

ದುರ್ಗಾ ಪೂಜೆ, ಗಣೇಶ ಚತುರ್ಥಿ, ದೀಪಾವಳಿ ಹಾಗೂ ಹೋಳಿಯಂತಹ ಹಬ್ಬಗಳು ಅಪಾರ ಮಾಲಿನ್ಯಕ್ಕೆ ಎಡೆಮಾಡಿಕೊಟ್ಟರೂ, ಅವುಗಳನ್ನು ಹರ್ಷದಿಂದಲೇ ಸಂಭ್ರಮಿಸಬೇಕು. ಸರಳವಾದ ಕ್ರಮಗಳು ಈ ಸಂಭ್ರಮಗಳನ್ನು ಇನ್ನಷ್ಟು ಪ್ರಕೃತಿಗೆ ಹತ್ತಿರವಾಗಿಸಿ, ಮಾನವೀಯ ನೆಲೆಯಲ್ಲಿ ಬೆಸೆಯಬಲ್ಲವು. ವಿಷಕಾರಿ ಮೂರ್ತಿಗಳನ್ನು ಬಳಸುವುದನ್ನು ಇಲ್ಲವೇ ಖರೀದಿ ಮಾಡುವುದನ್ನು ಮತ್ತು ಹಾನಿಕಾರಕ ಪಟಾಕಿಗಳನ್ನು ಸಿಡಿಸುವುದನ್ನು ನಿಲ್ಲಿಸುವಂತೆ ಸರ್ಕಾರವು ಜನಸಾಮಾನ್ಯರಿಗೆ ಕಟ್ಟುನಿಟ್ಟಿನ ಎಚ್ಚರಿಕೆಗಳನ್ನು ನೀಡುತ್ತಿದೆ. ಕೈಗೊಂಡಿರುವ ಕ್ರಮಗಳ ಒಂದು ಭಾಗವಾಗಿ ವಿಷಕಾರಿ ಮೂರ್ತಿಗಳ ಸ್ಥಾನದಲ್ಲಿ ಕಲ್ಲಿನ ಮೂರ್ತಿಗಳನ್ನು ತರಲಾಗುತ್ತಿದೆ.

  • ಜೈವಿಕವಾಗಿ ಕರಗಬಲ್ಲ ಮೂರ್ತಿಗಳನ್ನು ಮಾತ್ರ ವಿಸರ್ಜಿಸುವುದು.
  • ಹಾನಿಕಾರಕ ಬಣ್ಣಗಳನ್ನು ಒಳಗೊಂಡ ಮೂರ್ತಿಗಳ ನಿರ್ಮಾಣ ಮತ್ತು ಖರೀದಿಯನ್ನು ನಿಷೇಧಿಸುವುದು.
  • ಗಿಡಕ್ಕೆ ಪ್ರತಿದಿನ ನೀರೆರೆದಂತೆ ಮೂರ್ತಿಯು ಕರಗಲು ಕುಂಡದ ಸಸಿಗಳ ಮೇಲೆ ಮೂರ್ತಿಗಳನ್ನು ಇರಿಸುವುದು.
  • ಪೂಜಾ ಕೈಂಕರ್ಯಕ್ಕೆ ಹೂವುಗಳು ಹಾಗೂ ಇತರ ಜೈವಿಕವಾಗಿ ಕರಗಬಲ್ಲ ವಸ್ತುಗಳನ್ನು ಬಳಸಿಕೊಳ್ಳಬಹುದು.
  • ಹಾನಿಕಾರಕ ಸಂಶ್ಲೇಷಿತ ಸಂಯುಕ್ತಗಳನ್ನು ಹೊಂದಿರುವ ವಸ್ತುಗಳನ್ನು ಪೂರ್ಣವಾಗಿ ಬಳಸದಿರುವುದು ಸೂಕ್ತ.

ಇಪ್ಪತ್ತೊಂದನೇ ಶತಮಾನದ ರಭಸದ ನಗರೀಕರಣದ ನಡುವೆ, ಸಾಂಪ್ರದಾಯಿಕ ಪದ್ಧತಿಗಳ ಜಾಗದಲ್ಲಿ ಹೊಸ ಹಾಗೂ ಹೆಚ್ಚು ಸುರಕ್ಷಿತ ವಿಧಾನಗಳನ್ನು ತರುವ ಮೂಲಕ ಮಾಲಿನ್ಯವನ್ನು ತಗ್ಗಿಸಬಹುದಾದರೂ, ಮಾಲಿನ್ಯವನ್ನು ಮೂಲೋತ್ಪಾಟನೆ ಮಾಡುವುದು ಸವಾಲಿನ ಮಾತೇ ಸರಿ. ಜನಜಾಗೃತಿ ಮೂಡಿಸುವಲ್ಲಿ ಮತ್ತು ಹಾನಿಕಾರಕ ವಸ್ತುಗಳನ್ನು ನಿಷೇಧಿಸುವಲ್ಲಿ ಸರ್ಕಾರವು ಕ್ರಿಯಾಶೀಲ ಪಾತ್ರವನ್ನು ವಹಿಸಬೇಕು. ಒಂದು ಲೀಟರ್ ಕಲುಷಿತ ನೀರು ಎಂಟು ಲೀಟರ್ ಶುದ್ಧ ನೀರನ್ನೂ ಮಲಿನಗೊಳಿಸಬಲ್ಲದು; ಇದು ಮುಂದಿನ ದಿನಗಳಲ್ಲಿ ನೀರಿನ ಅಭಾವಕ್ಕೆ ಕಾರಣವಾಗುತ್ತದೆ. ಆದುದರಿಂದ, ಈಗಿನಿಂದಲೇ ದೃಢವಾದ ಜನಮತದ ಬೆಂಬಲದೊಂದಿಗೆ ಉತ್ತಮ ಆಚರಣೆಗಳ ಚೌಕಟ್ಟನ್ನು ರೂಪಿಸುವುದು ಅತ್ಯಂತ ಒಳಿತು. ಕೊನೆಗೂ, ತನ್ನ ಸುತ್ತಲಿನ ಪರಿಸರವನ್ನು ನಿರ್ಮಲವಾಗಿಯೂ ಸ್ವಸ್ಥವಾಗಿಯೂ ಕಾಯ್ದುಕೊಳ್ಳುವಲ್ಲಿ ಸಮಾಜದ ಪಾತ್ರ ಅತ್ಯಮೂಲ್ಯವಾದದ್ದು.

ಕೃಪೆ: linkedin.com