ಮಂಗಳೂರು: ಜಮೀಯ್ಯತುಲ್ ಫಲಾಹ್ ನಿಂದ ಫಾದರ್ ಮುಲ್ಲರ್ ಅಸ್ಪತ್ರೆಗೆ ಎರಡು ಡಯಾಲಿಸೀಸ್ ಯಂತ್ರ ಹಸ್ತಾಂತರ, ಸಾಧಕರಿಗೆ ಸನ್ಮಾನ

0
310

ಸನ್ಮಾರ್ಗ ವಾರ್ತೆ

ಮಂಗಳೂರು: ಆರೋಗ್ಯ ಎನ್ನುವುದು ನಮಗೆ ಸಿಗುವ ದೊಡ್ಡ ಸೌಭಾಗ್ಯ. ಕುಟುಂಬದ ಸದಸ್ಯರ ಪೈಕಿ ಯಾರಾದರೊಬ್ಬರು ಕಿಡ್ನಿ ಸಮಸ್ಯೆಗಳಿಗೆ ತುತ್ತಾದರೆ ಬಡ ಹಾಗೂ ಮಧ್ಯಮ ವರ್ಗದವರು ಮನೆ, ಸೊತ್ತು, ಸಂಪತ್ತು ಕಳೆದುಕೊಳ್ಳುವುದನ್ನು ನಾವು ನೋಡುತ್ತೇವೆ. ಆದ್ದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಹೇಳಿದರು.

ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ವತಿಯಿಂದ ನಗರದ ಹೊಟೇಲ್ ಓಶಿಯನ್ ಪರ್ಲ್ ಸಭಾಂಗಣದಲ್ಲಿ ನಿನ್ನೆ ಸಂಜೆ ಆಯೋಜಿಸಿದ್ದ ಸ್ಮರಣ ಸಂಚಿಕೆ ಬಿಡುಗಡೆ, ಎರಡು ಡಯಾಲಿಸಿಸ್‌ ಯಂತ್ರ ಹಸ್ತಾಂತರ ಮತ್ತು ಸನ್ಮಾನ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಶಿಕ್ಷಣವು ಎಲ್ಲ ಸಮಸ್ಯೆಗಳಿಗೆ ಪರಿಹಾರ. ಅದು ಸಮಾಜದ ಆರ್ಥಿಕ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತಿದೆ. ಜಮೀಯ್ಯತುಲ್ ಫಲಾಹ್ ನಂತಹ ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ. ವಿದ್ಯಾರ್ಥಿಗಳಿಗೆ ನೀಡುವ ಸಣ್ಣ ಆರ್ಥಿಕ ಸಹಾಯ ಕೂಡ ಅವರ ಬದುಕಿಗೆ ನೆರವು ನೀಡುತ್ತದೆ ಎಂದು ಕಮಿಷನರ್ ಮೆಚ್ಚುಗೆ ವ್ಯಕ್ತಪಡಿಸಿದರು.

ದ.ಕ. ಮತ್ತು ಉಡುಪಿ ಜಿಲ್ಲಾ ಜಮೀಯ್ಯತುಲ್ ಫಲಾಹ್ ಸಂಸ್ಥೆಯ ಅಧ್ಯಕ್ಷ ಶಬೀ ಅಹ್ಮದ್ ಖಾಝಿ, ಜಮೀಯ್ಯತುಲ್ ಫಲಾಹ್ ಸಂಸ್ಥಾಪಕ ಮುಹಮ್ಮದ್ ಇಕ್ಬಾಲ್ ಯೂಸುಫ್ ಕೆನಡಾ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್‌ ನ ಅಧ್ಯಕ್ಷ ಎಸ್‌.ಎಂ.ರಶೀದ್ ಹಾಜಿ, ಎಕ್ಸ್‌ಪರ್ಟೈನ್ ಗ್ರೂಪ್ ಉಪಾಧ್ಯಕ್ಷ ಹಾಜಿ ಅಬ್ದುಲ್ ರಹೀಂ ಕರ್ನೀರೆ, ಅಲ್ ಮುಝೈನ್ ಗ್ರೂಪ್ ನ ಅಧ್ಯಕ್ಷ ಹಾಜಿ ಝಕರಿಯಾ ಜೋಕಟ್ಟೆ, ಬಾವಾ ಫಿಶ್ ಮೀಲ್‌ನ ಎಂ.ಡಿ. ಹಾಜಿ ರಿಯಾಝ್ ಬಾವ, ಆಝಾದ್ ಗ್ರೂಪ್ ಆಫ್ ಕಂಪಯ ಮುಖ್ಯಸ್ಥ ಮನ್ಸೂರ್ ಅಹ್ಮದ್ ಅಝಾದ್ ಉಪಸ್ಥಿತರಿದ್ದರು.

ಸಮಾರಂಭದಲ್ಲಿ ಖ್ಯಾತ ತಜ್ಞ ವೈದ್ಯ ಡಾ.ಜನಾರ್ದನ ಕಾಮತ್ ಅವರು ಕಿಡ್ನಿ ಕಾಯಿಲೆ ಬಗ್ಗೆ ಮಾಹಿತಿ ನೀಡಿದರು. ಬಿಪಿ ಹಾಗೂ ಸಕ್ಕರ ಕಾಯಿಲೆ ನಿಯಂತ್ರಣದಲ್ಲಿದ್ದರೆ ಕಿಡ್ನಿ ಕಾಯಿಲೆ ಸಮಸ್ಯೆಯಿಂದ ದೂರ ಇರಬಹುದು ಎಂದರು. ಇದೇ ವೇಳೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಅಸ್ಪತ್ರೆಗೆ ನೀಡಲಾದ ಎರಡು ಡಯಾಲಿಸಿಸ್ ಯಂತ್ರದ ಸಂಪೂರ್ಣ ದಾಖಲೆ ಪತ್ರವನ್ನು ಎಕ್ಸ್‌ಪರ್ಟೈನ್ ಗ್ರೂಪ್ ನ ಹಾಜಿ ಅಬ್ದುಲ್ ರಹೀಂ ಕರ್ನೀರೆಯವರಿಂದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಉದಯ ಕುಮಾರ್ ಸ್ವೀಕರಿಸಿದರು.

ಶಕ್ತಿ ನಗರದ ಸಾನಿಧ್ಯ ವಿಶೇಷ ಮಕ್ಕಳ ಶಾಲೆಯ ನಿರ್ದೇಶಕ ಡಾ.ವಸಂತ ಕುಮಾರ್ ಶೆಟ್ಟಿ, ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್ ಆಗಿ ಆಯ್ಕೆಯಾದ ಬದ್ರುನ್ನಿಸಾ, ಶಿಕ್ಷಣ ಕ್ಷೇತ್ರದ ಸಾಧಕರಾದ ಡಾ.ನಿಯಾಝ್ ಪಣಕಜೆ, ಸಿ.ಎ. ಪ್ರಥಮ ರ‌್ಯಾಂಕ್ ವಿಜೇತೆ ಮಂಗಳೂರಿನ ರುತ್ ಕ್ಲೇರ್ ಡಿಸಿಲ್ವ, ಆಯುರ್ವೇದ ಶಿಕ್ಷಣದಲ್ಲಿ ರ‌್ಯಾಂಕ್ ವಿಜೇತೆ ಡಾ.ರಿಫಾಮ್: ರೋಶನಾರ, ಸಿ.ಎ. ಪರೀಕ್ಷೆಯಲ್ಲಿ ರ‌್ಯಾಂಕ್ ವಿಜೇತ ಮುಹಮ್ಮದ್ ತಾಬಿಶ್ ಹಸನ್, ಐಐಟಿ ಮದ್ರಾಸಿಗೆ ಆಯ್ಕೆಯಾದ ಶೇಖ್ ಮುಹಮ್ಮದ್ ಝುನೈನ್ ಸೇರಿದಂತೆ ಏಳು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಮೀಯ್ಯತುಲ್ ಫಲಾಹ್ ಮಂಗಳೂರು ನಗರ ಘಟಕದ ಅಧ್ಯಕ್ಷ ಹಾಜಿ ಅಬೂಬಕರ್ ಸಿದ್ದೀಕ್ ರವರು ಇದೇ ಸಂದರ್ಭದಲ್ಲಿ ಸಾನಿಧ್ಯ ವಿಶೇಷ ಮಕ್ಕಳ ಶಾಲೆಗಾಗಿ 50,000 ರೂಪಾಯಿಯ ಚೆಕ್ ಅನ್ನು ನಿರ್ದೇಶಕ ಡಾ.ವಸಂತ ಕುಮಾರ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು.

ಸ್ಮರಣ ಸಂಚಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಘಟಕದ ಕಾರ್ಯದರ್ಶಿ ನಝೀರ್ ಅಹ್ಮದ್‌ ನಿರ್ವಹಿಸಿದರು. ರಫೀಕ್ ಮಾಸ್ಟರ್ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.